“ಬೆಂಕಿ‌ ಮನೆ ಕಳ್ಳರು” !! (ಭಾಗ – 13) [ ಕೊನೇಯ ಅಧ್ಯಾಯ ]

ಪೋಲೀಸರು ರಾತ್ರೋ ರಾತ್ರಿ ಹನ್ನೆರಡು ಕಳ್ಳರನ್ನು ಹಿಡಿದ್ದಿದ್ದಾಯಿತು. ಎಲ್ಲಾ ಕಳ್ಳತನದ ಹಿಂದಿದ್ದ ಬುದ್ಧಿವಂತ ತಲೆಯ ಹದಿಮೂರನೇಯ ಕಳ್ಳ ಹೊರಗೇ ಉಳಿದಿದ್ದ. ಬೆಂಕಿಯಲ್ಲಿ ಹೊತ್ತಿ ಉರಿದ ಮನೆಯ ಚಿತ್ರಣ, ಎಸ್.ಐ ಅವರ ತಾಳ್ಮೆಯನ್ನು ‌ಕಿತ್ತಸೆದಿತ್ತು. ಬೆಳಗ್ಗೆ ಆಗುತ್ತಲೇ ಪೋಲೀಸ್ ಸ್ಟೇಷನ್ ನಲ್ಲಿ ತನಿಖೆ ಶುರುವಾಗಿತ್ತು. ಈ‌ ಹಿಂದೆ ಪೋಲೀಸರು, ಅಡಿಕೆ ಕಳ್ಳರೆಂದು ಭಾವಿಸಿ ಹಿಡಿದಿದ್ದ‌ ಬೇರೆ ಕಳ್ಳರಿಂದಾಗಿ ಎಲ್ಲಾ ಪೋಲೀಸರು ತಲೆ ತಗ್ಗಿಸುವಂತಾಗಿತ್ತು ಹಾಗೂ ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ‌ ನೀಡಲಾಗದೇ ಎಸ್.ಐ ಮುಖಭಂಗವನ್ನು ಅನುಭವಿಸಿದ್ದರು. ಇದೇ ಕಾರಣಕ್ಕೆ, ಎಸ್.ಐ ಹಾಗೂ ಅವರ ತಂಡ ಹಿಡಿದ ಈ ಹನ್ನೆರಡು ಜನರು ಅದೇ ಅಡಿಕೆ ಕಳ್ಳರೆಂದು ಸಾಭೀತಾಗುವವರೆಗೂ ಇದರಲ್ಲಿ ನಾವು ಯಾವುದೇ‌ ನಿರ್ಧಾರಕ್ಕೆ ಬರುವುದು ಬೇಡ ಎಂದು ಮೇಲಾಧಿಕಾರಿಗಳು ತೀರ್ಮಾನಿಸಿದ್ದರು‌. ಊರಿನ ಜನರೂ ಕೂಡ ಈ ಪೋಲೀಸರಿಗೆ ಆ ಕಳ್ಳರು ಸಿಗುವುದೇ‌ ಇಲ್ಲವೆಂದು ತೀರ್ಮಾನಿಸಿ‌ ಸುಮ್ಮನಾಗಿದ್ದರು.‌ ಆದರೆ‌ ಕಾಫಿ ಕೃಷ್ಣಪ್ಪ ಮಾತ್ರ ಪೋಲೀಸರ ಮೇಲೆ ನಂಬಿಕೆ‌ ಇಟ್ಟು ಅವರ ತನಿಖೆಗೆ ಸಹಾಯ ಮಾಡುತ್ತಿದ್ದನು.

ಇನ್ನೇನು ಬೆಳಕು ಮೂಡಲು ಕೆಲವೇ ಸಮಯ ಇರುವಾಗಲೇ, ಸ್ಟೇಷನ್ಗೆ ಬಂದ ರಂಗಪ್ಪಸ್ವಾಮಿಯನ್ನು ನೋಡಿದ ಕಳ್ಳರು..‌“ನಮಗೆ ಮೋಸ ಮಾಡಿದ್ದೇ ಇವನು ಎಂದು ತಮ್ಮಲ್ಲೇ ಮಾತನಾಡಿಕೊಂಡರು. ಅವರ ಬಳಿಗೆ ಹೋದ ರಂಗಪ್ಪಸ್ವಾಮಿ, ಅವರ ಮನವೊಲಿಸಿ ಇನ್ನೂ ಒಂದಿಷ್ಟು ಹಣ ಕೊಡುವುದಾಗಿ ಹೇಳಿ, ಈ ಕಳ್ಳತನದಲ್ಲಿ ನನ್ನ ಹೆಸರನ್ನು ಎಲ್ಲಿಯೂ ಹೇಳದ ಹಾಗೆ ನೀವೇ ಮಾಡಿದ್ದಾಗಿ ಒಪ್ಪಿಕೊಂಡರೆ,‌ ಶಿಕ್ಷೆ ಕಡಿಮೆ ಆಗುವಂತೆ ಮಾಡುವುದಾಗಿ ಹೇಳಿದ ಮೇಲೆ ಆ ಕಳ್ಳರು ಒಪ್ಪಿಕೊಂಡರು.” ಹಾಗೆಯೇ ಇನ್ನೂ ಒಂದು ಬೇಡಿಕೆಯನ್ನು ಹೊರಗಿಟ್ಟರು. “ತಮ್ಮ ನಾಯಕನ ಪೋಟೋವನ್ನು ಕೊಟ್ಟು ನಮ್ಮ ಗುಂಪಿನ ನಾಯಕ ಹೊರಗೇ ಉಳಿದಿದ್ದಾನೆ !! ಅವನನ್ನು ಹುಡುಕಿ ಅವನಿಗೆ ಈ ವಿಷಯನ್ನು ತಿಳಿಸಿ, ನಾವು ಶಿಕ್ಷೆ ಮುಗಿಸಿ ಬರುವವರೆಗೂ ಅವನನ್ನು ನಿಮ್ಮೊಂದಿಗೇ ಇಟ್ಟುಕೊಳ್ಳಿ” ಎಂಬ ಮಾತಿಗೆ ರಂಗಪ್ಪಸ್ವಾಮಿ ಒಪ್ಪಿಕೊಂಡನು.

ಈ ಇನ್ನೊಬ್ಬ ಕಳ್ಳನು ಹೊರಗೇ ಉಳಿದ ವಿಷಯ ರಂಗಪ್ಪಸ್ವಾಮಿ, ಎಸ್.ಐ ಮತ್ತು ಹೆಡ್ ಕಾನ್ಸ್ ಟೇಬಲ್ ಈ ಮೂವರಿಗೆ ಹೊರತು ಇನ್ಯಾರಿಗೂ ಗೊತ್ತಾಗಲೇ ಇಲ್ಲ. ಬೆಳಗ್ಗೆ ಆದ ನಂತರ ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ ಮತ್ತು ರಂಗಪ್ಪಸ್ವಾಮಿಯ‌ ಆ ಇನ್ನೊಬ್ಬ ಕಳ್ಳನಿಗಾಗಿ ಹುಡುಕಾಟ ಆರಂಭಿಸಿದರು. ಎಸ್.ಐ ಜಗದೀಶ್ ಅವರು ಮೇಲ್ನೋಟಕ್ಕೆಂಬಂತೆ ಸ್ಟೇಷನ್ ನಲ್ಲಿದ್ದ ಕಳ್ಳರಿಗೆ ತನಿಖೆ ಶುರುಮಾಡಿ, ಅವರ ಹೇಳಿಕೆಗಳನ್ನು ಪಡೆದರು. ತನಿಖೆಗೆ ಹೆಚ್ಚಿಗಿನ ಕೆಲಸವನ್ನು ಕಳ್ಳರು‌ ಕೊಡಲಿಲ್ಲ. “ನಾವೇ ಈ ಕಳ್ಳತನವನ್ನು ಮಾಡಿದ್ದೇವೆಂದು‌ ಒಪ್ಪಿಕೊಂಡರು !!”. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ…..‌ ಎಸ್.ಐ ಅವರ ತಂಡದಲ್ಲಿ‌ ಹೊರಗಿನವರು ಇರಲಿಲ್ಲ. ಅಲ್ಲದೇ ಈ‌ ಕಳ್ಳರಿಗೆ, ಹೇಗೆ ನೀವು ಅಡಿಕೆ ಕಳ್ಳತನವನ್ನು ಮಾಡಿ ಯಶಸ್ವಿಯಾದಿರಿ ?? ಯಾರು ಸಹಾಯವನ್ನು ಮಾಡಿದರು ?? ಎಂಬ ಈ‌ ರೀತಿಯ ಪ್ರಶ್ನೆಗಳನ್ನು ಪೋಲೀಸರು ಕೇಳಲೇ ಇಲ್ಲ‌. ಏಕೆಂದರೆ‌‌ ಇದಕ್ಕೆಲ್ಲ ಕಾರಣ ಮತ್ತು ಸಹಾಯ‌ ಮಾಡಿದವನೇ ರಾಜಕಾರಣಿ ರಂಗಪ್ಪಸ್ವಾಮಿ. ಆತನೇ ಪೋಲೀಸರಿಗೆ ಸಹಾಯ‌ ಮಾಡಿದ್ದರಿಂದ ರಂಗಪ್ಪಸ್ವಾಮಿಯ ಹೆಸರು ಇದರಲ್ಲಿ ಬರದ ಹಾಗೆ ಎಸ್.ಐ ತಡೆದರು.

ಸಂಜೆ ಆಗುತ್ತಿದ್ದಂತೆ ಮೇಲಾಧಿಕಾರಿಗಳು ಸ್ಟೇಷನ್ಗೆ ಆಗಮಿಸಿ ಎಸ್‌.ಐ ಮತ್ತು ಅವರ ತಂಡದವರಿಗೆ ಶುಭಾಶಯಗಳನ್ನು ಕೋರಿದರು. ಅನಲನಗರದ ಪ್ರತಿಯೊಬ್ಬ ಸಾರ್ವಜನಿಕರಿಂದ ಹಿಡಿದು ಊರಿಗೆ ಸಂಬಂಧಪಟ್ಟ ಎಂ.ಎಲ್.ಎ ಅವರಿಂದಲೂ ಎಸ್.ಐ ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ವಲ್ಪ ಸಮಯದಲ್ಲೇ ಎಲ್ಲಾ ಪತ್ರಕರ್ತರಿಂದ ಪತ್ರಿಕಾ ಗೋಷ್ಟಿಯೂ ನಡೆಯಿತು. ಎಲ್ಲಿಯೂ ರಂಗಪ್ಪಸ್ವಾಮಿಯ ಹೆಸರು ಹೊರಬರದ ಹಾಗೆ ಎಸ್.ಐ ಎಲ್ಲವನ್ನೂ ನಿಭಾಯಿಸಿ, ಪತ್ರಕರ್ತರ ಕೆಲವು ಪ್ರಶ್ನೆಗಳಿಗೆ ಯಶಸ್ವಿಯಾಗಿ ಉತ್ತರಿಸಿದರು. “ಊರಿನ ಆಗುಹೋಗುಗಳ ವಿಷಯವನ್ನು ಹೇಳಿ ತನಿಖೆಗೆ ಸಹಾಯ ಮಾಡಿದ ಕಾಫಿ ಕೃಷ್ಣಪ್ಪ ಮತ್ತು ಎಲ್ಲಾ ರೀತಿಯಲ್ಲಿ ಸಹಕರಿಸಿದ ರಾಜಕಾರಣಿ ರಂಗಪ್ಪಸ್ವಾಮಿಯ ಹೆಸರನ್ನು ಎಸ್.ಐ ಎತ್ತಿ ಹಿಡಿದರು. ಇದರಿಂದಾಗಿ ಊರಿನಲ್ಲಿ ರಂಗಪ್ಪಸ್ವಾಮಿಯ ರಾಜಕೀಯ ಜೀವನದ ಹೊಸ ಅಧ್ಯಾಯದ ಮೊದಲ ಪುಟಕ್ಕೆ ನಾಂದಿಯಾಯಿತು”.

ಮಾರನೇಯ ದಿನ ಕೋರ್ಟಿನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ ಕಳ್ಳರು ನಾವು ಜಡ್ಜ್ ಎದುರು ರಂಗಪ್ಪಸ್ವಾಮಿಯ ಹೆಸರು ಹೇಳಬಾರದೆಂದರೆ ನಮ್ಮ‌‌ ಗುಂಪಿನ‌ ನಾಯಕನನ್ನು ಹುಡುಕಿ ಅವನಿಗೆ ವಿಷಯ ತಿಳಿಸಿ‌ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು‌ ಹೇಳಿದ್ದರಿಂದ, ಕತ್ತಲೆ ಆದರೂ ಆತ ಸಿಗದೇ ಇರುವುದು ಎಸ್.ಐ ಗೆ ದೊಡ್ಡ ಚಿಂತೆಯಾಗಿತ್ತು. ಬೆಳಗ್ಗೆಯಾದರೆ ಕೋರ್ಟಿನಲ್ಲಿ ವಿಚಾರಣೆ, ಆದರೆ ಇನ್ನೂ ಕಳ್ಳರ ಗುಂಪಿನ‌ ನಾಯಕ ಸಿಕ್ಕಿರಲಿಲ್ಲ. ರಾತ್ರಿಯಿಡೀ ಎಸ್.ಐ, ಹೆಡ್ ಕಾನ್ಸ್ ಟೇಬಲ್ ಹಾಗೂ ರಂಗಪ್ಪಸ್ವಾಮಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಕತ್ತಲು ಕರಗಿ ಬೆಳಕು ಸರಿಯಾಗಿ ಹರಡುವ ಮೊದಲೇ ಕಾಫಿ‌‌ ಕೃಷ್ಣಪ್ಪ ಹೋಟೆಲ್ ತೆರೆದಿದ್ದನು. ರೈಲಿನ‌ ಪ್ರಯಾಣಿಕರು ಕೆಲವರು ಕಾಫಿ‌ ಕುಡಿಯುತ್ತಾ ನಿಂತಿದ್ದರು. ರಂಗಪ್ಪಸ್ವಾಮಿಯ ಕಾರಿನಲ್ಲಿ ಕುಳಿತು ಹೋಟೆಲ್ ಕಡೆಗೇ ನೋಡುತ್ತಿದ್ದ ಎಸ್.ಐ ಅವರಿಗೆ, ಕಳ್ಳರು‌ ಕೊಟ್ಟಿದ್ದ ಪೋಟೋದಲ್ಲಿದ್ಸ ವ್ಯಕ್ತಿ ಅಂದರೆ ಅದೇ ಕಳ್ಳರ ನಾಯಕ ಅಲ್ಲೇ ಕಾಫಿ ಕುಡಿಯುತ್ತ ನಿಂತಿದ್ದನ್ನು ಕಂಡು, ನಿಟ್ಟುಸಿರು ಬಿಟ್ಟರು…..!! ಕಳ್ಳರ ನಾಯಕನನ್ನು ಭೇಟಿಯಾಗಿ, ಎಲ್ಲವನ್ನೂ ವಿವರಿಸಿದರು.

ಅಂತೂ ಎಲ್ಲಾ ಒದ್ದಾಟಗಳ ನಂತರ ಕೋರ್ಟಿನ ಸಮಯ ಬಂದಿತ್ತು. ಉಳಿದ ಕಳ್ಳರು ಕಟಕಟೆಯಲ್ಲಿ ನಿಂತಿದ್ದರೆ, ಆಚೆಗೆ ರಂಗಪ್ಪಸ್ವಾಮಿಯ ಜೊತೆ ಇದ್ದ “ಆ ಗುಂಪಿನ‌ ಕಳ್ಳ ನಾನು ಏನೂ ತೊಂದರೆ ಇಲ್ಲದೇ ಅರಾಮಾಗಿದ್ದೇನೆಂದು ಸನ್ನೆಯ ಮೂಲಕವೇ ಹೇಳಿದಾಗ”, ಜಡ್ಜ್ ಎದುರು‌ ಉಳಿದ ಕಳ್ಳರು ತಪ್ಪೊಪ್ಪಿಕೊಂಡರು. “ಕದ್ದ  ಮಾಲುಗಳಿಂದ ಯಾವುದೇ ನಷ್ಟವಾಗದೇ ಎಲ್ಲವೂ ಮಾಲೀಕರ ಕೈ ಸೇರಿದ್ದರಿಂದ ಕಳ್ಳತನದ ಆರೋಪ ಹಾಗೂ ಜೀಪ್ ಮತ್ತು ಮನೆಗಳಿಗೆ ಬೆಂಕಿಹಚ್ಚಿದ ಆರೋಪ.. ಈ ಎಲ್ಲವನ್ನೂ ತಾವೇ ಮಾಡಿದ್ದೇವೆಂದು ಕಳ್ಳರು ಒಪ್ಪಿಕೊಂಡಿದ್ದರಿಂದ ಕೆಲವೇ ಕೆಲವು ವರ್ಷಗಳ‌ ಶಿಕ್ಷೆ ಹಾಗೂ‌ ನಷ್ಟದ ದಂಡವನ್ನು ನ್ಯಾಯಾಲಯ ಆದೇಶಿಸಿತು !!”.

ಇದಾಗಿ ಕೆಲವು ತಿಂಗಳುಗಳ ನಂತರ ಹೆಡ್ ಕಾನ್ಸ್ ಟೇಬಲ್ ಈರಪ್ಪಣ್ಣ ನೆಮ್ಮದಿಯಿಂದ ನಿವೃತ್ತಿ ಪಡೆದರು. ಎಲ್ಲರಿಂದಲೂ‌ ಮೆಚ್ಚುಗೆಗೆ ಪಾತ್ರನಾಗಿದ್ದ ರಾಜಕಾರಣಿ ಈರಪ್ಪಣ್ಣ ಆ ಊರಿನ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದನು. ಕಳ್ಳರ ಗುಂಪಿನ‌ ನಾಯಕನೇ ಅವನ ಬಲಗೈ ಬಂಟನಾಗಿದ್ದನು.

ಸುಮಾರು‌ ವರ್ಷಗಳ ನಂತರ ಇದೇ ರಾಜಕಾರಣಿ ರಂಗಪ್ಪಸ್ವಾಮಿ ಅದೇ ತಾಲೂಕಿನ ಎಂ.ಎಲ್.ಎ ಆದನು. ಜೈಲಿನಲ್ಲಿದ್ದ ಕಳ್ಲರು‌‌ ಸದ್ದಿಲ್ಲದೇ ಬಿಡುಗಡೆಯಾದರು. ರಂಗಪ್ಪ ಸ್ವಾಮಿಯ ಸಹಾಯದಿಂದ‌‌ ಊರಿನಾಚೆಗಿನ ದೊಡ್ಡ ಪಟ್ಟಣದಲ್ಲಿ ಕಾಫಿ‌ ಕೃಷ್ಣಪ್ಪ ಒಂದು‌‌ ದೊಡ್ಡ ಹೋಟೆಲ್ಲಿನ ಮಾಲೀಕನಾದನು. ಎಂ.ಎಲ್.ಎ ರಂಗಪ್ಪಸ್ವಾಮಿಯ ಆಪ್ತ ಹಾಗೂ ಬಲಗೈ ಬಂಟನಾಗಿದ್ದ ಕಳ್ಳರ ನಾಯಕನು, ಅದೇ ಪಟ್ಟಣದಲ್ಲಿ  ಒಂದು ದೊಡ್ಡ ಪೆಟ್ರೋಲ್ ಬಂಕ್ ನಿರ್ಮಿಸಿ, ಅದನ್ನು ಉಳಿದ ಹನ್ನೆರಡು‌ ಕಳ್ಳರಿಗೆ ನೋಡಿಕೊಳ್ಳಲು ಬಿಟ್ಟನು. ಹಿಂದೆ ಈ ತನಿಖೆಯ ತಂಡದಲ್ಲಿದ್ದ ಉಳಿದ ಎಲ್ಲಾ ಪೋಲೀಸರು ಒಳ್ಳೆಯ‌ ಉನ್ನತ ಸ್ಥಾನಕ್ಕೆ ಸೇರಿಕೊಂಡರು. ಎಸ್.ಐ ಜಗದೀಶ್ ಅವರು ಒಂದೊಳ್ಳೆಯ ಉನ್ನತ ಹಾಗು ದೊಡ್ಡ ಮಟ್ಟದ ಪೋಲೀಸ್ ಅಧಿಕಾರಿಯಾದರು.‌

“ಹೀಗೆ ಎಲ್ಲವನ್ನೂ ಎಲ್ಲಿಯೂ ಹೊರಗೆ ವಿಷಯ ಗೊತ್ತಾಗದ ಹಾಗೆ ನಿಭಾಯಿಸಿದ‌ ಎಂ.ಎಲ್.ಎ ರಂಗಪ್ಪಸ್ವಾಮಿ ಮತ್ತು‌ ದೊಡ್ಡ ಪೋಲೀಸ್ ಅಧಿಕಾರಿ ಜಗದೀಶ್ ಅವರು, ಈಗಲೂ ಎಲ್ಲರ ಮೇಲೆಯೂ ಒಂದು ಕಣ್ಣಿಟ್ಟು, ಅವರವರ ಕ್ಷೇತ್ರದ ಕೆಲಸದಲ್ಲಿ ಯಶಸ್ವಿಯಾಗಿ ಕಾರ್ಯ‌ ನಿರ್ವಹಿಸುತ್ತಿದ್ದಾರೆ..!!”

( ಕಾದಂಬರಿ ಇಲ್ಲಿಗೆ ಮುಕ್ತಾಯವಾಗಿದೆ.. )

                                        — ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

“ಒಟ್ಟಾರೆ 13 ಭಾಗಗಳನ್ನೊಳಗೊಂಡ ‘ಬೆಂಕಿ‌ ಮನೆ‌‌‌ ಕಳ್ಳರು’ ಕಾದಂಬರಿಯು ಇಂದಿಗೆ ಮುಕ್ತಾಯಗೊಂಡಿದೆ. ಇಷ್ಟು ದಿನ ಓದಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ರತಿ ಭಾಗವನ್ನೂ ಓದುತ್ತಾ, ಮೆಚ್ಚುಗೆಯ ಮಾತುಗಳನ್ನಾಡುತ್ತಾ, ಅಭಿಪ್ರಾಯ‌ ತಿಳಿಸುತ್ತಾ ಹಾಗೆಯೇ ಎಲ್ಲರೊಂದಿಗೂ ಹಂಚಿಕೊಂಡು ಎಲ್ಲಾ ರೀತಿಯಲ್ಲೂ‌ ಪ್ರೀತಿ ನೀಡಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಅನಂತಾನಂತ ಧನ್ಯವಾದಗಳು !!”

                                       — ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: