“ಬೆಂಕಿ‌ ಮನೆ ಕಳ್ಳರು” !! (ಭಾಗ – 5)

“ಬೆಂಕಿ‌ ಮನೆ ಕಳ್ಳರು” !!
( Part – 5 )

“ಕೊನೆಗೂ ಅಡಿಕೆ ಕಳ್ಳರ ಕಥೆಗೆ ಅಂತ್ಯ ಸಿಕ್ಕಿತು..!!” ಎಂದು  ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾ ಕಾರಿನಿಂದ ಇಳಿದು, ಪಿಸ್ತೂಲ್ ಹಿಡಿದು ನಿಂತಿದ್ದ ಎಸ್.ಐ ಅವರ ಪಕ್ಕಕ್ಕೆ ಹೋಗಿ ನಿಂತನು.‌ ಮೂರು ಪಿಕ್ ಅಪ್ ನಲ್ಲಿದ್ದ ಕಳ್ಳರು ಈ‌ ರೀತಿಯಾಗಿ ತಾವು ಸಿಕ್ಕಿ ಹಾಕಿಕೊಳ್ಳುತ್ತೇವೆಂಬ ಯಾವುದೇ ನಿರೀಕ್ಷೆ ಮಾಡಿರದ ಕಾರಣ, ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚದೇ ಯೋಚಿಸುವಷ್ಟರಲ್ಲಿ… ಮುಂದೆ ಇದ್ದ ಸುಮಾರು ಜನ ಪೋಲೀಸರು ಮೂರೂ ಗಾಡಿಯನ್ನು ಸುತ್ತುವರೆದರು. ಜೊತೆಗೆ ಎಸ್.ಐ ಕೈಯಲ್ಲಿದ್ದ ಪಿಸ್ತೂಲ್ ಕಳ್ಳರಲ್ಲಿ ಜೀವ ಭಯ ಹುಟ್ಟಿಸಿತ್ತು‌.‌ ಮೂರೂ ಪಿಕ್ ಅಪ್ ನಿಂದ ಮೂರು ಜನ ಕಳ್ಳರನ್ನು ಕೆಳಗಿಳಿಸಿದ ಪೋಲೀಸರು, ತಮ್ಮ ಜೀಪಿನಲ್ಲಿ ಆ ಮೂವರು ಡ್ರೈವರ್‌ ಗಳ ಸಮೇತ ಪೋಲೀಸ್ ಸ್ಟೇಷನ್ ಕಡೆಗೆ ಹೊರಟರು. ಪಿಕ್ ಅಪ್ ನಲ್ಲಿದ್ದ ಅಡಿಕೆಯನ್ನು ಗಜಕೋಲು ಬಂಗಲೆಯ ಹೊನ್ನಪ್ಪನ ಮನೆಗೆ ಹಿಂದಿರುಗಿಸಿ, ಗಾಡಿಯನ್ನು ವಶಪಡಿಸಿಕೊಂಡು ಸ್ಟೇಷನ್ ಕಡೆಗೆ ಹೊರಟರು.

“ಅಡಿಕೆ ಕದಿಯುತ್ತಿದ್ದ ಬೆಂಕಿ‌ ಕಳ್ಳರು ಸಿಕ್ಕೇಬಿಟ್ಟರು..!!” ಹೀಗೆಂದು ಇಡೀ ಊರಿಗೆ ಅದೆಷ್ಟು ವೇಗವಾಗಿ ಹರಡಿತ್ತು ಎಂದರೆ, ಪೋಲೀಸರು ತಾವು ವಶಪಡಿಸಿಕೊಂಡ ಮೂವರು ಕಳ್ಳರು ಮತ್ತು ಪಿಕ್ ಅಪ್ ಗಾಡಿಗಳನ್ನು ಪೋಲೀಸ್ ಸ್ಟೇಷನ್ ಗೆ ತರುವಷ್ಟರಲ್ಲಿ… ಸುಮಾರು ಜನರು ಮಧ್ಯಾಹ್ನದ ಹೊತ್ತಿಗೆ ಸ್ಟೇಷನ್ ನ ಸುತ್ತಲೂ ಸೇರಿದ್ದರು.‌ ದಿನಗಳಲ್ಲಿ ಒಂದೆರೆಡು ನಿಮಿಷಕ್ಕೂ ಹೋಟೆಲ್ ಮುಚ್ಚದ ಕಾಫಿ ಕೃಷ್ಣಪ್ಪ, ಕಳ್ಳರು ಯಾರೆಂದು ನೋಡುವ ಸಲುವಾಗಿ ಹೋಟೆಲ್ ಗೆ ಬೀಗ ಜಡಿದು ಸ್ಟೇಷನ್ ನ ಸಮೀಪ ಓಡಿದ್ದನು.

ಪೋಲೀಸ್ ಜೀಪ್ ಬಂದೇ ಬಿಟ್ಟಿತು‌. ಜೀಪಿನಿಂದ ಕಳ್ಳರನ್ನು ಇಳಿಸಿ ಸ್ಟೇಷನ್ ಒಳಗೆ ಕರೆದೊಯ್ದರು. ಸೇರಿದ್ದ ಜನರೆಲ್ಲಾ ಪೋಲೀಸರಿಗೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದರು.  ರಾಜಕಾರಣಿಗಳು ಮತ್ತು ಮೇಲಾಧಿಕಾರಿಗಳಿಂದ ಎಸ್.ಐ ಗೆ ಶುಭಾಶಯದ ಕರೆಗಳು ಬರಲಾರಂಭಿಸಿದವು. ಜೊತೆಗೆ ಆದಷ್ಟು ಬೇಗ ತನಿಖೆ ಮುಗಿಸಿ ಅವರು ಕದ್ದ ಅಡಿಕೆಯ ಮಾಹಿತಿಯನ್ನು ಪಡೆಯಲು ಎಸ್.ಐ ಗೆ ಸೂಚಿಸಿದರು. ಸೇರಿದ್ದ ಜನರೆಲ್ಲಾ ಕಳ್ಳರನ್ನು ನೋಡಿ, ಅಂತೂ ನಾವು ಈ ಮಹಾನುಭಾವರನ್ನು ನೋಡಿಯೇ ಬಿಟ್ಟೆವು ಎಂದು ನಿಟ್ಟುಸಿರು ಬಿಟ್ಟು ಮನೆ ಕಡೆಗೆ ಹೊರಟರು. ಕಾಫಿ ಕೃಷ್ಣಪ್ಪ ತಡಮಾಡದೇ ತನ್ನ ಹೋಟೆಲ್ ಗೆ ಹೋಗಿ ತಾನು ಹಾಕಿದ್ದ‌‌… “ಕಾಫಿ ಕೃಷ್ಣಪ್ಪನ‌ ಹೋಟೆಲ್ ನಲ್ಲಿ ಬೆಂಕಿ ಕಳ್ಳರು ಸಿಗುವವರೆಗೂ ಕಾಫಿ ಉಚಿತ” ಎಂಬುವ ಬೋರ್ಡ್ ಅನ್ನು ತೆಗೆದನು. ಇನ್ನು ಮುಂದೆ ಜನರು ಈ ಕಳ್ಳರ ಟೆನ್ಷನ್ ನಿಂದಾಗಿ ನಾನು ಮಾಡುವ ಕಾಫಿಯನ್ನು ಮರೆಯುವಂತಿಲ್ಲ ‌ಎಂದು ಮನಸಾರೆ ಸಂತೋಷ ಪಟ್ಟನು.

ಸಂಜೆ ಆಗುವಷ್ಟರಲ್ಲಿ ಪೋಲೀಸರು ಕಳ್ಳರೆದುರು ತನಿಖೆ ಆರಂಭಿಸಿದ್ದರು. ತನಿಖೆಯ ಮೊದಲ ಹಂತದಲ್ಲೇ ಎಸ್.ಐ ಗೆ “ನಾನು ಮತ್ತೆ ಸೋತಿದ್ದೇನೆ” ಎನ್ನುವುದು ಅರಿವಾಯಿತು. ಅಲ್ಲಿದ್ದ ಮೂವರು ಕಳ್ಳರು, ಪೋಲೀಸರು ಹುಡುಕುತ್ತಿದ್ದ ಅಡಿಕೆ‌‌ ಕಳ್ಳರು ಆಗಿರಲಿಲ್ಲ. ಲಕ್ಷಗಟ್ಟಲೆ ಬೆಲೆಬಾಳುವ ಮೂಟೆ ಗಟ್ಟಲೆ ಅಡಿಕೆ ಮತ್ತು ಹಸಿ ಅಡಿಕೆ ಕದ್ದಿದ್ದ ಕಳ್ಳರು ಮತ್ತೆ ಊರಿನ ಕಡೆಗೆ ಬರದ ಕಾರಣ, “ಅದನ್ನೇ ಘಾಳ ಮಾಡಿಕೊಂಡ ಅಕ್ಕ ಪಕ್ಕದ ಊರಿನವರು ಆ ಕಳ್ಳರ ಹೆಸರಿನಲ್ಲೇ ತಾವು ಕಳ್ಳತನ ಮಾಡಲು ಹೊರಟಿರುವುದು‌‌‌..” ತನಿಖೆಯಿಂದ ಗೊತ್ತಾಯಿತು. ಎಸ್.ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಇಬ್ಬರೂ ಈ ಮೂವರು ಕಳ್ಳರ ಬಗ್ಗೆ ಎಲ್ಲಾ ಮಾಹಿತಿಯನ್ನು ಕಲೆಹಾಕಿ ರಾತ್ರಿಯಿಡೀ ತನಿಖೆ ನಡೆಸಿದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಈ ಮೂವರು ಕಳ್ಳರೇ.., ಹಿಂದೆ ಅಡಿಕೆ ಕದಿಯುತ್ತಿದ್ದ ಕಳ್ಳರು ಎನ್ನಲು ಯಾವ ಸಾಕ್ಷಿಯೂ ಸಿಗಲಿಲ್ಲ. ಅವರ ಹೆಸರಿನಲ್ಲಿ ಇವರು ಕಳ್ಳತನಕ್ಕೆ ಮುಂದಾಗಿರುವುದು ತನಿಖೆಯಿಂದ ಸಾಬೀತಾಯಿತು.

ಪೋಲೀಸರ ವಶದಲ್ಲಿದ್ದ ಈ ಮೂವರು ಕಳ್ಳರನ್ನೇ ಹಿಂದೆ ಕದ್ದಿದ್ದ ಅಡಿಕೆಯ‌ ಕಳ್ಳರು ಎಂದು ಸಾಕ್ಷಿಗಳನ್ನು ಸಿದ್ದಪಡಿಸಿ, ಈ ಕೇಸಿಗೆ ಸುಖಾಂತ್ಯ ಹಾಡುವುದು ಎಸ್.ಐ ಗೆ ಕಷ್ಟವೇನು ಆಗಿರಲಿಲ್ಲ‌. “ಸರ್.. ನಾಳೆ ಬೆಳಗಾದರೆ ಊರಿನ ಜನರು, ಮೇಲಾಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಹೇಗೆ ಉತ್ತರ ಕೊಡುತ್ತೀರ..??” ಎಂದು ಹೆಡ್ ಕಾನ್ಸ್‌ಟೇಬಲ್, ಎಸ್.ಐ ಜಗದೀಶ್ ಅವರನ್ನು ಸಮಾಧಾನ ಪಡಿಸುತ್ತಾ ಕೇಳಿದನು. ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣನ ಪ್ರಶ್ನೆಗೆ ಉತ್ತರಿಸಿದ ಎಸ್.ಐ…. “ಈ ಮೂವರನ್ನೇ ಅಡಿಕೆ ಕಳ್ಳರಂತೆ ಬಿಂಬಿಸುವುದು ಕಷ್ಟವೇನಲ್ಲಾ.. ಆದರೆ‌ ಇದರಿಂದ ನಾನು ಆಸೆ ಪಟ್ಟು ಕಷ್ಟ ಪಟ್ಟು ಓದಿ ದಕ್ಕಿಸಿಕೊಂಡ ಈ‌ ಪೋಲೀಸ್ ಕೆಲಸಕ್ಕೆ ದ್ರೋಹ ಮಾಡಿದಾಂತಾಗುತ್ತದೆ..!!”‌ ಎಂದು ಎಸ್.ಐ ಹೇಳಿದನು.

ರಾತ್ರಿ ಕಳೆದು ಬೆಳಗಾದಾಗ ಊರಿನ ಜನರಿಗೆ.. “ಈ ಕಳ್ಳರು, ಅಡಿಕೆ ಕದಿಯುತ್ತಿದ್ದ ಬೆಂಕಿ ಕಳ್ಳರು ಅಲ್ಲವಂತೆ!!” ಎಂದು ಗೊತ್ತಾದ ಮೇಲೆ.. ಹಲವರು ಪೋಲೀಸರ ತನಿಖೆಯ ಕುರಿತು ತಮಾಷೆ ಮಾಡಿ‌ದರು. ಇನ್ನೂ ಕೆಲವರು, ಪೋಲೀಸರು ಇಂದಲ್ಲಾ ನಾಳೆ ಆ ಅಡಿಕೆ ಕಳ್ಳರನ್ನು ಹಿಡಿಯುತ್ತಾರೆಂದು ಅವರ ತನಿಖೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು.  ಮೇಲಾಧಿಕಾರಿಗಳು ಮತ್ತು ರಾಜಕಾರಣಿಗಳ ವಿಚಿತ್ರ ಪ್ರಶ್ನೆಗಳಿಗೆ, ಒತ್ತಡಗಳಿಗೆ ಸಮಾಧಾನವಾಗಿ ಉತ್ತರಿಸುವಷ್ಟರಲ್ಲಿ ಎಸ್.ಐ ಅವರಿಗೆ ತುಂಬಾನೆ‌ ಕಷ್ಟವಾಗಿತ್ತು. ಅಂತೂ ಹಾಗೆ ಹೀಗೆ.. ಎಂದು‌ ಏನೇನೋ ಹೇಳಿ, ಆದಷ್ಟು ಬೇಗ ಅಡಿಕೆ ಕಳ್ಳರನ್ನು ಹಿಡಿಯುತ್ತೇನೆಂದು ಹೇಳುತ್ತಲೇ.. ಮೇಲಾಧಿಕಾರಿಗಳ ಕಛೇರಿಯಿಂದ ಆಚೆ ಬಂದ ಎಸ್.ಐ ಗೆ ಈ ಕೆಲಸವೇ ಸಾಕು ಸಾಕು ಎನಿಸಿತ್ತು.

ಇಷ್ಟೆಲ್ಲಾ ಆಗುವಷ್ಟರಲ್ಲಿ ಸಂಜೆ ಆಗಿತ್ತು. ಸ್ಟೇಷನ್ ಗೆ ಬಂದ ಎಸ್.ಐ ಜಗದೀಶ್, ಹೆಡ್ ಕಾನ್ಸ್‌ಟೇಬಲ್ ಅವರ ಜೊತೆ ಕಾಫಿ ಕೃಷ್ಣಪ್ಪನ ಹೋಟೆಲ್ ಗೆ ಹೋಗಿ ಕುಳಿತರು. ಎಸ್.ಐ ಹೋಟೆಲ್ ಗೆ ಹೋಗುತ್ತಿದ್ದಂತೆ‌.‌.. ಅಲ್ಲಿದ್ದವರೆಲ್ಲಾ ತಮ್ಮ ಕಾರ್ಯಕ್ಕೆ ಬಾರದ ಮಾತುಗಳನ್ನು ಕಮ್ಮಿ ಮಾಡಿ ಸುಮ್ಮನಾದರು. ಎಸ್.ಐ ಗೆ ನಮಸ್ಕಾರ ಮಾಡಿದ ಕಾಫಿ ಕೃಷ್ಣಪ್ಪ ಕಾಫಿ ತಂದು ಕೊಟ್ಟನು. ಅಲ್ಲೇ ಇದ್ದ ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ.. “ಏನ್ ಕಾಫಿ ಕೃಷ್ಣಪ್ಪ.. ನಿನ್ನೆ ಕಳ್ಳರನ್ನು ನೋಡ್ಬೇಕಂತ, ನೀನ್ ಇಷ್ಟ ಪಡೋ ಕಾಫಿನ‌ ಹೋಟೆಲ್ ಒಳಗೇ ಬಿಟ್ಟು ಬೀಗ ಹಾಕ್ಕೊಂಡ್ ಸ್ಟೇಷನ್ ಗೆ ಬಂದಿದ್ಯಂತಲಾ !!” ಎಂದು ಹೇಳಿದನು. ಕಾಫಿ ಕುಡಿಯುತ್ತಾ ಕುಳಿತ್ತಿದ್ದ ಎಸ್.ಐ ಜಗದೀಶ್ ಗೆ, ಇದನ್ನು ಕೇಳಿಸಿಕೊಂಡ ಕೂಡಲೇ ಅದೇನೋ ಆಲೋಚನೆ ಬಂದಿತ್ತು.

ನಿಧಾನವಾಗಿ ಹೆಡ್ ಕಾನ್ಸ್‌ಟೇಬಲ್ ಗೆ ಮಾತ್ರ ಕೇಳಿಸುವಂತೆ ಮಾತನಾಡಿದ ಎಸ್.ಐ ಜಗದೀಶ್, “ಅಡಿಕೆ ಕದ್ದ ಕಳ್ಳರು ಊರಿಂದಾಚೆಗೆ ಹೋಗಿರಬಹುದು… ಆದರೆ ಕಳ್ಳರು ಕದ್ದ ಅಡಿಕೆ ಮಾತ್ರ ಊರಿನ ಒಳಗಡೆಯೇ ಇದೆ !!” ನಮಗೆ ಮೊದಲ‌ ಸುಳಿವು ಸಿಕ್ಕೇ ಬಿಟ್ಟಿತು, ಎಂದರು.

( ಮುಂದುವರೆಯುತ್ತದೆ…)

                                        — ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

2 thoughts on ““ಬೆಂಕಿ‌ ಮನೆ ಕಳ್ಳರು” !! (ಭಾಗ – 5)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: