
( Part – 4 )
ಮೊದಲನೇ ದಿನ ಗಜಕೋಲು ಅರಮನೆಯ ಹೊನ್ನಪ್ಪ ನಾಯ್ಕನ ಮನೆಯಲ್ಲಿ ಸುಮಾರು 42 ಅಡಿಕೆ ಮೂಟೆಗಳನ್ನು ಕದ್ದ ಕಳ್ಳರು, ಸ್ವಲ್ಪವೂ ಬಿಡುವು ಕೊಡದೆ ಮರು ದಿನವೇ ಕತ್ತಲುಬ್ಯಾಣದ ದೇವೇಂದ್ರಣ್ಣನ ತೋಟದಿಂದ 500 ಮರದ ಹಸಿ ಅಡಿಕೆಯನ್ನೇ ಕದ್ದೊಯ್ದರು. ಪೋಲೀಸರಿಗೆ ತಲೆನೋವಾದ ಈ ಪ್ರಕರಣ, ಈಡೀ ಅನಲನಗರದ ಜನರ ತಲೆ ಬಿಸಿಗೆ ಕಾರಣವಾಗಿತ್ತು. ಕಾಫಿ ಕೃಷ್ಣಪ್ಪನ ಹೋಟೆಲ್.., ಊರಿನ ಜನರ ಮಾತಿನ ಚರ್ಚೆಯಿಂದ ತುಂಬಿಹೋಯಿತು. ಇದರ ಪರಿಣಾಮವಾಗಿ ಬಂದವರೆಲ್ಲಾ ಕಾಫಿ ಕೃಷ್ಣಪ್ಪನ ಕಾಫಿಯನ್ನೇ ಮರೆತು ಈ ಕಳ್ಳರ ವಿಚಾರದ ಚರ್ಚೆ ಮತ್ತು ಗೊಂದಲಕ್ಕೆ ಸಿಲುಕಿ ಚಹಾ ಸೇವಿಸುತ್ತಾ ವಾದ ವಿವಾದಗಳನ್ನು ಶುರುಮಾಡಿದರು. ನೋಡಿ ನೋಡಿ ರೋಸಿಹೋದ ಕಾಫಿ ಕೃಷ್ಟಪ್ಪ ಒಂದು ಬೋರ್ಡ್ ಮಾಡಿ ಅಂಗಡಿಯ ಮುಂದೆ ಹಾಕಿಸಿಯೇ ಬಿಟ್ಟನು. “ಕಾಫಿ ಕೃಷ್ಣಪ್ಪನ ಹೋಟೆಲ್ ನಲ್ಲಿ ಬೆಂಕಿ ಕಳ್ಳರು ಸಿಗುವವರೆಗೂ ಕಾಫಿ ಉಚಿತ” ಹೀಗೊಂದು ಬೋರ್ಡ್ ನೇತು ಬಿದ್ದಿತು. ಎರಡೂ ಸಲವೂ ಕಳ್ಳತನಕ್ಕು ಮೊದಲು ಜೀಪಿಗೆ ಬೆಂಕಿ ಬೀಳುವಂತೆ ಮಾಡಿದ್ದರಿಂದ, “ಬೆಂಕಿ ಕಳ್ಳರು !!” ಎಂದು ಬೋರ್ಡ್ ನಲ್ಲಿ ನಮೂದಿಸಿದ್ದನು. ಕೃಷ್ಣಪ್ಪನಿಗೆ ತನ್ನ ಕಾಫಿಯನ್ನು ಜನರು ಮರೆಯಲು ಈ ಕಳ್ಳರು ಕಾರಣವಾಗಿರುವ ವಿಚಾರ ತುಂಬಾನೆ ನೋವುಂಟು ಮಾಡಿತ್ತು.
ಈ ಎರಡು ಕಳ್ಳತನ ಅನಲನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನಲ್ಲೂ ಬಹಳ ಸದ್ದು ಮಾಡಿತ್ತು. ಸುದ್ದಿಯ ಬಿಸಿಗೆ ಎಸ್.ಐ ಹಾಗೂ ಹೆಡ್ ಕಾನ್ಸ್ಟೇಬಲ್ ತತ್ತರಿಸಿ ಹೋದರು. ಕಳ್ಳರನ್ನು ಹಿಡಿಯುವುದಿರಲಿ, ಕಳ್ಳತನ ಹೇಗೆ ಆಗಿರಬಹುದು..?? ಹೇಗೆ ಅಡಿಕೆಯನ್ನು ಊರಿಂದಾಚೆ ಸಾಗಿಸಿರಬಹುದು..?? ಎಂಬ ಚಿಕ್ಕ ಊಹೆ ಕೂಡ ಮಾಡಲಾಗದಷ್ಟು ಅಚ್ಚುಕಟ್ಟಾಗಿ ಕಳ್ಳತನ ನಡೆದಿತ್ತು. ಎರಡನೇ ದಿನ 500 ಮರದ ಹಸಿ ಅಡಿಕೆ ಕದ್ದ ವಿಚಾರ ಬೆಳಗ್ಗೆ ಗೊತ್ತಾಗಿ, ಸಂಜೆ ಆಗುವಷ್ಟರಲ್ಲಿ ಪೋಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿತ್ತು.
ಪಿ.ಎಸ್.ಐ ಜಗದೀಶ್ ಹೊಸದಾಗಿ ಕೆಲಸಕ್ಕೆ ಸೇರಿದವರು. ಈ ಘಟನೆ ತನ್ನ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕಿ ಆಗಬಹುದೆಂದು ಯೋಚಿಸುತ್ತಾ ಪೋಲೀಸ್ ಸ್ಟೇಷನ್ ನ ಮುಂದೆ ಅದೇ ದಿನ ರಾತ್ರಿ ಓಡಾಡುತ್ತಿದ್ದರು. ಹೆಡ್ ಕಾನ್ಸ್ಟೇಬಲ್ ಈರಪ್ಪಣ್ಣ ತನ್ನ ವೃತ್ತಿ ಜೀವನದಿಂದ ನಿವೃತ್ತಿಗೆ ಸನಿಹದಲ್ಲಿದ್ದವರು. ಹೊರಗಡೆ ಓಡಾಡುತ್ತಿದ್ದ ಎಸ್.ಐ ಅವರೆದುರು ಬಂದ ಈರಪ್ಪಣ್ಣ… “ಸರ್, ನಾನು ನಿವೃತ್ತಿ ಹೊಂದುವ ಮೊದಲೇ ಈ ಕಳ್ಳತನದ ಪ್ರಕರಣವನ್ನು ಭೇದಿಸಿ.. ನನ್ನ ಸಂಪೂರ್ಣ ಬೆಂಬಲವನ್ನು ನಿಮಗೆ ಕೊಡುತ್ತೇನೆ. ಈ ಕಳ್ಳರನ್ನು ಹಿಡಿಯುವುದರಿಂದ ನಿಮ್ಮ ವೃತ್ತಿ ಜೀವನಕ್ಕೆ ಬಹುದೊಡ್ಡ ಮೈಲಿಗಲ್ಲು ಆಗುತ್ತದೆ. ನೀವು ಸೋತು ಬೇರೆಯವರಿಗೆ ಈ ವಿಚಾರಣೆಯನ್ನು ಬಿಟ್ಟುಕೊಡಬೇಡಿ. ನೀವು ಈ ಪ್ರಕರಣದಿಂದ ಹಿಂದೆ ಸರಿಯಬೇಡಿ ಸರ್..” ಎಂದನು.
ರಾತ್ರಿ ಕಳೆದು ಬೆಳಕಾದಾಗ ನೂರಾರು ಕರೆಗಳು ಎಸ್.ಐ ಅವರಿಗೆ ಬಂದವು. ಮೇಲಾಧಿಕಾರಿಗಳು ಹಾಗೂ ಆ ಊರನ್ನು ಒಳಗೊಂಡ ರಾಜಕಾರಣಿ ಎಂ.ಎಲ್.ಎ ಅವರ ಕಡೆಯಿಂದಲೂ ಒತ್ತಡ ಹೆಚ್ಚಾಯಿತು. ಕಳ್ಳತನವಾದ ಎರಡೂ ಮನೆಯವರು ಹಣದ ವಿಷಯದಲ್ಲಿ ತುಂಬಾನೆ ಪ್ರಭಾವಿಗಳಾಗಿದ್ದರು. ಈ ರೀತಿ ಎಲ್ಲಾ ಕಡೆಯಿಂದಲೂ ಒತ್ತಡಗಳು ಹೆಚ್ಚಾಯಿತು. ಮೂರನೇ ದಿನವೂ ಬೆಳಗ್ಗೆಯಿಂದಲೇ ಊರಿನ ತುಂಬಾ ಪೋಲೀಸರಿಗೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿಕೊಳ್ಳಲು ಹೇಳಿ, ಹೆಡ್ ಕಾನ್ಸ್ಟೇಬಲ್ ಅವರನ್ನು ಕರೆದುಕೊಂಡು ರೈಲ್ವೇ ಸ್ಟೇಷನ್ ಗೆ ಹೋಗಿ ಹಿಂದಿನ ಎರಡು ದಿನದ ಸಿ.ಸಿ ಕ್ಯಾಮೆರಾಗಳ ರೆಕಾರ್ಡಿಂಗ್ ಎಲ್ಲವನ್ನೂ ನೋಡಿದರು. ಅನುಮಾನ ಬರುವಂತಹ ಯಾವ ಸುಳಿವೂ ಸಿಗಲಿಲ್ಲ. ಹತ್ತಿರದ ಎ.ಟಿ.ಎಮ್ ಗಳ ರೆಕಾರ್ಡಿಂಗ್ ನಿಂದಲೂ ಏನು ಪ್ರಯೋಜನವಾಗಲಿಲ್ಲ. “ಮಧ್ಯಾಹ್ನನ ಹೊತ್ತಿಗೆ ಬಸ್ ಸ್ಟ್ಯಾಂಡ್, ಊರಿನ ಮುಖ್ಯ ತಿರುವು ಹಾಗೂ ಜನಗಳು ಬಂದು ನಿಲ್ಲುವ ಕಾಫಿ ಕೃಷ್ಣಪ್ಪನ ಹೋಟೆಲ್ ಮುಂಭಾಗದ ರಸ್ತೆಗೆ ಹೊಸ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಎಸ್.ಐ ಅವರೇ ಮುಂದೆ ನಿಂತು ಅಳವಡಿಸಿದರು”. ಇದೆಲ್ಲಾ ಆಗುವಷ್ಟರಲ್ಲಿ ಸಂಜೆಯಾಗಿತ್ತು.
ಒಂದೇ ದಿನದಲ್ಲಿ ಈ ಎಲ್ಲಾ ವಿದ್ಯಮಾನಗಳನ್ನು ಕಂಡು ಸ್ವತಃ ಊರಿನ ಮಂದಿ ಅಚ್ಚರಿಗೊಂಡರು. ಕಳ್ಳರು ಮತ್ತೆ ಈ ಊರಿನ ಕಡೆ ತಲೆಹಾಕುವುದು ಅನುಮಾನವೇ ಸರಿ ಎಂದುಕೊಂಡರು. ಇಷ್ಟೆಲ್ಲಾ ಆದರೂ ಇದೇ ದಿನ, ಅಂದರೆ ಮೂರನೇ ದಿನ ಸಂಜೆಯಿಂದಲೇ ಜನರು ಆತಂಕಗೊಂಡರು. ಪೋಲೀಸರ ಜೀಪಿನಿಂದ ಹಿಡಿದು ರೈಲ್ವೆ ಸ್ಟೇಷನ್, ಬಸ್ಸು ನಿಲ್ದಾಣ, ಅಂಗಡಿ ಹೀಗೆ ಎಲ್ಲಾ ಕಡೆ ನಿಂತಿದ್ದ ಎಲ್ಲಾ ವಾಹನಗಳ ಮೇಲೆಯೂ ಪೋಲಿಸರು ಕಣ್ಣಿಟ್ಟಿದ್ದರು. ಜನರು ತಮ್ಮ ತಮ್ಮ ಮನೆ ಕಡೆಗೆ ತೆರಳಿ ಮನೆಯಲ್ಲಿದ್ದ ಅಡಿಕೆ ಮಾತ್ರವಲ್ಲದೇ ತೋಟದಲ್ಲಿದ್ದ ಮರಗಳ ಮೇಲೆಯೂ ಕಣ್ಣಿಡಲು ಜನಗಳನ್ನು ಬಿಟ್ಟರು. ಒಂದಿಷ್ಟು ಜನ ಕಾಫಿ ಕೃಷ್ಣಪ್ಪನ ಹೋಟೆಲ್ ನಲ್ಲಿ ಚಹಾ ಸೇವಿಸುತ್ತಾ.. ಈ ಮೂರನೇ ದಿನವೂ ಕಳ್ಳತನವಾದರೆ ನಮಗೆ ಚರ್ಚಿಸಲು ವಿಷಯ ಸಿಗುತ್ತದೆ ಎಂದು ಎದುರು ನೋಡುತ್ತಿದ್ದರು.
ಯಾವ ವಾಹನದಲ್ಲೂ ಮತ್ತೆ ಬೆಂಕಿ ಕಾಣಿಸಿಕೊಳ್ಳಲಿಲ್ಲ. “ಸಂಜೆ ಸವೆದು ಕತ್ತಲು ಚೆಲ್ಲಿ.. ಮತ್ತೆ ಕತ್ತಲು ಕಳೆದು ಬೆಳಕು ಮೂಡಿ ಬೆಳಗ್ಗೆ” ಅಗಿತ್ತು. ಸಮಯ ಬೆಳಗ್ಗೆ 8 ಆದರೂ ಯಾವುದೇ ಕಳ್ಳತನದ ಕರೆ ಪೋಲೀಸರಿಗೆ ಬರಲಿಲ್ಲ. ಅನುಮಾನಾಸ್ಪದ ಘಟನೆಯೂ ನಡೆಯಲಿಲ್ಲ. ಯಾರೊಬ್ಬರ ಮನೆಯಲ್ಲೂ ಏನೂ ಕಳ್ಳತನವಾಗಿರಲಿಲ್ಲ. ಹಿಂದೆ ಎರಡು ಭಾರಿ ಅಡಿಕೆ ಕಳ್ಳತನದ ಮೊತ್ತ ಸುಮಾರು ಹತ್ತಿರತ್ತಿರ 25 ಲಕ್ಷದಷ್ಟಿತ್ತು. ಮತ್ತೆ ಕಳ್ಳತನವನ್ನು ತಡೆಯುವಷ್ಟೇ ಮುಖ್ಯವಾಗಿ, ಹಿಂದೆ ಆಗಿದ್ದ ಕಳ್ಳತನದ ಅಡಿಕೆಯನ್ನು ಮತ್ತೆ ಹುಡುಕಿ ತರುವುದೂ ಮುಖ್ಯವಾಗಿತ್ತು.
ಬೆಳಗ್ಗೆಯಿಂದಲೇ ಎಸ್.ಐ ಜಗದೀಶ್ ನೇತೃತ್ವದ ಪೋಲೀಸ್ ತನಿಖೆ ಮತ್ತಷ್ಟು ಜೋರಾಯಿತು. ಬೇರೆ ಬೇರೆ ಅಕ್ಕ ಪಕ್ಕದ ಊರಿನ ರೈಲು ನಿಲ್ದಾಣದ ಸಿ.ಸಿ.ಕ್ಯಾಮರ ರೆಕಾರ್ಡಿಂಗ್ ಗಳನ್ನೂ ನೋಡಿದ್ದಾಯಿತು. ಆದರೂ ಈ ರೀತಿಯ ತನಿಖೆ ಯಾವ ಸುಳಿವೂ ಕೊಡಲಿಲ್ಲ. ಕಳ್ಳತನವಾಗಿದ್ದ ಎರಡೂ ಮನೆಯವರನ್ನು, ಮನೆಯ ಕೆಲಸದ ಆಳುಗಳನ್ನು ವಿಚಾರಿಸಿಯೂ ಆಯಿತು, ಯಾವ ಪ್ರಯೋಜನವೂ ಆಗಲಿಲ್ಲ. ಕಳ್ಳತನದ ನಂತರ ಸುಮಾರು ಒಂದು ವಾರವೇ ಆದರೂ, ಯಾರು ಮಾಡಿದರು ಮತ್ತು ಹೇಗೆ ಊರಿಂದಾಚೆಗೆ ಸಾಗಿಸಿದರು ಎಂಬ ಮಾಹಿತಿಯೇ ಸಿಗಲಿಲ್ಲ. ಪೋಲೀಸರು ತನಿಖೆಯನ್ನು ನಿಲ್ಲಿಸದೇ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದರು.
ಒಂದು ವಾರದ ನಂತರ ಒಂದು ದಿನ, ಮೊದಲು ಕಳ್ಳತನಕ್ಕೆ ಒಳಗಾಗಿದ್ದ ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕ ತಾನು ಮನೆಯಲ್ಲೇ ಸಂಗ್ರಹಿಸಿ ಇಟ್ಟಿದ್ದ ಒಂದು ವರ್ಷದ ಹಿಂದಿನ ಅಡಿಕೆಯನ್ನು ತನ್ನ ಮನೆಯಿಂದ ದೂರದ ಊರಿನ ಅಡಿಕೆ ಮಂಡಿಗೆ ಮಾರಲು ಮೂರು ಪಿಕ್ ಅಪ್ ವಾಹನದಲ್ಲಿ ಬೆಳಗ್ಗೆ 9 ಗಂಟೆಗೆ ಹೊರಟನು. ಒಳ್ಳೆಯ ಬೆಳೆಗಾಗಿ ತುಂಬಾನೆ ಅಡಿಕೆಯನ್ನು ಒಂದು ವರ್ಷದಿಂದ ಹಾಗೆಯೇ ಉಳಿಸಿಕೊಂಡಿದ್ದ ಹೊನ್ನಪ್ಪ ನಾಯ್ಕ, ಮತ್ತೆ ಕಳ್ಳತನ ಆಗಬಹುದೆಂಬ ಭಯಕ್ಕೆ ಸ್ವಲ್ಪ ಅಡಿಕೆಯನ್ನು ಮಾರಲು ನಿರ್ಧರಿಸಿ ಹೊರಟಿದ್ದನು. “ಹೀಗೆಂದು ಊರಿನಲ್ಲೆಲ್ಲಾ ಹಬ್ಬಿತ್ತು”.
ವಾಸ್ತವ ಏನೆಂದರೆ.., “ಇದು ಎಸ್.ಐ ಜಗದೀಶ್ ಅವರ ಯೋಜನೆ”. ಈ ರೀತಿಯಾಗಿ ಮಾಡಿ ಕಳ್ಳರನ್ನು ಹಿಡಿಯುವ ಪ್ಲಾನ್ ಎಸ್.ಐ ಹಾಗೂ ಹೆಡ್ ಕಾನ್ಸ್ಟೇಬಲ್ ಅವರದ್ದಾಗಿತ್ತು. ಇವರನ್ನು ಬಿಟ್ಟರೆ ಈ ವಿಷಯ ತಿಳಿದಿದ್ದು ಹೊನ್ನಪ್ಪ ನಾಯ್ಕನಿಗೆ ಮಾತ್ರ. ಹೊನ್ನಪ್ಪ ನಾಯ್ಕ ತನ್ನ ಮನೆಯ ಆಳುಗಳಿಗೆ.. “ನಿಮ್ಮಲ್ಲಿ ಯಾರಾದರೂ ಒಬ್ಬರೇ ಪಟ್ಟಣಕ್ಕೆ ಹೋಗಿ, ಯಾವುದಾದರು ಮೂರು ಪಿಕ್ ಅಪ್ ವಾಹನವನ್ನು ಕರೆದುಕೊಂಡು ಬನ್ನಿ..” ಎಂದು ಹಿಂದಿನ ದಿನವೇ ಹೇಳಿದ್ದನು.
ಮೂರೂ ವಾಹನ ಬೇರೆ ಊರಿನದ್ದಾಗಿತ್ತು ಮತ್ತು ಡ್ರೈವರ್ ಕೂಡ ಹೊಸ ಮುಖಗಳೇ ಆಗಿದ್ದರು. ಹೊನ್ನಪ್ಪ ಬೇಕಂತಲೇ ಡ್ರೈವರ್ ಮತ್ತು ಗಾಡಿಗಳ ಬಗ್ಗೆ ವಿಚಾರಿಸಿರಲಿಲ್ಲ. ಮೂರು ಪಿಕ್ ಅಪ್ ವಾಹನ.., ಕೆಲವು ಆಳುಗಳ ಸಮೇತ ನಿಧಾನವಾಗಿ ಹೊರಟಾಗ.. ಹಿಂದಿನಿಂದ ಹೊನ್ನಪ್ಪ ತನ್ನ ಕಾರನ್ನು ಡ್ರೈವ್ ಮಾಡುತ್ತಾ ಹಿಂಬಾಲಿಸದನು. “ಕಾರಿನ ಹಿಂಬದಿಯಲ್ಲಿ ಹೊರಗಡೆ ಕಾಣದ ಹಾಗೆ ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಕುಳಿತಿದ್ದರು”.
ಕಾಡುದಾರಿ ಮುಗಿದು ಇನ್ನೇನು ಬಸ್ಸುಗಳು ಓಡಾಡುವ ಊರಿನ ರಸ್ತೆ ಸಿಗುವಷ್ಟರಲ್ಲಿ.. ಹಿಂದೆ ಇದ್ದ ಮೂರನೇ ಪಿಕ್ ಅಪ್ ವಾಹನವನ್ನು ಡ್ರೈವರ್ ನಿಲ್ಲಿಸಿದನು. ಸ್ವಲ್ಪ ಮುಂದೆ ಹೋದ ನಂತರ ಮುಂದಿನ ಎರಡು ವಾಹನವೂ ನಿಂತವು. ಹಿಂದಿನ ಪಿಕ್ ಅಪ್ ನ ಡೈವರ್, ತನ್ನ ಗಾಡಿಯಲ್ಲಿದ್ದ ಆಳುಗಳಿಗೆ.. “ಲೋಡ್ ಹೆಚ್ಚಾದ ಕಾರಣ ಗಾಡಿ ಸ್ಟಾರ್ಟ್ ಆಗುತ್ತಿಲ್ಲ.. ನೀವು ಇಳಿದು ಮುಂದಿನ ಎರಡು ವಾಹನದಲ್ಲಿರುವ ನಿಮ್ಮವರನ್ನು ಕರೆಸಿ ಎಲ್ಲಾ ಸೇರಿ ನನ್ನ ಗಾಡಿಯನ್ನು ತಳ್ಳಿರಿ..” ಎಂದನು. ಹಿಂದೆ ಕಾರಿನಲ್ಲಿದ್ದ ಹೊನ್ನಪ್ಪ ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ, ಮೂರನೇ ಪಿಕ್ ಅಪ್ ನ ಹತ್ತಿರ ನಡೆದು ಹೋಗಿ ಡ್ರೈವರ್ ಹೇಳಿದಂತೆ ಉಳಿದವರನ್ನು ಕರೆದು ತಳ್ಳಲು ಆಳುಗಳಿಗೆ ಹೇಳಿದನು.
ಎಲ್ಲಾ ರೀತಿಯಲ್ಲೂ ಯೋಚಿಸಿದ್ದ ಎಸ್.ಐ ಜಗದೀಶ್, ಊರಿನ ರಸ್ತೆಯಲ್ಲಿ.. ಒಂದು ಜೀಪ್ ನಲ್ಲಿ ಕೆಲವು ಪೋಲೀಸರು ಮತ್ತು 5 ಬೈಕ್ ನಲ್ಲಿ ಪೋಲಿಸರನ್ನು ನಿಲ್ಲಿಸಿ ಬಂದಿದ್ದರು. ಎಲ್ಲಾ ಆಳುಗಳು ಸೇರಿ ಕೊನೇಯ ಪಿಕ್ ಅಪ್ ವಾಹನವನ್ನು ತಳ್ಳುವಾಗ, ಮುಂದೆ ಇದ್ದ ಎರಡು ವಾಹನ ಒಮ್ಮೆಲೇ ಹೊರಟೇ ಬಿಟ್ಟಿತು. ಎಲ್ಲಾ ಸೇರಿ ತಳ್ಳುತ್ತಿದ್ದ ಮೂರನೇ ಪಿಕ್ ಅಪ್ ಅನ್ನು ಸ್ಟಾರ್ಟ್ ಮಾಡಿದ ಡ್ರೈವರ್ ಅಲ್ಲಿಂದ ಆತುರದಲ್ಲಿ ಹೊರಟನು. ಮೂರೂ ಗಾಡಿ ಅಲ್ಲಿಂದ ಪರಾರಿ ಆಗುತ್ತಿದ್ದಂತೆ ಆಳುಗಳೆಲ್ಲಾ ಕೂಗುತ್ತಾ ಹಿಂದೆ ಓಡಿದರು.
ಹೊನ್ನಪ್ಪ ನಾಯ್ಕ ಹಿಂದೆ ತಿರುಗಿ ಪೋಲೀಸರ ಕಡೆಗೆ ನೋಡಿದನು. ಅದಾಗಲೇ ಎಸ್.ಐ ಮೊದಲೇ ನಿಲ್ಲಿಸಿ ಬಂದಿದ್ದ ಪೋಲೀಸರಿಗೆ ಜೀಪ್ ಮತ್ತು ಬೈಕ್ ನಲ್ಲಿ ಬರಲು ಹೇಳಿದ್ದರಿಂದ, ಮೂರೂ ಪಿಕ್ ಅಪ್ ವಾಹನಗಳನ್ನು ಪೋಲೀಸರು ತಮ್ಮ ಜೀಪ್ ಮತ್ತು ಬೈಕ್ ನೊಂದಿಗೆ ಮುಂದಿನಿಂದ ಅಡ್ಡಗಟ್ಟಿದರು. “ಹಿಂದೆಯಿಂದ ಎಸ್.ಐ ಜಗದೀಶ್ ಎಲ್ಲರನ್ನೂ ಅಡಗಟ್ಟಿ ಪಿಸ್ತೂಲ್ ಹಿಡಿದು ನಿಂತರು !!”.
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ