“ಬೆಂಕಿ‌ ಮನೆ ಕಳ್ಳರು” !! (ಭಾಗ – 11)

“ಬೆಂಕಿ‌ ಮನೆ ಕಳ್ಳರು” !!
( Part – 11 )

ಎಸ್.ಐ ಜಗದೀಶ್ ಅವರ ಪೋಲೀಸ್ ತಂಡ ತಾವು ಅಂದುಕೊಂಡ ಹಾಗೆ ಅಡಿಕೆ ಕದಿಯಲು ಯೋಜನೆ ರೂಪಿಸಿದ್ದ ರಂಗಪ್ಪಸ್ವಾಮಿಗೆ.. “ಆ‌ ಕಳ್ಳರಿಗೆ ಕರೆ‌‌ ಮಾಡಿ ಮತ್ತೊಂದು ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಭೇಟಿ ಮಾಡುವ ಸಲುವಾಗಿ,‌ ಕಳ್ಳರನ್ನು ಸಿಗಲು‌” ಹೇಳಬೇಕೆಂದು ಹೇಳಿದರು‌. ರಂಗಪ್ಪ ಸ್ವಾಮಿಯ ಬಳಿ ಆ ಕಳ್ಳರನ್ನು ಸಂಪರ್ಕ ಮಾಡುವ ಯಾವುದೇ ದಾರಿ ಇರಲಿಲ್ಲ. ಎರಡು ವಾರಕ್ಕೊಮ್ಮೆ ಪ್ರತಿ ಶನಿವಾರ ಆ ಕಳ್ಳರೇ ರಂಗಪ್ಪಸ್ವಾಮಿಗೆ ಅವರೇ ಕೊಟ್ಟ ಬೇರೆ ಮೊಬೈಲ್ ನ ನಂಬರ್‌ ಗೆ ಕರೆ ಮಾಡುತ್ತಿದ್ದರು. ಕಳ್ಳರು ಮಾಡುವ ಕರೆಗಾಗಿ ಮುಂದಿನ ವಾರದವರೆಗೂ‌ ಪೋಲೀಸರು ಮತ್ತು ರಂಗಪ್ಪಸ್ವಾಮಿ ಒಟ್ಟಾಗಿ ಕಾದು‌ ಕುಳಿತ್ತಿದ್ದರು. ಅಂದುಕೊಂಡಂತೆಯೇ ಕಳ್ಳರಿಂದ ಕಾಲ್ ಬಂದಾಗ.. ನಾಳೆ ಭೇಟಿಯಾಗಬೇಕೆಂದು ರಂಗಪ್ಪಸ್ವಾಮಿ ಹೇಳಿದನು. “ಕಳ್ಳರು ಒಪ್ಪಿಕೊಂಡು, ಅನಲನಗರದಿಂದ 50 ಕಿಲೋಮೀಟರ್ ದೂರದ ಒಂದು ಊರಿಗೆ ನಾಳೆ ಬರಲು ಹೇಳಿದರು.”

ಕಳ್ಳರೇನೂ ಅಷ್ಟು ಸಲೀಸಾಗಿ ಸಿಕ್ಕಿಹಾಕಿಕೊಳ್ಳುವವರಲ್ಲ. ಅವರು ಕದ್ದ ಅಡಿಕೆಯ ಹಾದಿ ಸುಲುಭದ್ದೂ ಆಗಿರಲಿಲ್ಲ. ಆದರೂ ಅವರು ಎಂದಿಗೂ ಕಳ್ಳತನದಲ್ಲಿ ‌ಎಡವಿರಲಿಲ್ಲ. ಇದು ಎಸ್.ಐ ಅವರಿಗೂ ತಿಳಿದಿತ್ತು. ಎಲ್ಲಿಯೂ ಏನೂ ತಪ್ಪಾಗದ ಹಾಗೆ ಕಳ್ಳರನ್ನು‌ ಹಿಡಿಯಲೇ ಬೇಕೆಂದು ಪೋಲೀಸರ ತಂಡ ಸಿದ್ಧವಾಯಿತು. ಈ‌ ಹಿಂದೆಯೂ ಮೂರು ನಾಲ್ಕು ಭಾರಿ ರಂಗಪ್ಪಸ್ವಾಮಿ ಬೇಟಿಯಾದಾಗಲೂ ಆ ಯಾವೊಬ್ಬ ಕಳ್ಳರ ಮುಖವನ್ನು ಅವರು ತೋರಿಸಿರಲಿಲ್ಲ.

ಸಂಜೆಯ ಹೊತ್ತಿಗೆ ಕಳ್ಳರು ಹೇಳಿದ ಆ ದೂರದ ಊರಿನ‌ವರೆಗೂ ಕಾರಿನಲ್ಲಿ ಹೋಗಿ, ಅಲ್ಲಿಂದ ಒಂದು ಪ್ಯಾಸೆಂಜರ್ ಆಟೋ ಹಿಡಿದು ಅದರಲ್ಲಿ ಕಳ್ಳರು ಹೇಳಿದ್ದ ಒಂದು ಹಳ್ಳಿಯ ದಾರಿಯ ಕಡೆಗೆ ಹೊರಟನು. ರಂಗಪ್ಪಸ್ವಾಮಿಯ ಬಳಿ ಒಂದು ಬ್ಯಾಗ್ ಮತ್ತು ಅದರಲ್ಲಿ ಸ್ವಲ್ಪ ಹಣವೂ ಇತ್ತು. “ಮತ್ತೆ ದುಡ್ಡು ಕೊಟ್ಟು ಅಡಿಕೆ ಕದಿಯುವಂತೆ ಹೇಳಲು ಬಂದಿದ್ದಾನೆ ಅಂದುಕೊಂಡಿದ್ದ ಕಳ್ಳರ ಗುಂಪಿನವರು.. ಅವನಿಗಾಗಿ ಕಾಯುತ್ತಿದ್ದರು”.

“ರಂಗಪ್ಪಸ್ವಾಮಿ ಕೂತಿದ್ದ ಆಟೋದಲ್ಲಿನ ಡ್ರೈವರ್ ?? ಕಾನ್ಸ್‌ಟೇಬಲ್ ಈರಪ್ಪಣ್ಣನೇ ಆಗಿದ್ದನು!!”. ‌ಇದೇ ಆಟೋವಿನ ಸ್ವಲ್ಪ ಹಿಂದೆ  ಇದ್ದ ಒಂದು ಲಗೇಜ್ ಅಟೋವನ್ನು ಎಸ್.ಐ ಜಗದೀಶ್ ಓಡಿಸುತ್ತಿದ್ದರು. ರಂಗಪ್ಪಸ್ವಾಮಿ ಇದ್ದ ಆಟೋವಿನ ಸ್ವಲ್ಪ ಮುಂದೆ  ಇನ್ನೊಂದು ಲಗೇಜ್ ಆಟೋವಿತ್ತು. ಅದರಲ್ಲಿಯೂ ಪೋಲೀಸರು ಹಳ್ಳಿ ಜನರ ವೇಷಧರಿಸಿ ಯಾವುದೇ ಸಂದೇಹ ಬರದಂತೆ ಇದ್ದರು. ಆ ಹಳ್ಳಿ ದಾರಿಯ ಉದ್ದಕ್ಕೂ ಇದ್ದ ಅಕ್ಕ ಪಕ್ಕದ ಗದ್ದೆಯಲ್ಲಿ ಉಳಿದ‌‌‌ ಪೋಲೀಸರು ರೈತರ ಹಾಗೆ ಕೆಲಸ ಮಾಡುತ್ತಿದ್ದರು. ಈ‌ ಊರು ಕಳ್ಳರಿಗೂ ಹೊಸದಾಗಿದ್ದರಿಂದ, ಪೋಲೀಸರೇ ಇಲ್ಲಿ‌ ಗದ್ದೆಯಲ್ಲಿದ್ದಾರೆಂದು ಅಂದಾಜಿಸಲೂ ಆಗಿರಲಿಲ್ಲ ಮತ್ತು ಅವರು ರಂಗಪ್ಪಸ್ವಾಮಿಯ ಮೇಲೆ ಇಟ್ಟ ನಂಬಿಕೆ ತುಂಬಾ ದೊಡ್ಡದಿತ್ತು. ಕಳ್ಳರನ್ನು ಹಿಡಿಯಲೇ ಬೇಕೆಂದು ಎಸ್‌.ಐ ಅವರ ತಂಡ ಅನಧಿಕೃತವಾಗಿ ಈ ಆಪರೇಷನ್ ಕೈಗೊಂಡಿದ್ದರು.

ಒಮ್ಮೆಲೇ ರಂಗಪ್ಪಸ್ವಾಮಿ ಇದ್ದ ಆಟೋದ ಎದುರು ಬಂದ ಇಬ್ಬರು ವ್ಯಕ್ತಿಗಳನ್ನು ಕಂಡು, ಅಟೋ ಡ್ರೈವರ್‌ ಆಗಿದ್ದ ಕಾನ್ಸ್‌ಟೇಬಲ್ ಈರಪ್ಪಣ್ಣ ಮತ್ತು ರಂಗಪ್ಪಸ್ವಾಮಿ ಇಬ್ಬರೂ ಬೆಚ್ಚಿಬಿದ್ದರು. “ಅಲ್ಲಿ ಬಂದಿದ್ದ ಇಬ್ಬರೂ ವ್ಯಕ್ತಿಗಳು ಟವಲ್ ನಿಂದ ಮುಖ ಮುಚ್ಚಿಕೊಂಡು ಅವರೂ ರೈತರಂತೆ ವೇಷ ಹಾಕಿದ್ದರು!!”. ನಾವೇ ಕಳ್ಳರೆಂದು ಸನ್ನೆಯ ಮೂಲಕ ರಂಗಪ್ಪಸ್ವಾಮಿಗೆ ಹೇಳಿದ ನಂತರ, ಬೇರೆ ದಾರಿ‌‌ ಕಾಣದೇ ಆಟೋದಿಂದ ಇಳಿದು ಡೈವರ್ ಆಗಿದ್ದ‌‌ ಕಾನ್ಸ್‌ಟೇಬಲ್ ಗೆ‌ ದುಡ್ಡು ಕೊಟ್ಟು ಅಲ್ಲಿಂದ ವಾಪಸ್ಸಾಗಲು ಹೇಳಿದನು. ಹಿಂದೆ ದೂರದಲ್ಲಿ ಎಸ್.ಐ ಓಡಿಸುತ್ತಿದ್ದ ಲಗೇಜ್ ಆಟೋ ಬಳಿ‌ ಬಂದ ಕಾನ್ಸ್‌ಟೇಬಲ್ ಈರಪ್ಪಣ್ಣ.. ಬೇಗ ಹೋಗಿ ಸರ್ ಎಂದು ಸನ್ನೆ ಮಾಡಿದ ಕೂಡಲೇ ಎಸ್.ಐ ಮುಂದೆ ಹೊರಟರು. ದೂರದಲ್ಲಿ ರಸ್ತೆಯ ಪಕ್ಕದ ಮರದಡಿ ಇಬ್ಬರು ಕಳ್ಳರ ಜೊತೆ ರಂಗಪ್ಪಸ್ವಾಮಿ ದುಡ್ಡಿನ ಬ್ಯಾಗ್ ಕೊಟ್ಟು ಬೇರೋಂದು ಮನೆಯಲ್ಲಿ ಅಡಿಕೆ ಕದಿಯುವ ಕುರಿತು ಮಾತಾನಾಡುತ್ತಾ.. “ಪೋಲೀಸರು ಹೇಳಿದಂತೆಯೇ ನಟಿಸುತ್ತಿದ್ದನು!!”.

ಇಷ್ಟೆಲ್ಲಾ ಆಗುವಷ್ಟರಲ್ಲಿ ಸಂಜೆಯ ಕತ್ತಲು ಆವರಿಸಲು ಆಗ ತಾನೆ ಶುರುವಾಗಿತ್ತು. ಎಸ್.ಐ ಅವರು ಅದೇ ಮರದ ಸ್ವಲ್ಪ ದೂರದಲ್ಲಿ ತಮ್ಮ ಲಗೇಜ್ ಆಟೋವನ್ನು ನಿಲ್ಲಿಸಿ‌ ಕೆಳಗೆ‌ ಇಳಿದು ಟೈಯರ್ ಪರೀಕ್ಷಿಸುವಂತೆ ನಟಿಸುತ್ತಿದ್ದರು.‌ ಅದೇ ರಸ್ತೆಯ ಆಚೆ ಈಚೆ ಗದ್ದೆಯಲ್ಲಿ ಉಳಿದ‌ ಪೋಲೀಸರು ಕೆಲಸ ಮಾಡುವುದನ್ನು ನಿಲ್ಲಿಸಿ‌ ಎಲ್ಲಾ ಉಳಿದ ಕಳ್ಳರು ಬಂದ ಮೇಲೆ, ಆ ಕಳ್ಳರ ಕಡೆಗೆ ಓಡಿ ಬರಲು ಕಾಯುತ್ತಿದ್ದರು. ಅಷ್ಟರಲ್ಲಿ ಬೇರೊಂದು ಕಡೆಗೆ ಉಳಿದ ಮಾತನ್ನು ಮುಂದುವರೆಸೋಣ ಎಂದ ಇಬ್ಬರು ಕಳ್ಳರು ರಂಗಪ್ಪಸ್ವಾಮಿಯ ಕೈಹಿಡಿದುಕೊಂಡರು. ಅದೇ ಸಮಯಕ್ಕೆ ಎಸ್.ಐ ಅವರ ಆಟೋ ಇದ್ದ ರಸ್ತೆಯ ಹಿಂಬದಿಯಿಂದ ವೇಗದಲ್ಲಿ ಹಳೇಯ ಲಾರಿಯೊಂದು ಬಂದೇ ಬಿಟ್ಟಿತ್ತು. ನೋಡ ನೋಡುತ್ತಲೇ ಆ ಲಾರಿ ರಂಗಪ್ಪಸ್ವಾಮಿ ಮತ್ತು ಕಳ್ಳರಿದ್ದ ಮರದ ಬಳಿ ನಿಂತಿತು. ಮೂವರಿಗೂ ಲಾರಿ ಹತ್ತಲು ಹೇಳಿದರು. ಉಳಿದ ಕಳ್ಳರು ಲಾರಿಯಲ್ಲೇ ಮುಸಕು ಧರಿಸಿ ಕುಳಿತ್ತಿದ್ದರು. ಇದನ್ನು ಗಮನಿಸಿದ ರಂಗಪ್ಪಸ್ವಾಮಿ.. “ನಾನು ಇವರ ಲಾರಿಯಲ್ಲಿ ಹತ್ತಿದ ಮೇಲೆ, ಪೋಲೀಸರು ಇಲ್ಲಿರುವ ವಿಷಯ ಗೊತ್ತಾದರೆ ನನ್ನನ್ನು ಈ ಕಳ್ಳರು ಕೊಂದೇ ಬಿಡುತ್ತಾರೆಂದು !!” ಯೋಚಿಸಿ ತನ್ನ ಕೈ ಹಿಡಿದುಕೊಂಡಿದ್ದ ಇಬ್ಬರೂ ಕಳ್ಳರನ್ನು ದೂಡಿಕೊಂಡು ಇಬ್ಬರ ಜೊತೆ ತಾನೂ ಕೆಳಗೆ ಬಿದ್ದರು. ಇದನ್ನು ನೋಡುತ್ತಲೇ,‌ ಲಾರಿಯಲ್ಲಿದ್ದ‌ ಉಳಿದ‌ ಕಳ್ಳರು‌‌‌ ಸಿಟ್ಟಿನಿಂದ ಇನ್ನೇನು ಕೆಳಗೆ ಇಳಿಯಬೇಕೆನ್ನುವಷ್ಟರಲ್ಲಿ….??

ಗದ್ದೆಯಲ್ಲಿದ್ದ ಪೋಲೀಸರು ಗನ್ ತೋರಿಸುತ್ತಾ ರಸ್ತೆಯಲ್ಲಿದ್ದ ಲಾರಿಯ ಕಡೆಗೆ ಬರುವುದನ್ನು ಲಾರಿಯಲ್ಲಿದ್ದ ಕಳ್ಳರು ನೋಡಿದರು. ಇದೇ ವೇಳೆಗೆ ಹಿಂದೆ ಆಟೋದಲ್ಲಿದ್ದ ಎಸ್‌.ಐ ವೇಗವಾಗಿ ಬಂದು ಲಾರಿಗೆ ಅಡ್ಡವಾಗಿ ಆಟೋ ನಿಲ್ಲಿಸಿದ ಕೂಡಲೇ, “ಲಾರಿಯು ಆಟೋ ಗೆ ಗುದ್ದಿಕೊಂಡು ಹೊರಟೇ ಬಿಟ್ಟಿತ್ತು. ಎಸ್.ಐ ಜಗದೀಶ್ ಅವರಿದ್ದ ಆಟೋ ಪಲ್ಟಿಯಾಗಿ ಪಕ್ಕದ ಗದ್ದೆಗೆ ಉರುಳಿತು”. ಇದನ್ನು ನೋಡಿದ ಕೆಲವು ಪೋಲೀಸರು ಎಸ್‌.ಐ ಅವರನ್ನು ಕಾಪಾಡಲು ಆ‌ ಕಡೆ ಓಡಿದರೆ, ಉಳಿದವರು ಕೆಳಗೆ ಬಿದ್ದಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಬಂದರು. ರಂಗಪ್ಪಸ್ವಾಮಿಯ ಮೇಲೆ ಸಿಟ್ಟಾಗಿದ್ದ ಇಬ್ಬರೂ ಕಳ್ಳರು, ಅವನ ಮೇಲೆ ಅಲ್ಲೇ ರಸ್ತೆಯಲ್ಲಿದ್ದ ಕಲ್ಲಿನಿಂದ ಹೊಡೆದು ಇಬ್ಬರೂ ಅಲ್ಲಿಂದ ದುಡ್ಡಿನ ಬ್ಯಾಗ್ ಸಮೇತ ರಸ್ತೆಯಲ್ಲೇ ಲಾರಿಯ ಹಿಂದೆ ಓಡಿದರು.

ಇಬ್ಬರೂ ಕಳ್ಳರು ರಸ್ತೆಯಲ್ಲಿ ಓಡುತ್ತಿದ್ದರೆ, ಹಿಂದೆಯಿಂದ ಎಲ್ಲಾ ಪೋಲೀಸರು ಅಟ್ಟಾಡಿಸಿಕೊಂಡು ಬರುತ್ತಿದ್ದರು.‌  ಲಾರಿಯಲ್ಲಿದ್ದ ಕಳ್ಳರು ಸ್ವಲ್ಪ ಮುಂದೆ ಹೋಗಿ ಮರದ ಮರೆಯಲ್ಲಿ ಲಾರಿ ನಿಲ್ಲಿಸಿ, ಓಡಿ ಬರುತ್ತಿದ್ದ ಇಬ್ಬರು ಕಳ್ಳರನ್ನು ಕಾಪಾಡಲು ಅದೇ ರಸ್ತೆಯಲ್ಲಿ ಕಾಯುತ್ತಿದ್ದರು. ಈ ಇಬ್ಬರು ಕಳ್ಳರು ಓಡಿ ಬರುತ್ತಿರುವಾಗ, ಅಲ್ಲೇ ನಿಧಾನವಾಗಿ ಹೋಗುತ್ತಿದ್ದ ಲಗೇಜ್ ಆಟೋವನ್ನು ಹತ್ತಿದರು. ಕೈ ಯಲ್ಲಿದ್ದ ದುಡ್ಡಿನ ಚೀಲವನ್ನು ಅಟೋದಲ್ಲಿದ್ದವರಿಗೆ ತೋರಿಸಿ ಬೇಗ ಹೋಗಲು ಹೇಳಿದರು ಆದರೆ ?? “ಆ ಆಟೋದಲ್ಲಿದ್ದವರೂ ಪೋಲೀಸರೇ ಆಗಿದ್ದರು!!. ಆಟೋವನ್ನು ಅಲ್ಲಿಯೇ ನಿಲ್ಲಿಸಿದರು. ಕಳ್ಳರು ಎಷ್ಟೇ ಗೋಗರೆದರೂ ನಿಂತ ಆಟೋ ಹೊರಡಲೇ‌ ಇಲ್ಲ.” ಇನ್ನೇನೂ ಆಟೋದಿಂದ ಕಳ್ಳರು ಇಳಿದು ಓಡಬೇಕು… ಅಷ್ಟರಲ್ಲಿ ಹಿಂದೆಯಿಂದ ಓಡಿಬಂದ ಪೋಲೀಸರು ಇಬ್ಬರೂ ಕಳ್ಳರನ್ನು ವಶಪಡಿಸಿಕೊಂಡರು.

( ಮುಂದುವರೆಯುತ್ತದೆ…)

— ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: