
( Part – 8 )
ರಸ್ತೆ ನಡುವಲ್ಲೇ ಎರಡು ಟ್ರಾಕ್ಟರ್ ನಲ್ಲಿದ್ದ ದೊಡ್ಡ ಕಬ್ಬಿನ ಲೋಡ್ ನಲ್ಲಿ ಅಡಿಕೆ ಮೂಟೆಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾದರು. ಅದಾಗಲೇ ಸಮಯ ಬೆಳಗಿನ ಜಾವ 4 ಗಂಟೆ ಆಗಿತ್ತು. ಪೋಲೀಸರು ಟ್ರಾಕ್ಟರ್, ಕಬ್ಬು ಮತ್ತು ಅಡಿಕೆಯನ್ನು ಸ್ಟೇಷನ್ ಗೆ ಸಾಗಿಸುವಷ್ಟರಲ್ಲಿ ಬೆಳಗ್ಗೆ 5 ಗಂಟೆ ಆಗಿತ್ತು. ಬೆಳಗಿನ ಜಾವ ರಸ್ತೆಯಲ್ಲಿ ಓಡಾಡುವ ಕೆಲವರು ಇದನ್ನೆಲ್ಲ ನೋಡಿದ್ದರಿಂದ, ಒಬ್ಬರಿಂದ ಒಬ್ಬರಿಗೆ ವಿಷಯ ತಲುಪಿ ಇಡೀ ಊರಿಗೆ ರಾತ್ರಿ ನಡೆದ ತನಿಖೆ ಗೊತ್ತಾಗಿತ್ತು.
ಒಂದು ಕಡೆ ಎಸ್.ಐ ಜಗದೀಶ್ ಅವರ ತಂಡಕ್ಕೆ ಕಳ್ಳತನವಾಗಿದ್ದ ಅರ್ಧದಷ್ಟು ಅಡಿಕೆಯನ್ನು ವಶಪಡಿಸಿಕೊಂಡ ಸಂಭ್ರಮ. ಇನ್ನೊಂದು ಕಡೆ ಕಾಫಿ ಕೃಷ್ಣಪ್ಪನಿಗೆ ಎಲ್ಲರಿಂದಲೂ ಮೆಚ್ಚುಗೆಯ ಸುರಿಮಳೆ. ಸರಿಯಾದ ಸಮಯಕ್ಕೆ ವಿಷಯ ತಿಳಿಸಿದ ಕಾರಣಕ್ಕೆ ಕೃಷ್ಣಪ್ಪನನ್ನು ಎಲ್ಲರೂ ಮೆಚ್ಚಿಕೊಂಡರು… ಎಂದುಕೊಳ್ಳುವಷ್ಟರಲ್ಲಿ, ಕೆಲವರು ಕೃಷ್ಣಪ್ಪನ ಮೇಲೆಯೇ ಗೂಬೆ ಕೂರಿಸಿದರು. “ಇದರಲ್ಲಿ ಕೃಷ್ಣಪ್ಪನ ಕೈವಾಡ ಇದ್ದಿದ್ದರಿಂದಲೇ… ತನ್ನ ಹೆಸರು ಬರಬಾರದೆಂದು” ತಾನೇ ಈ ಮಾಹಿತಿಯನ್ನು ಪೋಲೀಸರಿಗೆ ನೀಡಿರಬಾರದೇಕೆಂಬ ಗುಸುಗುಸು ಹೆಚ್ಚಾಯಿತು.
ಈ ವಿಷಯ ಎಸ್.ಐ ಗೆ ಗೊತ್ತಾಗುತ್ತಿರುವ ಹಾಗೆ, ತಡಮಾಡದೇ ಪೋಲೀಸರು ಬೆಳಗ್ಗೆ 9 ಗಂಟೆಗೆ ಕೃಷ್ಣಪ್ಪನನ್ನು ಕರೆಸಿ ಎಲ್ಲವನ್ನೂ ವಿಚಾರಿಸಿದರು. ನಂತರ “ಇದರಲ್ಲಿ ಕೃಷ್ಣಪ್ಪನದ್ದು ಸಹಾಯವೇ ಹೊರತು.. ಕಳ್ಳತನಕ್ಕೂ ಅವನಿಗೂ ಸಂಬಂಧವಿಲ್ಲ !!” ಎಂದು ತಿಳಿಸಿದರು. ಅಷ್ಟೇ ಅಲ್ಲದೇ ನಡು ರಾತ್ರಿಯಲ್ಲಿ ಸರಿಯಾದ ಸಮಯಕ್ಕೆ ಮಾಹಿತಿ ನೀಡಿದ್ದಕ್ಕೆ ಪೋಲೀಸರಿಂದ ಸನ್ಮಾನವೂ ಆಯಿತು. ಇದಾದ ನಂತರ ಕೃಷ್ಣಪ್ಪ ಸ್ವಲ್ಪ ನಿಟ್ಟುಸಿರು ಬಿಟ್ಟನು. ಹೋಟೆಲ್ ನಲ್ಲಿ ಜನರ ಸಂಖ್ಯೆಯೂ ಹೆಚ್ಚಿತು. ಎಲ್ಲರೂ ಕೃಷ್ಣಪ್ಪನಿಗೆ ಶುಭಾಶಯ ತಿಳಿಸಲು ಬರತೊಡಗಿದರು.
ಟ್ರಾಕ್ಟರ್ ಅನ್ನು ವಶಪಡಿಸಿಕೊಂಡ ಪೋಲೀಸರಿಗೆ ಅದರ ಮಾಲೀಕರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವೇ ಆಗಿಲ್ಲದಿದ್ದರೂ, ಟ್ರಾಕ್ಟರ್ ನಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಣ ಗಾಡಿ ಯಾರದೆಂಬುದನ್ನು ಕಂಡು ಹಿಡಿಯಲು ಸ್ವಲ್ಪ ಸಮಯ ಬೇಕಾಗಿತ್ತು. ಇದೇ ವೇಳೆ ತಡಮಾಡದ ಪೋಲೀಸರು ಪ್ರತಿ ಮನೆಯಲ್ಲೂ ತೋಟದಲ್ಲೂ ಒಂದಿಚ್ಚೂ ಬಿಡದೇ ಹುಡುಕಾಟ ನಡೆಸಿದರು. ಸಂಜೆಯ ಹೊತ್ತಿಗೆ ಎಲ್ಲರ ಮನೆಯ ತನಿಖೆಯನ್ನು ಪೂರ್ಣಗೊಳಿಸಿದರು. “ವಿಚಿತ್ರ ಏನೆಂದರೆ….. ಯಾರ ಮನೆಯಲ್ಲೂ ಉಳಿದ ಅರ್ಧದಷ್ಟು ಅಡಿಕೆ ಸಿಗಲೇ ಇಲ್ಲ !!”.
ಕದ್ದ ಮಾಲು ಸಿಕ್ಕರೂ ಕಳ್ಳರು ಸಿಗದೇ ಇರಲು ಹೇಗೆ ಸಾಧ್ಯ ಎಂದು ಎಸ್.ಐ ಯೋಚಿಸುವಷ್ಟರಲ್ಲಿ ಸಂಜೆಯಾಗಿತ್ತು. ಪೋಲೀಸರ ವಶದಲ್ಲಿದ್ದ ಟ್ರಾಕ್ಟರ್ ನ ಡ್ರೈವರ್ ಗಳು, ಹಿಂದಿನ ದಿನದ ಸಂಜೆ ಕಬ್ಬಿನ ಲೋಡ್ ತುಂಬಿಸಿ ಟ್ರಾಕ್ಟರ್ ನಿಲ್ಲಿಸಿದ್ದ ಜಾಗದಲ್ಲೊಮ್ಮೆ… ಸುತ್ತಲೂ ಹುಡುಕಿ ಎಂದು ಎಸ್.ಐ ಉಳಿದ ಪೋಲೀಸರಿಗೆ ಸೂಚಿಸದರು. ಅಲ್ಲಿ ಸುತ್ತಲೂ ಹುಡುಕುವಾಗ, “ಇನ್ನೂ ಸಂಜೆಯ ಬೆಳಕು ಹಾಗೆಯೇ ಇರುವ ಹೊತ್ತಿಗೆ ಒಂದಿಷ್ಟು ಅಡಿಕೆ ಮೂಟೆಗಳು ಅಲ್ಲಿಯೇ ಮರದಡಿಯಲ್ಲಿ ಪತ್ತೆಯಾದವು.”
ಕೊನೆಗೆ ಪೋಲೀಸರು ಅಡಿಕೆ ಮೂಟೆಗಳನ್ನು ವಶಪಡಿಸಿಕೊಂಡು ಸ್ಟೇಷನ್ ಗೆ ಸಾಗಿಸಿದರು. ಅಂತೂ ಎರಡೂ ಮನೆಯಲ್ಲಿ ಕಳ್ಳತನವಾಗಿದ್ದ ಅಡಿಕೆಯನ್ನು ಪತ್ತೆಹಚ್ಚುವಲ್ಲಿ ಪೋಲೀಸರು ಯಶಸ್ವಿಯಾದರು. “ಆದರೆ ಕಳ್ಳರ ಸುಳಿವು ಸಿಕ್ಕೇ ಇರಲಿಲ್ಲ..”. ಟ್ರಾಕ್ಟರ್ ಎಲ್ಲಿಂದ ಬಂದಿದೆ ಎಂಬ ತನಿಖೆ ನಾಳೆ ಮಧ್ಯಾಹ್ನದ ಮೊದಲೇ ಆಗಬೇಕೆಂದು ಹೆಡ್ ಕಾನ್ಸ್ಟೇಬಲ್ ಗೆ ಎಸ್.ಐ ಹೇಳಿದರು.
ಬಹುಬೇಗ ನಾಳೆಯೂ ಆಗಿತ್ತು. ಮಧ್ಯಾಹ್ನದ ಹೊತ್ತಿಗೆ ಟ್ರಾಕ್ಟರ್ ನ ಮಾಹಿತಿಯೂ ಸಿಕ್ಕಿತ್ತು. ಟ್ರಾಕ್ಟರ್ ನ ದಾಖಲೆಗಳ್ಯಾವುದೂ ಸರಿಯಾದ ರೀತಿಯಲ್ಲಿ ಇರಲಿಲ್ಲ. ಅದನ್ನು ಮೊದಲ ಭಾರಿ ಖರೀದಿಸಿದ್ದ ಓನರ್ ಮಾಹಿತಿ ಸಿಕ್ಕಿತು. ಆನಂತರ ಅದನ್ನು ಯಾರು ತೆಗೆದುಕೊಂಡರು ಮತ್ತು ಯಾರ್ಯಾರಿಂದ ಯಾರಿಗೆ ಮಾರಿದ್ದರು ಎಂಬ ಮಾಹಿತಿ ಪೂರ್ಣವಾಗಿ ಸಿಗಲಿಲ್ಲ. “ಕೊನೆಯಲ್ಲಿ ಸಂಜೆಯ ವೇಳೆಗೆ ತಮ್ಮ ತನಿಖೆಯ ತಂಡದಲ್ಲಿದ್ದ ಎಲ್ಲಾ ಪೋಲೀಸರು, ಮೇಲಾಧಿಕಾರಿಗಳು, ಊರಿನ ಮುಖಂಡರು ಹಾಗೂ ಸಹಾಯ ಮಾಡಿದ್ದ ಕಾಫಿ ಕೃಷ್ಣಪ್ಪ ಮತ್ತು ಇನ್ನೂ ಮುಂತಾದವರ ಸಮ್ಮುಖದಲ್ಲಿ ಎಸ್.ಐ ಜಗದೀಶ್ ಅವರು, ಪತ್ರಿಕಾಗೋಷ್ಠಿಯನ್ನು ನಡೆಸಿದರು..” ಕಳ್ಳತನವಾಗಿದ್ದ ಎರಡೂ ಮನೆಯ ಯಜಮಾನರಾದ ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕ ಮತ್ತು ಕತ್ತಲುಬ್ಯಾಣದ ದೇವೇಂದ್ರಣ್ಣ ಕೂಡ ಉಪಸ್ಥಿತರಿದ್ದರು.
ಕಳ್ಳತನದ ನಂತರದಲ್ಲಿ ತನಿಖೆ ಏನಾಯಿತು, ಹೇಗಾಯಿತು… ಮತ್ತು ಆಗಮಿಸಿದ್ದ ಪತ್ರಕರ್ತರ “ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಎಸ್.ಐ ಜಗದೀಶ್ ಎದ್ದು ನಿಂತರು”. ಪಕ್ಕದಲ್ಲಿ ಹೆಡ್ ಕಾನ್ಸ್ಟೇಬಲ್ ಈರಪ್ಪಣ್ಣ ಕೂಡ ಇದ್ದರು.
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ