
( Part – 9 )
ಅಡಿಕೆಯ ಕಳ್ಳತನದ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡುವ ಮೊದಲೇ, ಎದ್ದು ನಿಂತ ಎಸ್.ಐ ಜಗದೀಶ್ ಮಾತು ಶುರುಮಾಡಿದರು… “ಕಳ್ಳತನವಾದ ಎರಡೂ ಮನೆಯ ಅಡಿಕೆಯನ್ನು ವಶಪಡಿಸಿಕೊಂಡಿದ್ದೇವೆ. ನಮ್ಮ ತಂಡವು ಹಗಲೂ ರಾತ್ರಿ ತನಿಖೆ ನಡೆಸಿ ಕಳ್ಳತನವಾದ ಅಡಿಕೆಯನ್ನು ಮರಳಿ ಪಡೆದಿದ್ದೇವೆ. ನಮ್ಮ ತಂಡದ ಶ್ರಮದ ಜೊತೆಗೆ ಸ್ಥಳೀಯರ ಸಹಾಯವೂ ಉತ್ತಮವಾಗಿತ್ತು ಮತ್ತು ರಾತ್ರಿಯ ವೇಳೆ ಕಾಫಿ ಕೃಷ್ಣಪ್ಪನವರು ಕೊಟ್ಟ ಮಾಹಿತಿ ತುಂಬಾನೆ ಉಪಯೋಗವಾಯಿತು.. !!” ಎಂದು ಎಸ್.ಐ ಹೇಳುವಾಗ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದರು. ಅಷ್ಟರಲ್ಲೇ ಪತ್ರಕರ್ತರು ನೂರಾರು ಪ್ರಶ್ನೆಗಳನ್ನು ಎತ್ತಿದ್ದರು.
ಕಳ್ಳತನದ ಆರೋಪಿಗಳ ಬಗ್ಗೆ ಹಾಗೂ ಅವರ ಕಳ್ಳತನದ ಯೋಜನೆಯ ಬಗ್ಗೆ ಮಾಹಿತಿ ಬೇಕೆಂದು ಕೇಳಿದ ಅಲ್ಲಿದ್ದ ಎಲ್ಲಾ ಪತ್ರಕರ್ತರ ಪ್ರಶ್ನೆಗಳಿಗೆ ಮತ್ತೆ ಉತ್ತರಿಸಿದ ಎಸ್.ಐ…. “ಇದೊಂದು ನಿಜಕ್ಕೂ ನಮಗೆ ಸವಾಲಿನ ತನಿಖೆ ಆಗಿತ್ತು. ಕಳ್ಳತನದ ನಂತರ, ಒಂದಿಚ್ಚೂ ಸುಳಿವನ್ನು ಸಹ ಎಲ್ಲಿಯೂ ಸಿಗದ ಹಾಗೆ ಕಳ್ಳತನ ನಡೆದಿದೆ. ಕದ್ದ ಅಡಿಕೆ ಸಿಕ್ಕಿರುವುದೇ ನಮ್ಮ ಅರ್ಧ ಗೆಲುವು. ಕಳ್ಳರನ್ನು ಹುಡುಕುವ ಕಡೆಗೇ ನಮ್ಮ ಪ್ರಯತ್ನ ಮುಂದುವರೆಯಲಿದೆ..!!” ಎಂದು ಎಸ್.ಐ ಹೇಳಿದಾಗ, ಅಲ್ಲಿದ್ದ ಎಲ್ಲರೂ ಅವರವರದೇ ಚರ್ಚೆ ಶುರುಮಾಡಿದರು.
ಮತ್ತೆ ಪತ್ರಕರ್ತರು ಪೋಲೀಸರಿಗೆ…, “ಯಾವುದೇ ಸುಳಿವನ್ನು ಬಿಟ್ಟುಕೊಡದೇ ಪರಾರಿಯಾದ ಕಳ್ಳರನ್ನು, ನೀವು ಮುಂದಿನ ತನಿಖೆಯಿಂದ ಹಿಡಿಯಲು ಹೇಗೆ ಯಶಸ್ವಿಯಾಗುತ್ತೀರಿ ??” ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ಮತ್ತೊಂದು ಪ್ರಶ್ನೆಯನ್ನು ಎತ್ತಿದ ಪತ್ರಕರ್ತರು.. “ಇದು ನಿಮ್ಮ ತನಿಖೆಯ ವಿಫಲ ಎಂದು ಏಕೆ ಪರಿಗಣಿಸಬಾರದು ??” ಎಂದಾಗ, ಇದಕ್ಕೆ ಎಸ್.ಐ ಉತ್ತರಿಸುವ ಮೊದಲೇ ಮತ್ತಷ್ಟು ಪ್ರಶ್ನೆಗಳು ಒಮ್ಮೆಲೇ ಬಂದು ಅಪ್ಪಳಿಸಲು ಶುರುವಾದವು… “ನೀವು ನಿಮ್ಮ ತನಿಖೆಯಲ್ಲಿನ ನಿಮ್ಮ ಸೋಲನ್ನು ಒಪ್ಪಿಕೊಂಡು ಬೇರೆಯವರಿಗೆ ತನಿಖೆಯನ್ನು ಹಸ್ತಾಂತರ ಮಾಡುವಿರಾ ??”….. ಹೀಗೆ ನೂರಾರು ವಿಚಿತ್ರ ಪ್ರಶ್ನೆಗಳು ಎಸ್.ಐ ಗೆ ಪತ್ರಕರ್ತರಿಂದ ಎದುರಾದವು. ಎಸ್.ಐ ಜಗದೀಶ್ ಅವರಿಗೆ ಕಳ್ಳತನದ ಕುರಿತು ಪತ್ರಕರ್ತರ ಸವಾಲಿನ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶವೇ ಸಿಗಲಿಲ್ಲ.
ಹೀಗೆ ಅನೇಕ ಪ್ರಶ್ನೆಗಳ ತೀವ್ರತೆಗೆ, ಪತ್ರಿಕಾಗೋಷ್ಠಿಯಲ್ಲಿ ಎಸ್.ಐ ಮತ್ತು ಅವರ ತನಿಖೆಯ ತಂಡಕ್ಕೆ ಇರಿಸುಮುರಿಸು ಉಂಟಾಯಿತು. ಅಲ್ಲಿದ್ದವರೆಲ್ಲಾ ಅವರವರ ಪಾಡಿಗೆ ಚರ್ಚಿಸಲು ಶುರುಮಾಡಿದರು. ಎಸ್.ಐ ಅವರು ಅಲ್ಲೇ ಇದ್ದ ಮೇಲಾಧಿಕಾರಿಗಳ ಬಳಿ ಹೋಗಿ, “ಸರ್.. ನೀವು ಹೇಳಿದ ಆದೇಶದಿಂದಲೇ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದು. ಇದೀಗ ಅದರಿಂದಲೇ ನಮ್ನ ಇಡೀ ತಂಡ ತಲೆ ತಗ್ಗಿಸುವಂತಾಯಿತು !!” ಎಂದು ಹೇಳುತ್ತಾ… ಮೇಲಾಧಿಕಾರಿಗಳೆದುರು, ಎಸ್.ಐ ತಮ್ಮ ಕೋಪವನ್ನು ಮುಲಾಜಿಲ್ಲದೇ ಹೊರಹಾಕಿದರು.
ಇಲ್ಲಿ ಪತ್ರಕರ್ತರೆಲ್ಲರೂ, ಕಳ್ಳರನ್ನು ಹಿಡಿಯದ ಎಸ್.ಐ ಜಗದೀಶ್ ಅವರದ್ದು ಯಶಸ್ವಿ ಅಲ್ಲದ ತನಿಖೆ ಎಂದು ಹೇಳಿ ಪ್ರಶ್ನಿಸುತ್ತಾ ಗೊಂದಲದ ವಾತಾವರಣ ಸೃಷ್ಟಿ ಮಾಡಿದ್ದರಿಂದ ಎಲ್ಲರ ಗಮನವೂ ಇಲ್ಲೇ ಇತ್ತು. “ಆದರೆ ಈ ಸಂದರ್ಭದಲ್ಲೂ ಎಸ್.ಐ ಅವರ ಬುದ್ಧಿವಂತಿಕೆ ಗೆಲುವಿನ ಹಾದಿ ಹಿಡಿದಿತ್ತು...” ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಈರಪ್ಪಣ್ಣ ಇಬ್ಬರೂ ಸೇರಿ ಹೊಸ ತಂತ್ರವನ್ನೇ ಹೂಡಿದ್ದರು. ಊರಿನ ಪ್ರಮುಖ ಸ್ಥಳಗಳಲ್ಲಿ ಸುತ್ತಲೂ ಹೆಚ್ಚಿನ ಪೋಲೀಸರನ್ನು ಬೇರೆ ಕಡೆಯಿಂದ ಕರೆಸಿ, ಸ್ಥಳೀಯ ಜನರ ಹಾಗೆ ಬಟ್ಟೆ ಧರಸಿ ಸೂಕ್ಷ್ಮವಾಗಿ ಗಮನಿಸುವಂತೆ ಹೇಳಿದ್ದರು.
ಇದೇ ಸಮಯಕ್ಕೆ ಕಾಫಿ ಕೃಷ್ಣಪ್ಪನ ಹೋಟೆಲ್ ಹಿಂಬದಿಯಿಂದ, ಮುಖವನ್ನು ಬಟ್ಟೆಯಿಂದ ಸುತ್ತಿಕೊಂಡು ಬಂದ ಇಬ್ಬರು ವ್ಯಕ್ತಿಗಳು.. ಹೋಟೆಲ್ ಗೆ ಬೆಂಕಿ ಹಚ್ಚುವ ಕೆಲಸದಲ್ಲಿ ಮುಳುಗಿರುವಾಗ, “ಅಲ್ಲೇ ಗಮನಿಸುತ್ತಿದ್ದ ಪೋಲೀಸರ ಕೈವಶ ವಾದರು”.
ಈ ವಿಷಯ ಎಸ್.ಐ ಗೆ ತಿಳಿದ ಕೂಡಲೇ, ಮುಸುಕು ಧರಿಸಿ ಬೆಂಕಿ ಹಚ್ಚಲು ಬಂದಿದ್ದ ಇಬ್ಬರನ್ನೂ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಕರೆತರಲು ಹೇಳಿದರು. ಗೊಂದಲದಿಂದ ಕೂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರನ್ನೂ ಸುಮ್ಮನಿರಲು ಹೇಳಿದ ಎಸ್.ಐ… ಇನ್ನೇನು ಕೆಲವೇ ಕ್ಷಣಗಳಲ್ಲಿ ಕಳ್ಳರನ್ನು ನಿಮ್ಮ ಮುಂದೆ ನಿಲ್ಲಿಸುತ್ತೇವೆಂದು ಹೇಳಿದಾಗ… ಎಲ್ಲರೂ ಸ್ಥಬ್ದರಾದರು. ಒಂದು ಸಣ್ಣ ಸದ್ದೂ ಹುಟ್ಟಲಿಲ್ಲ. ಅದೇ ಸಮಯಕ್ಕೆ ಅಲ್ಲಿಗೆ ಕರೆದುತಂದ ಇಬ್ಬರು ಮುಸುಕುದಾರಿ ವ್ಯಕ್ತಿಗಳ ಮುಖವನ್ನು ತೋರಿಸದೇ… “ನಮ್ಮ ತನಿಖೆಯಲ್ಲಿ ಯಾವ ವಿಫಲತೆಯೂ ಇಲ್ಲ. ಹಗಲು ರಾತ್ರಿಯ ಶ್ರಮ ನಮ್ಮ ತಂಡದ ಹೊರತು ಇಲ್ಲಿ ಪ್ರಶ್ನಿಸುತ್ತಿರುವ ನಿಮಗೆ ಅರಿವಿಲ್ಲ. ಈ ಇಬ್ಬರ ತನಿಖೆ ನಡೆಸಿ ಕಳ್ಳರ ಮಾಹಿತಿ ಸಮೇತ ಮತ್ತೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ..!!” ಎಂದು ಹೇಳಿದ ಎಸ್.ಐ ಜಗದೀಶ್ ಅವರು, ಇಬ್ಬರು ಮುಸುಕು ಧರಿಸಿದ್ದ ವ್ಯಕ್ತಿಗಳನ್ನು ಎಳೆದುಕೊಂಡು ಪತ್ರಿಕಾಗೋಷ್ಠಿ ನಡೆಯಿತ್ತಿದ್ದ ಸ್ಥಳದಿಂದ ಹೊರನಡೆದರು.
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ