
( Part – 6 )
ಕಳ್ಳರನ್ನು ಹಾಗೂ ಕಳ್ಳರು ಕದ್ದ ಅಡಿಕೆಯನ್ನು ಹುಡುಕುವುದು ಎಸ್.ಐ ಜಗದೀಶ್ ಅವರಿಗೆ ತುಂಬಾನೆ ಮುಖ್ಯವಾಗಿತ್ತು. ಮೇಲಾಧಿಕಾರಿಗಳ ಒತ್ತಡ ಮತ್ತು ರಾಜಕಾರಣಿಗಳ ಮಾತುಗಳು ಹೇಗಿತ್ತು ಎಂದರೆ, ಈ ಪ್ರಕರಣವನ್ನು ಭೇದಿಸದಿದ್ದರೆ.. “ತನಿಖೆ ವಿಫಲ” ಎಂದು ಪರಿಗಣಿಸಿ ಬೇರೆ ಊರಿಗೆ ವರ್ಗಾವಣೆ ಮಾಡಿ, ಈ ಕೇಸನ್ನು ಬೇರೊಬ್ಬರಿಗೆ ವಹಿಸುವಷ್ಟು ಗಂಭೀರವಾಗಿತ್ತು.
ಎಸ್.ಐ ಅವರು ಹೆಡ್ ಕಾನ್ಸ್ಟೇಬಲ್ ಈರಪ್ಪಣ್ಣನಿಗೆ.. “ಅಡಿಕೆ ಕದ್ದ ಕಳ್ಳರು ಊರಿಂದಾಚೆಗೆ ಹೋಗಿರಬಹುದು… ಆದರೆ ಕಳ್ಳರು ಕದ್ದ ಅಡಿಕೆ ಮಾತ್ರ ಊರಿನ ಒಳಗಡೆಯೇ ಇದೆ !!” ಎಂದಾಗ ಈ ವಿಚಾರದ ಬಗ್ಗೆ ಈರಪ್ಪಣ್ಣನಿಗೆ ನಂಬಿಕೆ ಬರಲಿಲ್ಲ. ಹೋಟೆಲ್ ನಿಂದ ಹೊರಗಡೆ ಕರೆದುಕೊಂಡು ಬಂದು, “ಸರ್.. ಮೊತ್ತೊಮ್ಮೆ ನಾವು, ಈಗ ನೀವು ಕೊಟ್ಟ ಸುಳಿವಿನಂತೆ ತನಿಖೆ ಮಾಡಿ.. ಮತ್ತೆ ಈ ಹಿಂದೆ ಆದಂತೆ ಎಡವಿದರೆ, ನಿಮ್ಮನ್ನು ಈ ಪ್ರಕರಣದಿಂದ ವಜಾಗೊಳಿಸಿ, ಬೇರೆ ಕಡೆಗೆ ವರ್ಗಾವಣೆ ಮಾಡುವುದಂತೂ ಖಚಿತ !!” ಎಂದು ಎಸ್.ಐ ಗೆ ಹೆಡ್ ಕಾನ್ಸ್ಟೇಬಲ್ ಹೇಳಿದನು.
ಎಸ್.ಐ ಜಗದೀಶ್ ಗೆ ತುಂಬಾನೆ ಆಳವಾದ ನಂಬಿಕೆ ಇತ್ತು. ಮರುದಿನವೇ ಪೋಲೀಸ್ ಸ್ಟೇಷನ್ ನಲ್ಲಿ ಒಂದು ತಂಡವನ್ನು ರಚಿಸಿ, ಹೊರಗಡೆ ವಿಷಯ ಗೊತ್ತಾಗದ ಹಾಗೆ ಈ ತನಿಖೆ ಮುಂದುವರೆಸಬೇಕೆಂದು ತಾವು ರಚಿಸದ ಹೊಸ ತಂಡದಲ್ಲಿದ್ದ ಐದೂ ಜನ ಕಾನ್ಸ್ಟೇಬಲ್ ಗೆ ಹೇಳಿದರು. “ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಸೇರಿ ಒಟ್ಟಾರೆ 7 ಜನರ ಪೋಲೀಸ್ ತಂಡ ಇದಾಗಿತ್ತು”.
ಎಲ್ಲೋ ಬೆಂಕಿ ಹತ್ತಿಸಿ, ಇನ್ನೆಲ್ಲೋ ಅಡಿಕೆ ಕದಿಯುತ್ತಿದ್ದ ಕಳ್ಳರನ್ನು ಬೇಟೆಯಾಡುವ ಈ ತನಿಖೆಗೆ “ಆಪರೇಷನ್ ಬೆಂಕಿ ಮನೆ ಕಳ್ಳರು !!” ಎಂದು ಎಸ್.ಐ ಕರೆದರು. ಸುಮಾರು 2-3 ದಿನಗಳ ವರೆಗೂ, ತಮ್ಮ ತಂಡದಲ್ಲಿದ್ದ ಪೋಲೀಸರಿಗೆ ಹೇಗೆ ಮುಂದಿನ ಹಜ್ಜೆ ಇಡಬೇಕೆಂದು ವಿವರಿಸಿದರು. ಎಸ್.ಐ ಜಗದೀಶ್ ಅವರ ಪ್ರಕಾರ, ಈ ವರೆಗೂ ಕಳ್ಳತನವಾಗಿದ್ದ ಯಾವುದೇ ಮಾಲನ್ನು ಕಳ್ಳರು ಊರಿನ ಹೊರಗೆ ಸಾಗಿಸಿರುವ ಪ್ರಮಾಣ ತುಂಬಾ ಕಡಿಮೆ ಎಂಬುದು. ಹಾಗೆಯೇ ಕಳ್ಳರು ಅಡಿಕೆಯನ್ನು ಊರಿನ ಹೊರಗೆ ಸಾಗಿಸಿರುವುದಕ್ಕೆ ಯಾವುದೇ ಸಾಕ್ಷಿ ಪುರಾವೆಗಳೂ ಇರಲಿಲ್ಲ.
ಕೊನೇಯದಾಗಿ ಎಸ್.ಐ ಜಗದೀಶ್, ಆಪರೇಷನ್ ಬೆಂಕಿ ಮನೆ ಕಳ್ಳರು ತನಿಖೆಯ ತಂಡಕ್ಕೆ ಹೀಗೆ ಹೇಳಿದರು... “ಕಳ್ಳರು ಕದ್ದ ಮಾಲು ಊರಿನ ಒಳಗಡೆಯೇ ಇದೆ !! ಮತ್ತು ಕಳ್ಳರು ಊರಿನ ಹೊರಗಿನವರೋ ಅಥವಾ ಒಳಗಿನವರೋ ಎಂಬುದು ನಾವು ಕಂಡು ಹಿಡಿಯಬೇಕಿದೆ. ಎಲ್ಲದ್ದಕ್ಕಿಂತ ಮೊದಲು ನಾವು ಗೌಪ್ಯವಾಗಿ ಊರಿನ ಒಳಗಡೆ, ಕದ್ದು ಮುಚ್ಚಿಟ್ಟಿರಬಹುದಾದ ಅಡಿಕೆಯನ್ನು ಹುಡುಕಬೇಕು. ಮುಖ್ಯವಾಗಿ ಈ ವಿಷಯದಲ್ಲಿ ಊರಿನವರನ್ನು ಅಥವಾ ಹೊರಗಿನವರನ್ನು ಯಾರೊಬ್ಬರನ್ನೂ ನಂಬಬೇಡಿ. ಯಾರೊಂದಿಗೂ ಚರ್ಚಿಸಬೇಡಿ.. ಏಕೆಂದರೆ ಕಳ್ಳರು ಹೊರಗಿನವರೇ ಆದರೂ ಊರಿನ ಒಳಗಿನವರ ಸಹಾಯವಿಲ್ಲದೇ ಆ ಕಳ್ಳರು ಇಷ್ಟು ಅಚ್ಚುಕಟ್ಟಾಗಿ ಕಳ್ಳತನ ಮಾಡಲು ಸಾಧ್ಯವೇ ಇಲ್ಲಾ !!” ಎಂದು ಎಸ್.ಐ ಅವರು ತನಿಖೆಯ ತಂಡಕ್ಕೆ ಕಟ್ಟುನಿಟ್ಟಾಗಿ ಆದೇಶಿಸಿದರು.
ಸದ್ದಿಲ್ಲದೇ ಪೋಲೀಸರು ಆಪರೇಷನ್ ಬೆಂಕಿಮನೆ ಕಳ್ಳರು ಶುರುಮಾಡಿದ್ದರು. ಕಳ್ಳರ ಬುದ್ದಿವಂತಿಕೆಗೆ ಎಸ್.ಐ ಜಗದೀಶ್ ಅವರು ಮೊದಲ ಏಟನ್ನು ಕೊಡಲು ಎಲ್ಲಾ ತಯಾರಿ ನಡೆಸಿದರು. ಊಹಿಸಲಾಗದ ರೀತಿಯಲ್ಲಿ ತನಿಖೆ ನಡೆಯುತಿತ್ತು. ಊರಿನ ಮೂಲೆ ಮೂಲೆಯಲ್ಲಿ ಕದ್ದು ಅಡಗಿಸಿಟ್ಟ ಅಡಿಕೆಗೆ ಹುಡುಕಾಟ ಆರಂಭವಾಗಿತ್ತು. ಊರಿನ ಜನರಿಗೆ ಪೋಲೀಸರು ಏನೋ ಮಾಡುತ್ತಿದ್ದಾರೆಂಬ ವಿಷಯ ಗೊತ್ತಾಗುತ್ತಿತ್ತು ಆದರೆ ಏನನ್ನು ಮಾಡುತ್ತಿದ್ದಾರೆಂಬುದು ತಿಳಿದುಕೊಳ್ಳಲು ಆಗಿರಲಿಲ್ಲ. “ಪೋಲೀಸರು ಯಾರಿಗೂ ತಿಳಿಯದ ಹಾಗೆ ಏನೋ ಮಾಡುತ್ತಿದ್ದಾರೆ ಎಂಬುದು..” ಕಾಫಿ ಕೃಷ್ಣಪ್ಪನ ಹೋಟೆಲ್ ನಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗುತ್ತಾ ಸಾಗಿತು.
ಒಂದು ಕಡೆ ಎಸ್.ಐ ಜಗದೀಶ್ ನೇತೃತ್ವದಲ್ಲಿ ಪೋಲೀಸರು ಊರಿನ ಮೂಲೆ ಮೂಲೆಗಳಲ್ಲಿ ಕದ್ದು ಮುಚ್ಚಿಟ್ಟಿರಬಹುದಾದ ಅಡಿಕೆಗೆ ಹುಡುಕಾಟ ನಡೆಸುತ್ತಿದ್ದರೆ… ಇನ್ನೊಂದು ಕಡೆ, “ಪೋಲೀಸರು ಗುಟ್ಟಾಗಿ ನಡೆಸುತ್ತಿದ್ದ ತನಿಖೆಯ ಅರಿವೇ ಇಲ್ಲದೆ, ಮತ್ತೆ ಊರಿಗೆ ಕಾಲಿಡಲು ಕಳ್ಳರು ತಯಾರಿ ನಡೆಸುತ್ತಿದ್ದರು..!!”
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ
Nice story sir
LikeLiked by 1 person
ತುಂಬಾನೆ ಧನ್ಯವಾದಗಳು.. 💐💐💐😊 ಭಾಗ ಎಂಟರ ವರೆಗೂ ಬಿಡುಗಡೆಯಾಗಿದೆ.. ಓದಿ, ಅಭಿಪ್ರಾಯ ವ್ಯಕ್ತಪಡಿಸಿ.. ಧನ್ಯವಾದಗಳು 💐
LikeLike