
( Part – 10 )
ಮುಸುಕು ಧರಿಸಿ ಕೃಷ್ಣಪ್ಪನ ಹೋಟೆಲ್ ಗೆ ಬೆಂಕಿ ಹಚ್ಚುವ ವೇಳೆಗೆ ಪೋಲೀಸರ ವಶವಾಗಿದ್ದ ಇಬ್ಬರನ್ನು ಎಸ್.ಐ ಜಗದೀಶ್ ಅವರು ಸ್ಟೇಷನ್ ಗೆ ಕರೆದೊಯ್ದು ವಿಚಾರಣೆ ಶುರುಮಾಡಿದರು. ಎಸ್.ಐ ಹಾಗೂ ಹೆಡ್ ಕಾನ್ಸ್ಟೇಬಲ್ ಅಂದುಕೊಂಡಂತೆಯೇ ಆಗಿತ್ತು. ವಶದಲ್ಲಿದ್ದ ಇಬ್ಬರಿಗೂ ಆ ಅಡಿಕೆ ಕಳ್ಳತನ ಮಾಡಿದ್ದ ನಿಜವಾದ ಕಳ್ಳರಿಗೂ ನೇರವಾದ ಸಂಪರ್ಕವಿರಲಿಲ್ಲ ಮತ್ತು ಆ ಇಬ್ಬರು ಈ ಹತ್ತಿರದ ಊರಿನವರೂ ಆಗಿರಲಿಲ್ಲ. “ಯಾರೋ ಒಬ್ಬರು ಬಂದು ದುಡ್ಡು ಕೊಟ್ಟು ಈ ರೀತಿಯಾಗಿ ಮಾಡಲು ಹೇಳಿದ್ದರು !!” ಎಂದಾಗ “ಈ ಅಡಿಕೆ ಕಳ್ಳರ ಕಳ್ಳ – ಪೋಲೀಸ್ ಆಟ ಈಗ ಶುರುವಾಗಿದೆ ಅಷ್ಟೇ !!” ಎಂದು ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಮಾತನಾಡಿಕೊಂಡು ಜೋರಾಗಿ ನಗಲು ಆರಂಭಿಸಿದರು.
ಎಸ್.ಐ ಜಗದೀಶ್ ಅವರು.. ಪತ್ರಿಕಾಗೋಷ್ಠಿಗೂ ಒಂದು ದಿನ ಮೊದಲೇ, ಅನಲನಗರ ಮತ್ತು ಅಕ್ಕಪಕ್ಕದ ಊರಿನ ಬಸ್ಸು ನಿಲ್ದಾಣ.. ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪೋಲೀಸರ ತಂಡವನ್ನು ಮಾಡಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಗಮನಿಸಲು ಹೇಳಿ, ಊರಿನ ಒಳಗೆ ಬರುವ ಎಲ್ಲರ ಮೇಲೆಯೂ ಕಣ್ಣಿಟ್ಟಿದ್ದರು. ಬೆಂಕಿ ಹಚ್ಚುವ ಸಲುವಾಗಿ ಊರಿನ ಒಳಗೆ ಬಂದವರನ್ನು ಭೇಟಿ ಆದವರಿಂದ ಹಿಡಿದು, ಹೋಟೆಲ್ ಗೆ ಬೆಂಕಿ ಹಚ್ಚಲು ಬರುವ ವರೆಗೂ.. ಅವರ ಹಿಂದೆಯೇ ಇದ್ದ ಪೋಲೀಸ್ ತಂಡ ಎಲ್ಲವನ್ನೂ ವೀಡಿಯೋ ಸಮೇತ ಸಾಕ್ಷಿ ಕಲೆಹಾಕಿದ್ದರು.
ಪೋಲೀಸ್ ಸ್ಟೇಷನ್ ನಲ್ಲಿದ್ದ ಕೆಲವರಿಗೆ ಮಾತ್ರ ಈ ನಿಗೂಢ ತನಿಖೆಯ ಬಗ್ಗೆ ತಿಳಿದಿತ್ತು. ಉಳಿದವರಿಗೆ ಏನೊಂದೂ ಗೊತ್ತಿರಲಿಲ್ಲ. ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಜೀಪ್ ಬಳಸದೇ ಸ್ವಂತ ಕಾರಿನಲ್ಲಿ ಸ್ಟೇಷನ್ ನಿಂದ ಹೊರಟು, ನೇರವಾಗಿ ಅದೇ ಊರಿನ ರಂಗಪ್ಪಸ್ವಾಮಿ ಎಂಬುವರ ತೋಟದ ಕಡೆಗೆ ಹೋಗಿ, ಅವನನ್ನು ಭೇಟಿಯಾದರು. ರಂಗಪ್ಪಸ್ವಾಮಿಯ ಮನೆಯವರಿಗೂ ಊರಿನವರಿಗೂ ಗೊತ್ತಾಗದ ಹಾಗೆ ಅವನನ್ನು ಕರೆದುಕೊಂಡು, ಸ್ಟೇಷನ್ ಗೆ ಹೋಗದೇ ದೂರದ ಒಂದು ಕಾಡಿನ ಜಾಗಕ್ಕೆ ಕರೆದೊಯ್ದು, ವಿಚಾರಣೆ ಶುರುಮಾಡಿದರು. ಅದೇ ಜಾಗಕ್ಕೆ ತನಿಖೆಯ ತಂಡದಲ್ಲಿದ್ದ ಬೇರೆ ಪೋಲೀಸರು ಅದಾಗಲೇ ಬಂದಿದ್ದರು.
ರಂಗಪ್ಪಸ್ವಾಮಿ ಅಷ್ಟೇನೂ ಪ್ರಭಾವಿ ವ್ಯಕ್ತಿ ಆಗಿರಲಿಲ್ಲ ಆದರೆ ಮುಂದಿನ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದು, ತಾನು ಒಬ್ಬ ದೊಡ್ಡ ರಾಜಕಾರಣಿ ಆಗಬೇಕೆಂಬ ಆಸೆ ಹೊಂದಿದ್ದ. ಸ್ಟೇಷನ್ ಗೆ ಕರೆದೊಯ್ಯದೇ ಇನ್ನೆಲ್ಲೋ ಕರೆದುಕೊಂಡು ಬಂದಿದ್ದಕ್ಕೆ ಪೋಲೀಸರೆದುರು ಹಾರಾಡುತ್ತಿದ್ದ ರಂಗಪ್ಪಸ್ವಾಮಿಗೆ.. “ಹೋಟೆಲ್ ಗೆ ಬೆಂಕಿ ಹಚ್ಚಲು ಕರೆಸಿದ್ದ ಕಳ್ಳರ ಎದುರು ರಂಗಪ್ಪ ಮಾತಾನಾಡುತ್ತಾ ಇರುವುದು ಹಾಗೂ ರಂಗಪ್ಪನ ಮಕ್ಕಳು ಪಕ್ಕದ ಊರಿನಲ್ಲಿ ಈ ಕಳ್ಳರನ್ನು ಸಂಪರ್ಕ ಮಾಡಿದ್ದ ಎಲ್ಲಾ ಸಾಕ್ಷಿಗಳ ವೀಡಿಯೋಗಳನ್ನು ತೋರಿಸಿದಾಗ..!!” ಇದು ಊರಿನ ಜನರಿಗೆ ಗೊತ್ತಾದರೇ ತನ್ನ ರಾಜಕೀಯ ಬದುಕು ಶುರುವಾಗುವ ಮೊದಲೇ ನಿಂತು ಹೋಗುವುದೆಂದು ಹೆದರಿ, ರಂಗಪ್ಪಸ್ವಾಮಿ ತನ್ನ ಆರ್ಭಟವನ್ನು ನಿಲ್ಲಿಸಿ ಪೋಲೀಸರೆದುರು ಭಯದಿಂದ ಕುಳಿತನು.
ಎಸ್.ಐ ಗೆ ರಂಗಪ್ಪನನ್ನೇ ಕಳ್ಳನೆಂದು ನಿರೂಪಿಸಲು ತಮ್ಮ ಬಳಿಯಿದ್ದ ವೀಡಿಯೋ ಸಾಕ್ಷಿ ಸಾಕಿತ್ತು. ಆದರೆ ಅದರಿಂದ ರಂಗಪ್ಪಸ್ವಾಮಿಗೆ ಸ್ವಲ್ಪ ದಿನದ ಶಿಕ್ಷೆ.. ನಂತರ ಬಿಡುಗಡೆ..!! “ಈ ರೀತಿಯಾದರೆ ಜೀಪಿಗೆ ಬೆಂಕಿ ಹಚ್ಚಿ ಅಡಿಕೆ ಕದ್ದು ಪೋಲೀಸರಿಗೆ ಯಾಮಾರಿಸಿ ಎರಡು ಭಾರಿ ಅಡಿಕೆ ಕದ್ದಿದ್ದ ಕಳ್ಳರು” ಮತ್ತೆ ಸಿಗುವುದಿಲ್ಲಾ ಎಂಬುದು ಖಚಿತವಾಗಿ ಗೊತ್ತಿತ್ತು. ಕಳ್ಳರು ಅಡಿಕೆ ಕದ್ದು ಯಶಸ್ವಿಯಾಗಿದ್ದರಿಂದ, ಊರಿನ ಜನರು, ಪತ್ರಿಕೆಯವರು ಹಾಗೂ ಪೋಲೀಸ್ ಇಲಾಖೆಯವರು ಎಸ್.ಐ ಮತ್ತು ಅವರ ತಂಡವನ್ನು ಹೀಯಾಳಿಸಿ ನಕ್ಕಿದ್ದರು. ಇದೇ ಕಾರಣಕ್ಕೆ ಆ ಬುದ್ದಿವಂತ ಅಡಿಕೆ ಕಳ್ಳರ ಹಿಡಿಯುವ ವಿಷಯವನ್ನು ಎಸ್.ಐ ತಮ್ಮ ವೈಯಕ್ತಿಕ ವಿಚಾರದಂತೆ ಪರಿಗಣಿಸಿದ್ದರು.
ಇಲ್ಲಿ ರಂಗಪ್ಪಸ್ವಾಮಿ ಸಿಕ್ಕಿಬಿದ್ದಿದ್ದು ಪ್ರಚಾರವಾದರೆ ಅಡಿಕೆ ಕಳ್ಳರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಎಸ್.ಐ ಅವರಿಗೆ ಗೊತ್ತಿತ್ತು. “ನೀನು ನಮ್ಮ ತನಿಖೆಗೆ ಸಹಾಯ ಮಾಡು. ಆ ಕಳ್ಳರನ್ನು ನಾನು ಹಿಡಿದು ಅವರನ್ನು ಶಿಕ್ಷೆಗೆ ಒಳಪಡಿಸಿ, ನಿನ್ನ ಹೆಜ್ಜೆಯ ಗುರುತೇ ಇದರಲ್ಲಿ ಇಲ್ಲದಂತೆ ಮಾಡುವುದಾಗಿ ಎಸ್.ಐ ಅವರು ರಂಗಪ್ಪಸ್ವಾಮಿಗೆ ಹೇಳಿದರು.” ಇದರಿಂದ ನಿನ್ನ ರಾಜಕೀಯ ಜೀವನಕ್ಕೂ ತೊಂದರೆ ಆಗುವುದಿಲ್ಲ ಮತ್ತು ನೀನು ಅವರೊಂದಿಗಿದ್ದ ವೀಡಿಯೋ ಎಲ್ಲಿಯೂ ಹೊರಗಡೆ ಬರುವುದಿಲ್ಲ ಎಂದಾಗ, ರಂಗಪ್ಪಸ್ವಾಮಿ ಸ್ವಲ್ಪ ಸಮಯ ಯೋಚಿಸಿ ಇದಕ್ಕೆ ಒಪ್ಪಿಕೊಂಡನು.
ರಂಗಪ್ಪಸ್ವಾಮಿ ರಾಜಕೀಯವಾಗಿ ಗುರುತಿಸಿಕೊಳ್ಳಲು ಪ್ರಯತ್ತಿಸುತ್ತಿದ್ದ. ಮುಂದಿನ ಚುನಾವಣೆಗೆ ಬೇಕಾಗುವಷ್ಟು ಹಣ ಅವನಲ್ಲಿತ್ತು ಆದರೆ ಜನರು ಗುರುತಿಸಲ್ಪಡುವಷ್ಟು ಹೆಸರು ಅವನದ್ದಾಗಿರಲಿಲ್ಲ. ಊರಿನ ಶ್ರೀಮಂತ ವ್ಯಕ್ತಿಗಳ ಮನೆಯ ಅಡಿಕೆಯನ್ನು ಕದಿಯಲು ಯೋಜನೆ ರೂಪಿಸಿದ್ದ. ಆದರೆ ಅವನಿಗೆ ದುಡ್ಡು ಮಾಡುವ ಉದ್ದೇಶ ಇರಲಿಲ್ಲ. ಬೇರೆ ಯಾವುದೋ ದೂರದ ಊರಿನ ಕಳ್ಳರಿಗೆ ಅಡಿಕೆ ಕದಿಯಲು ಹೇಳಿ, ಆ ಕಳ್ಳರಿಗೆ ಸುಮಾರು ದುಡ್ಡು ಕೊಟ್ಟು ಅಡಿಕೆ ಕಳ್ಳತನ ಮಾಡಿಸಿದ್ದ. ನಂತರ ಊರಿನ ಒಂದು ಕಡೆ ಅಡಿಕೆಯನ್ನು ಇಡಲು ಹೇಳಿದ್ದ. ಇಷ್ಟಾದರೂ ರಂಗಪ್ಪನಿಗೆ ಆ ಕಳ್ಳರು ತಮ್ಮ ತಂಡದ ಯಾರ ಮುಖವನ್ನೂ ತೋರಿಸಿರಲಿಲ್ಲ. ರಂಗಪ್ಪಸ್ವಾಮಿಯ ಯೋಜನೆಯ ಪ್ರಕಾರ “ಎರಡು ಭಾರಿ ಅಡಿಕೆ ಕಳ್ಳತನ ಮಾಡಿಸಿ.. ಕೆಲವು ದಿನಗಳ ನಂತರ ಒಂದು ರಾತ್ರಿ ಬೇರೆ ಊರಿಗೆ ಸಾಗಿಸುವಂತೆ ಮಾಡಿ, ಕಳ್ಳರೊಂದಿಗೆ ಹೋರಾಡುವಂತೆ ನಟಿಸಿ.. ಅಡಿಕೆಯ ಟ್ರಾಕ್ಟರ್ ಅನ್ನು ಊರಿನ ಹೊರಗೆ ಹಿಡಿದು ನಿಲ್ಲಿಸಿ, ಊರಿನವರೆದುರು ತನ್ನನ್ನು ತಾನು ದೊಡ್ಡದಾಗಿ ಗುರುತಿಸಿಕೊಂಡರೆ, ಮುಂದಿನ ಚುನಾವಣೆಯಲ್ಲಿ ಗೆಲ್ಲಲು ರಂಗಪ್ಪಸ್ವಾಮಿ ಎಂಬ ಹೆಸರು ಸಾಕು !!” ಎಂದು ಈ ಕೆಲಸ ಮಾಡಿಸಿದ್ದ. ಅಡಿಕೆ ಕಳ್ಳತನ ಚಿಕ್ಕ ವಿಷಯವೇನೂ ಆಗಿರಲಿಲ್ಲ. ಅನಲಗರದ ಜನರಿಗೆ ಅಡಿಕೆ ದೊಡ್ಡ ಆದಾಯವಾಗಿತ್ತು. ಜೊತೆಗೆ ಗೌರವದ ವಿಷಯವೂ ಆಗಿತ್ತು.
ಆದರೆ ಆ ರಾತ್ರಿ ಕಾಫಿ ಕೃಷ್ಣಪ್ಪ ಅಡಿಕೆ ತುಂಬಿದ್ದ ಟ್ರಾಕ್ಟರ್ ನೋಡಿದ್ದರಿಂದ, ರಂಗಪ್ಪಸ್ವಾಮಿಯ ಯೋಜನೆ ತಲೆಕೆಳಗಾಗಿತ್ತು. ಅಲ್ಲಿಯವರೆಗೂ ಎಲ್ಲವೂ ಸರಿ ಇತ್ತು ಆದರೆ ಆನಂತರ ಎಸ್.ಐ ಮತ್ತು ಅವರ ತಂಡ ಬೀಸಿದ್ದ ಬಲೆಗೆ ರಂಗಪ್ಪಸ್ವಾಮಿ ಸಿಕ್ಕಿಬಿದ್ದಿದ್ದನು.
ಪೋಲೀಸರಿಗೆ ಸಹಾಯ ಮಾಡದೇ ರಂಗಪ್ಪಸ್ವಾಮಿಗೆ ಬೇರೆ ದಾರಿ ಇರಲಿಲ್ಲ. ಪೋಲೀಸರಿಗೂ ರಂಗಪ್ಪಸ್ವಾಮಿಯ ಸಹಾಯ ಪಡೆಯದೇ, “ಮುಖವನ್ನೂ ತೋರಿಸದೇ ಅಡಿಕೆ ಕದಿಯಲು ಯಶಸ್ವಿಯಾಗಿದ್ದ ಕಳ್ಳರನ್ನು ಹಿಡಿಯುವ ದಾರಿಯೂ ಇರಲಿಲ್ಲ.”
ರಂಗಪ್ಪನನ್ನು ಮತ್ತೆ ಆ ಅಡಿಕೆ ಕದ್ದವರನ್ನೆಲ್ಲಾ ಭೇಟಿಯಾಗಲು ಕಳುಹಿಸಿ, ಆಗ ಆ ಕಳ್ಳರನ್ನು ಹಿಡಿಯುವ ಯೋಜನೆ ರೂಪಿಸುವಲ್ಲಿ ಎಸ್.ಐ ಮತ್ತು ಅವರ ತಂಡದವರೆಲ್ಲರೂ ಮುಳುಗಿದ್ದರು.
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ
❤️❤️❤️❤️
LikeLike