“ಬೆಂಕಿ‌ ಮನೆ ಕಳ್ಳರು” !! (ಭಾಗ – 12)

“ಬೆಂಕಿ‌ ಮನೆ ಕಳ್ಳರು” !!
( Part – 12 )

ಪೋಲೀಸರ ಯೋಜನೆಯು ಎಸ್.ಐ ಜಗದೀಶ್ ಅಂದುಕೊಂಡಂತೆ ಆಗದಿದ್ದರೂ… ಸಂಪೂರ್ಣವಾಗಿ ‌ಕೈ ಮೀರಿ‌ ಹೋಗದ ಹಾಗೆ, ಪೋಲೀಸರ ಹೋರಾಟದಿಂದ ಗೆದ್ದು ಬೀಗಿತ್ತು. ಇಬ್ಬರು ಕಳ್ಳರನ್ನು ಹಿಡಿದ ಪೊಲೀಸರಿಗೆ ಲಾರಿಯಲ್ಲಿದ್ದ ಉಳಿದ‌‌‌ ಕಳ್ಳರನ್ನು‌‌ ಹಿಡಿಯಲು‌ ಆಗಲಿಲ್ಲ.‌ ಲಾರಿ‌ ಗುದ್ದಿದ್ದ ರಭಸಕ್ಕೆ ರಸ್ತೆಯ ಕೆಳಗಿನ ಗದ್ದೆಗೆ ಉರುಳಿದ್ದ, ಆಟೋದಲ್ಲಿದ್ದ ಎಸ್.ಐ ಸಣ್ಣಪುಟ್ಟ ಗಾಯದ ಜೊತೆಗೆ ದೊಡ್ಡ ಅನಾಹುತದಿಂದ‌ ಪಾರಾಗಿದ್ದರು. ಕಳ್ಳರು ತಲೆಗೆ ಕಲ್ಲಿನಲ್ಲಿ ‌ಹೊಡೆದಿದ್ದರಿಂದ ಸ್ವಲ್ಪ ಮಟ್ಟಿಗೆ ಪೆಟ್ಟಾಗಿದ್ದ ರಂಗಪ್ಪಸ್ವಾಮಿಗೆ ಸರಿಯಾದ ಸಮಯಕ್ಕೆ ‌ಚಿಕಿತ್ಸೆ  ಕೊಡಿಸಿದರು. ಇಡೀ ರಾತ್ರಿ ಊರಿನ ತುಂಬೆಲ್ಲಾ‌ ಹುಡುಕಾಟ ನಡೆಸಿದರೂ ಉಳಿದ ಕಳ್ಳರು‌ ಸಿಗಲಿಲ್ಲ. ಅಡಿಗಿಸಿಟ್ಟ ಲಾರಿ ಪೋಲೀಸರಿಗೆ ಸಿಕ್ಕಿತ್ತು‌ ಆದರೆ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಬೆಳಗ್ಗೆಯ ಹೊತ್ತಿಗೆ ಪೋಲೀಸರು, ರಂಗಪ್ಪಸ್ವಾಮಿ ‌ಮತ್ತು ಸಿಕ್ಕಿಬಿದ್ದಿದ್ದ ಉಳಿದ ಕಳ್ಳರ ಸಮೇತ ತಮ್ಮ ಊರು ಅನಲನಗರಕ್ಕೆ ಬಂದರು‌. ಪೋಲೀಸ್ ಸ್ಟೇಷನ್ಗೆ ಕರೆದೊಯ್ಯದೇ, ಆ ಇಬ್ಬರು ಕಳ್ಳರನ್ನು ರಂಗಪ್ಪಸ್ವಾಮಿಯ ತೋಟದ ಮನೆಯಲ್ಲಿ ಪೋಲೀಸರ ಕಣ್ಗಾವಲಿನಲ್ಲಿ ಇರಿಸಿದರು.

ತಮ್ಮ‌ ಗುಂಪಿನ‌ ಇಬ್ಬರನ್ನು ಪೋಲೀಸರು ಮೋಸದಿಂದ ಕರೆದೊಯ್ದು ಸ್ಟೇಷನ್ ನಲ್ಲಿ ಇರಿಸದೇ, ಬೇರೆಲ್ಲೋ ಅಡಗಿಸಿದ್ದಾರೆ.. ಎಂಬುದನ್ನು ತಿಳಿದುಕೊಂಡಿದ್ದ ಉಳಿದ‌ ಕಳ್ಳರು ಸಿಟ್ಟಾಗಿದ್ದರು. ಇದುವರೆಗೂ ಅಡಿಕೆ ಕಳ್ಳರು ಎಂದು ಕರೆಸಿಕೊಳ್ಳುತ್ತಿದ್ದವರು… “ಬೆಂಕಿ ಮನೆ ಕಳ್ಳರು” ಎಂದು ಬದಲಾಗಿ ಹೊಸ ಇತಿಹಾಸದ ಸೃಷ್ಟಿಗೆ ಕಾರಣರಾಗುತ್ತಾರೆಂದು ಯಾವೊಬ್ಬ ಪೋಲೀಸರೂ ಊಹಿಸಿರಲಿಲ್ಲ. ಇದೇ ದಿನ ಸಂಜೆ ಎಸ್.ಐ ಹಾಗೂ ರಂಗಪ್ಪಸ್ವಾಮಿ ಮತ್ತು ಉಳಿದ ಪೋಲೀಸರು ರಂಗಪ್ಪಸ್ವಾಮಿಯ ತೋಟದ ಮನೆಯಲ್ಲಿ, ತಲೆ ಮರೆಸಿಕೊಂಡಿದ್ದ ಉಳಿದ ಕಳ್ಳರ ಬಗ್ಗೆ ತಿಳಿದುಕೊಳ್ಳಲು ಸಿಕ್ಕಿಬಿದ್ದಿದ್ದ ಇಬ್ಬರು ಕಳ್ಳರನ್ನು ವಿಚಾರಿಸುತ್ತಿದ್ದರು. ಇದೇ ವೇಳೆಗೆ ಆ‌ ಊರಿಗೆ‌‌‌‌ ಉಳಿದ ಕಳ್ಳರ ಆಗಮನವಾಗಿತ್ತು. ಅದರ ಸಂಕೇತವೆಂಬಂತೆ “ಊರಿನಿಂದ ಸ್ವಲ್ಪ ದೂರದಲ್ಲಿ ಎಸ್.ಐ ಅವರು ವಾಸಿಸುತ್ತಿದ್ದ ಮನೆ ಬೆಂಕಿ‌ ಹೊತ್ತಿ ಉರಿಯುತ್ತಿತ್ತು‌…!!”

ಮನೆಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ.. “ಇಬ್ಬರು ಕಳ್ಳರನ್ನು ರಂಗಪ್ಪಸ್ವಾಮಿಯ ತೋಟದ ಮನೆಯಿಂದ ಬೇರೆ ಕಡೆ ಬಿಡಲು‌” ಹೇಳಿದ ಎಸ್.ಐ… ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣನವರ ಜೊತೆಗೆ ಬೆಂಕಿಯಿಂದ ಮುಚ್ಚಿಹೋದ ತಮ್ಮ ಮನೆಯನ್ನು ಉಳಿಸಲು ಓಡಿದರು.‌ ಎಸ್.ಐ ತಮ್ಮ ಮನೆ ಬಳಿಯಲ್ಲಿ ಬೆಂಕಿ ನಂದಿಸುವ ಕೆಲಸದಲ್ಲಿದ್ದರು.‌ ಈ‌‌ ಕಡೆ‌ ಉಳಿದ ಪೋಲೀಸರು ತೋಟದ ಮನೆಯಿಂದ ಕಳ್ಳರನ್ನು ಬೇರೆಡೆ ಕರೆದುಕೊಂಡು ಹೊರಟರು. ತೋಟದ ಮನೆ ಖಾಲಿಯಾಗಿತ್ತು. ರಾತ್ರಿಯ ವೇಳೆ ರಂಗಪ್ಪಸ್ವಾಮಿ ಎಸ್‌.ಐ ಅವರ ಬೆಂಕಿಗೆ ಆಹುತಿಯಾಗಿದ್ದ ಮನೆಯ‌ ಬಳಿ ಹೋಗಿ ಮಾತನಾಡುತ್ತಿದ್ದರೆ…. “ಈ ಕಡೆ ಖಾಲಿಯಾದ ರಂಗಪ್ಪಸ್ವಾಮಿಯ ತೋಟದ ಮನೆ ಕಳ್ಳರು ಹಚ್ಚಿದ್ದ ಬೆಂಕಿಯಲ್ಲಿ ಮುಳುಗಿ ಹೋಗಿತ್ತು !!”

ತೋಟದ ಮನೆಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ರಂಗಪ್ಪಸ್ವಾಮಿ ಗಾಬರಿಯಿಂದ ಮನೆಯ ಕಡೆಗೆ ಹೊರಟನು. ಕಳ್ಳರ ಗುಂಪಿನ ಇಬ್ಬರನ್ನು ನಾವು ಪೋಲೀಸರು ಮೋಸದಿಂದ ಹಿಡಿದ ಪರಿಣಾಮವಾಗಿ, ಉಳಿದ ಕಳ್ಳರು ಹೀಗೆ ಬೆಂಕಿ ಹಂಚಿ ತಮ್ಮ ಸೇಡನ್ನು ಭಯಾನಕವಾಗಿ ತೀರಿಸಿಕೊಳ್ಳುತ್ತಿದ್ದಾರೆಂದು ರಂಗಪ್ಪಸ್ವಾಮಿಗೂ ಮತ್ತು ಪೋಲೀಸರಿಗೂ ಗೊತ್ತಾಗಿತ್ತು. ಊರಿನ ತುಂಬಾ ರಾತ್ರಿಯಿಡೀ..  “ಅಡಿಕೆ ಕಳ್ಳರು ಮತ್ತೆ ಬಂದು ಮನೆ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ. ಅಡಿಕೆ ಕಳ್ಳರೋ.. ಬೆಂಕಿ ಮನೆ ಕಳ್ಳರೋ ಇವರು !!” ಎಂಬ ವಿಷಯ ಊರಿನವರ ಬಾಯ್ತುಂಬಾ‌ ಬಿಸಿ ಬಿಸಿ ವಿಷಯವಾಗಿ.. ಎಲ್ಲೆಡೆ ಭಯ ಆಕ್ರಮಿಸಿತ್ತು.

ಎಸ್.ಐ ಜಗದೀಶ್ ಗೆ ಕಳ್ಳರ ಈ ಬೆಂಕಿ ಹಚ್ಚುವ ಕೆಲಸ, “ಅವರ ಹುಚ್ಚುತನ ಎಂಬಂತೆ ಕಾಣಿಸಲಿಲ್ಲ.. ಬದಲಾಗಿ ತಮ್ಮ‌ ಗುಂಪಿನ ಇಬ್ಬರನ್ನು ನಾವು ಪೋಲೀಸರು ವಶಪಡಿಸಿಕೊಂಡು ಮುಚ್ಚಿಟ್ಟಿದ್ದರಿಂದ, ತಮ್ಮವರನ್ನು ಕಳೆದುಕೊಂಡಿದ್ದಕ್ಕಾಗಿ ಅವರು ಅನುಭವಿಸುವ ಯಾತನೆಯ ಪ್ರತಿಬಿಂಬವಾಗಿ.. ತಮ್ಮವರನ್ನು ಹಿಡಿಯಲು ಸಂಬಂಧಿಸಿದವರ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ” ಎಂಬುದು ಎಸ್.ಐ ಗೆ ಅರಿವಾಗಿತ್ತು. ಸ್ವಲ್ಪವೂ ತಡಮಾಡದೇ ಪೋಲೀಸರನ್ನು ರಕ್ಷಣೆಗೆ ಹೆಡ್ ಕಾನ್ಸ್‌ಟೇಬಲ್ ಮನೆಗೆ ಕಳುಹಿಸಿದರು. ಇನ್ನೇನು ಹೆಡ್ ಕಾನ್ಸ್‌ಟೇಬಲ್ ಮನೆಗೆ ಬೆಂಕಿ ಹಚ್ಚಬೇಕು ಅನ್ನುವಷ್ಟರಲ್ಲಿ.. ಪೋಲೀಸರನ್ನು ನೋಡಿ ಬೆಂಕಿ ಹಚ್ಚಲು ಬಂದಿದ್ದ ಕಳ್ಳರು ಗಾಬರಿಯಲ್ಲಿ ಅಲ್ಲಿಂದ ಕಾಲ್ಕಿತ್ತರು.

ಈ ಗಲಾಟೆಯಲ್ಲಿ, ತನ್ನ ಹೋಟೆಲ್ ಗೆ ಬೆಂಕಿ ಬಿದ್ದರೇನು ಕಥೆ ಎಂದು ಹೆದರಿದ ಕಾಫಿ ಕೃಷ್ಣಪ್ಪ ಆ ರಾತ್ರಿ ಹೋಟೆಲ್ ಬಿಟ್ಟು ಮನೆ ಕಡೆ ಹೋಗಲೇ ಇಲ್ಲ. ಒಂದು ಕಡೆ ಪೋಲೀಸರ ಮನೆಗೆ ರಕ್ಷಣೆ ಕೊಡುವ ಕೆಲಸ ಎಸ್.ಐ ಮಾಡುತ್ತಿದ್ದರೆ, ಇನ್ನೊಂದು ಕಡೆ ವಶಪಡಿಸಿಕೊಂಡ ಇಬ್ಬರು ಕಳ್ಳರನ್ನು ಮುಚ್ಚಿಡಲಾಗದೇ ಜೀಪಿನಲ್ಲಿರಿಸಿಕೊಂಡಿದ್ದ ಪೋಲೀಸರು, ಕಳ್ಳರ ಗುಂಪಿಗೆ ಕಾಣದ ಹಾಗೆ ಅಡಗಿಕೊಳ್ಳಲು.. ಒಮ್ಮೆ ಆ ರಸ್ತೆ ಒಮ್ಮೆ ಈ ರಸ್ತೆ ಎಂದು ಸುತ್ತುತ್ತಿದ್ದರು. ಪೋಲೀಸರದ್ದು ಅನಧಿಕೃತವಾದ ತನಿಖೆ ಆದ್ದರಿಂದ ಯಾವುದೇ ಹೆಚ್ಚುವರಿ ಪೋಲೀಸರು ಅಥವಾ ಬೇರೆ ರೀತಿಯ ಸಹಾಯವನ್ನು ಮೇಲಾಧಿಕಾರಿಗಳಿಂದ ಕೇಳುವ ಹಾಗಿರಲಿಲ್ಲ. ಉಳಿದ ಕಳ್ಳರು ಯಾವ ರೀತಿಯಾಗಿ ಅನಲನಗರವನ್ನು ಆಕ್ರಮಿಸಿದ್ದರು ಎಂದರೆ, “ಬೇರೆ ಊರಿನಿಂದ ಕೆಲವರಿಗೆ ದುಡ್ಡು ಕೊಟ್ಟು ಕರೆದುಕೊಂಡು ಬಂದು.. ಪೋಲೀಸರ ವಶದಲ್ಲಿದ್ದ ಇಬ್ಬರು ಕಳ್ಳರನ್ನು‌ ಹುಡುಕಿ ತಮಗೆ ಒಪ್ಪಿಸುವ ಕೆಲಸವನ್ನು ವಹಿಸಿದ್ದರು”. ಈ ವಿಷಯ ಎಸ್.ಐ ಅವರಿಗೆ, ಕಾಫಿ ಕೃಷ್ಣಪ್ಪನಿಂದ ತಿಳಿದಿತ್ತು. “ಸರ್, ಸಂಜೆಯಿಂದಲೂ ಹೊಸ ಮುಖಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ !!” ಎಂದು ಕಾಫಿ ಕೃಷ್ಣಪ್ಪನೇ ರಾತ್ರಿ ಎಸ್.ಐ ಗೆ ವಿಷಯ ಮುಟ್ಟಿಸಿದ್ದನು. ಹೀಗೆ ರಾತ್ರಿ ಪೂರ್ತಿಯಾಗಿ, ಕಳ್ಳಾ – ಪೋಲೀಸರ ಈ ಬೆನ್ನಟ್ಟುವಿಕೆ ಕತ್ತಲೆ ಹೆಚ್ಚಾದಂತೆ ಮೈ ಜುಂ ಎನಿಸುವಷ್ಟು ತಾರಕ್ಕಕ್ಕೇರಿತ್ತು.

ಆದರೆ… ಬೆಳಗಿನ ಜಾವದ ಹೊತ್ತಿಗೆ ಎಸ್.ಐ ಮಾಡಿದ ಒಂದು ಉಪಾಯ ಕಳ್ಳರ ಯೋಜನೆ – ಯೋಚನೆ ಎಲ್ಲವನ್ನೂ ತಲೆಕೆಳಗಾಗಿಸಿತ್ತು. ಮೇಲಾಧಿಕಾರಿಗಳ ಕೈ ಕಾಲು ಹಿಡಿದು ಏನೇನೋ ಸುಳ್ಳು ಹೇಳಿ ಒಪ್ಪಿಸಿದ್ದ ಎಸ್.‌ಐ.. “ಹೆಚ್ಚಿನ ಪೋಲೀಸರನ್ನು ಪಡೆದು ಊರಿನಾಚೆಗೆ ಭಿಗಿ ಭದ್ರತೆಯನ್ನು ಒದಗಿಸಿದ್ದರು”‌. ಕಳ್ಳರು ಇದ್ದ ಪೋಲೀಸರ ಜೀಪನ್ನು ಊರಿನಾಚೆಗಿನ ರಸ್ತೆಯಲ್ಲಿ ಹಾಳಾದಂತೆ ನಿಲ್ಲಿಸಿ ಏನಾಗುತ್ತಿದೆ ಎಂದು ಇಳಿದು ನೋಡುವಂತೆ.. ನಟಿಸಲು ಜೀಪಿನಲ್ಲಿದ್ದ ಪೋಲೀಸರಿಗೆ ಎಸ್.ಐ ಕಾಲ್ ಮಾಡಿ ಹೇಳಿದರು. ಎಸ್‌.ಐ ಹೇಳಿದಂತೆ ಜೀಪ್ ನಿಲ್ಲಿಸಿ ಒಬ್ಬರು ಪೋಲೀಸ್ ಜೀಪಿನಿಂದ ಇಳಿದು ಜೀಪಿನ ಟಯರ್ ಅನ್ನು ನೋಡುತ್ತಿರುವಾಗ… ಅಲ್ಲೆ ಮರೆಯಲ್ಲಿ ನಿಂತು ಜೀಪ್ ಫಾಲೋ ಮಾಡುತ್ತಿದ್ದ “ಕಳ್ಳರ ಗುಂಪಿನ‌ ನಾಯಕನಿಗೆ, ಇದು ಪೋಲೀಸರೇ ಹೆಣೆದ ಬಲೆ ಎಂದು ಯೋಚಿಸುತ್ತಿರುವಷ್ಟರಲ್ಲಿ…. ಕಳ್ಳರ ನಾಯಕನನ್ನು ಹೊರತುಪಡಿಸಿ ಜೊತೆಗಿದ್ದ ಉಳಿದ ಕಳ್ಳರು ಜೀಪಿನಲ್ಲಿದ್ದ ಇಬ್ಬರು ಕಳ್ಳರನ್ನು ಕಾಪಾಡಲು ಓಡಿದರು.” ಜೀಪಿನ ಸಮೀಪ ಉಳಿದ ಕಳ್ಳರು ಹೋದ ಮರುಕ್ಷಣವೇ……..

ಅಲ್ಲೇ ದೂರದಲ್ಲಿ ಅಡಗಿದ್ದ ಬೇರೆ ಪೋಲೀಸರು ಸುತ್ತಲೂ ಆಕ್ರಮಿಸಿದರು. ಹಲವಾರು ಬೈಕ್ ಹಾಗೂ ಜೀಪಿನಲ್ಲಿ ಬಂದ ಬೇರೆ ಪೋಲೀಸರು ಎಲ್ಲಾ ಕಳ್ಳರನ್ನು ಸುತ್ತುವರೆದರು.

ಎಸ್.ಐ ಜಗದೀಶ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ ಸಂಪೂರ್ಣವಾಗಿ ತಾವು ಯಶಸ್ವಿಯಾಗಿದ್ದೇವೆ ಎಂಬ ಸಂತೋಷದಿಂದ ಪೋಲೀಸರು ಸುತ್ತುವರೆದಿದ್ದ ಕಳ್ಳರನ್ನು ನೋಡಿ ಎಣಿಸಿದರು. “ಮೇಲಾಧಿಕಾರಿಗಳಿಗೆ ಕರೆ ಮಾಡಿದ ಎಸ್.ಐ… ಸರ್ ಕೊನೆಗೂ ನಾವು ಅಡಿಕೆ ಕದಿಯುತ್ತಿದ್ದ ಒಟ್ಟು ಎಲ್ಲಾ 12(ಹನ್ನೆರಡು) ಕಳ್ಳರನ್ನು ಹಿಡಿದಿದ್ದೇವೆ ಎಂದರು”. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಹನ್ನೆರಡು ಕಳ್ಳರು, ಕಣ್ಣು ಸನ್ನೆಯ ಮೂಲಕವೇ ಮಾತಾಡಿಕೊಂಡು ಸಿಕ್ಕಿ ಬೀಳದ ತಮ್ಮ ಗುಂಪಿನ ನಾಯಕನ ಬಗೆಗಿನ ನಿಜವಾದ ವಾಸ್ತವವನ್ನೇ ಮುಚ್ಚಿಟ್ಟರು.

ಹದಿಮೂರನೆಯ ಕಳ್ಳ “ಕಳ್ಳರ ಗುಂಪಿನ ನಾಯಕ ಒಬ್ಬ ಇದ್ದನು‌.. ಮತ್ತು ಅವನಿಂದಲೇ ಆ ಎಲ್ಲಾ ಕಳ್ಳತನಗಳು ಯಶಸ್ವಿಯಾಗಿತ್ತು..‌ ಆತನು ನಮಗೆ ಸಿಗದೇ ಹೊರಗೇ ಉಳಿದಿದ್ದಾನೆ‌..” ಎನ್ನುವ ವಿಚಾರ ಇಷ್ಟೆಲ್ಲಾ ಮಾಡಿ ಗೆದ್ದಿದ್ದ ಬುದ್ದಿವಂತ ಎಸ್‌.ಐ ‌ಜಗದೀಶ್ ಅವರಿಗೆ ಗೊತ್ತಾಗಲೇ‌ ಇಲ್ಲ !!

( ಮುಂದುವರೆಯುತ್ತದೆ…)

— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ

( ಮುಂದಿನ ಭಾಗ – 13, ಕೊನೇಯ ಭಾಗ ಆಗಿರುತ್ತದೆ )

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

One thought on ““ಬೆಂಕಿ‌ ಮನೆ ಕಳ್ಳರು” !! (ಭಾಗ – 12)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: