“ಬೆಂಕಿ‌ ಮನೆ ಕಳ್ಳರು” !! (ಭಾಗ – 3)

“ಬೆಂಕಿ‌ ಮನೆ ಕಳ್ಳರು” !!
( Part – 3 )

ಭಾಗ ಮೂರರಲ್ಲಿನ ಹೊಸ ಪಾತ್ರಗಳ ಪರಿಚಯ..
1. ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣ
2. ಕತ್ತಲುಬ್ಯಾಣದ ದೇವೇಂದ್ರಣ್ಣ

ಅಂತೂ ಇಂತೂ ಕಾಫಿ ಕೃಷ್ಣಪ್ಪನ ಕುತ್ತಿಗೆಗೆ ತಂದು ನಿಲ್ಲಿಸಿದರು ಕಳ್ಳರು. ಎರಡು ಮೂಟೆ ಅಡಿಕೆ ಇದ್ದ ಹಳೇಯ ಲಾರಿ ಒಂದು ಕಾಫಿ ಕೃಷ್ಣಪ್ಪನ ಹೋಟೆಲ್ ಹಿಂಭಾಗದಲ್ಲಿ ಸಿಕ್ಕಿರುವ ವಿಷಯವನ್ನು ಒಂದು ಪೋಲೀಸ್ ತಂಡ ಪಿ.ಎಸ್.ಐ ಜಗದೀಶ್ ರಾಮ್ ಅವರಿಗೆ ತಿಳಿಸಿದಾಗ, ಕೂಡಲೆ ಜಗದೀಶ್ ಅವರು ಗಜಕೋಲು ಬಂಗಲೆಯಲ್ಲಿ ತಾವು ನಡೆಸುತ್ತಿದ್ದ ವಿಚಾರಣೆಯನ್ನು ನಿಲ್ಲಿಸಿ, ಹೊನ್ನಪ್ಪ ನಾಯ್ಕನನ್ನು ಕರೆದುಕೊಂಡು ಪೋಲೀಸ್ ಜೀಪಿನಲ್ಲಿ ಕೃಷ್ಣಪ್ಪನ‌ ಹೋಟೆಲ್ ಬಳಿ ಬಂದರು. ಅದಾಗಲೇ ಅಲ್ಲಿ ಅನಲನಗರದ ಮುಕ್ಕಾಲು ಭಾಗದಷ್ಟು ಜನರು ಸಭೆ ಸಮಾರಂಭಕ್ಕೆ ಬಂದಂತೆ ಸೇರಿ ಆಗಿತ್ತು. ಪೋಲೀಸ್.. ಪೋಲೀಸ್.. ಎನ್ನುತ್ತಾ ಜನರೆಲ್ಲರು, ಗುಸುಗುಡುತ್ತಾ ಪಿ.ಎಸ್.ಐ ಜಗದೀಶ್ ಗೆ ಲಾರಿಯ ಕಡೆ ಜಾಗ ಮಾಡಿಕೊಟ್ಟರು.

ಕಳ್ಳರು ನಿಜವಾಗಲೂ ಬೇಕಂತಲೇ ಇಲ್ಲಿ ಲಾರಿಯನ್ನು ಬಿಟ್ಟು ಎರಡು ಮೂಟೆ ಅಡಿಕೆಯನ್ನು‌ ಉಳಿಸಿ ಹೋಗಿದ್ದಾರೆ ಎಂದು‌ ಕೆಲವರು ಮಾತನಾಡಿಕೊಂಡರೆ, ಕಳ್ಳರಿಗೆ ಈ ಎರಡು ಮೂಟೆ ಹೊತ್ತೊಯ್ಯಲಾಗದೇ ಸಿಕ್ಕಿ ಬೀಳುವ ಭಯದಲ್ಲಿ ಹಾಗೆಯೇ ಲಾರಿಯನ್ನೂ ಇಲ್ಲೇ ಬಿಟ್ಟು ಹೋಗಿದ್ದಾರೆಂದು ಹಲವರು ಮಾತನಾಡಿಕೊಂಡರು.

ಜನರೆಲ್ಲಾ ಹೋಟೆಲ್ ಬಳಿ‌ ಬಂದು “ಏನ್ ಕೃಷ್ಣಪ್ಪಾ, ಕಳ್ಳರು ನೀನ್ ಕೊಟ್ಟಿದ್ ಕಾಫಿನ ಇಷ್ಟ ಪಟ್ಟಿದ್ದಲ್ಲ್ದೇ..‌‌ ನಿಂಗೆ ಅಂತ ಎರಡ್ ಮೂಟೆ ಅಡಿಕೆ ಹಾಗೂ  ಲಾರಿನೂ ಬಹುಮಾನವಾಗಿ ಕೊಟ್ಟಿದ್ದಾರೆ ನೋಡು” ಎನ್ನುವಾಗ ಕೃಷ್ಣಪ್ಪ ಇದನ್ನು ಮನಸ್ಸಿಗೆ ಹಾಕಿಕೊಳ್ಳದೇ.. “ಇಷ್ಟು ವರ್ಷದಲ್ಲಿ ನೀವಂತೂ ಯಾವ ಬಹುಮಾನವನ್ನು ಕೊಡದೇ ಕಾಫಿ‌ ಟೀ ಕುಡಿಯಿತ್ತಿದ್ದಿರಿ, ಈಗ ನೀವು ಕೊಡದಿದ್ದನ್ನು ಈ‌ ಅಡಿಕೆ‌‌ ಕಳ್ಳರೇ ಕೊಟ್ಟಿದ್ದಾರೆ” ಎನ್ನುತ್ತಾ ಕೃಷ್ಣಪ್ಪನೂ ತಿರುಗಿ ಉತ್ತರ ಕೊಡುತ್ತಿದ್ದನು. ಕೃಷ್ಣಪ್ಪ ತಾನು ಕಾಫಿ ಮಾರುತ್ತಲೇ‌ ಹೋಟೆಲ್ ಇಡುವ ಹಂತಕ್ಕೆ ಬಂದ ಹಾದಿಯನ್ನು ಮರೆತಿರಲಿಲ್ಲ.‌ ಎಲ್ಲರಂತೆಯೇ ಆ ಲಾರಿಯ ಬಳಿ ನಿಂತು ತನ್ನ ವ್ಯವಹಾರದ ಸಮಯವನ್ನು ವ್ಯರ್ಥ ಮಾಡದೇ ಬಂದವರಿಗೆಲ್ಲಾ ಕಾಫಿ, ಚಹಾ ಮಾಡಿಕೊಡುವಲ್ಲೇ ಮಗ್ನನಾಗಿದ್ದನು. ಆದರೂ ಕಾಫಿ ಕೃಷ್ಣಪ್ಪನಿಗಿದ್ದ ಒಂದೇ ಒಂದು ಚಿಂತೆ ಎಂದರೆ ಕಳ್ಳತನಕ್ಕೂ ಮುಂಚೆ ಕಾಫಿ ಕುಡಿಯುತ್ತಿದ್ದವರೆಲ್ಲರೂ ಚಹಾ ಆರ್ಡರ್ ಮಾಡುತ್ತಿರುವುದೇ, ಕೃಷ್ಣಪ್ಪನಿಗೆ ತನ್ನ ಕಾಫಿ ಬ್ರಾಂಡ್ ಕುಸಿಯುತ್ತಿದೆ ಎಂದು ಚಿಂತೆಯಾಗಿತ್ತು.

ಹೆಡ್ ಕಾನ್ಸ್‌ಟೇಬಲ್ ಈರಪ್ಪ, ಹೋಟೆಲ್ ಬಳಿ ಓಡಿ ಬಂದು “ಏಯ್.. ಕಾಫಿ ಕೃಷ್ಣಪ್ಪ, ನಿನ್ನನ್ನು ನಮ್ಮ ಎಸ್.ಐ ಸಾಹೇಬ್ರು ಲಾರಿ ಹತ್ರ ಬರಕ್ ಹೇಳಿದ್ರು, ಬಾ..” ಎಂದನು. ಕೃಷ್ಣಪ್ಪ ಗಡಿಬಿಡಿಯಲ್ಲಿ “ಬಂದೆ ಸಾರ್, ನಡೀರಿ..” ಎನ್ನುತ್ತಾ ಈರಪ್ಪನ ಹಿಂದೆ ಹೆಜ್ಜೆ ಹಾಕಿದನು. ಲಾರಿಯಲ್ಲಿದ್ದ ಮೂಟೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದ ನಂತರ ಆ ಎರಡೂ‌‌ ಅಡಿಕೆ ಮೂಟೆ ತನ್ನದೇ ಎಂದು ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕ ಪೋಲೀಸರಿಗೆ ತಿಳಿಸಿದನು. ಅಲ್ಲೇ ಅಕ್ಕ ಪಕ್ಕ ಇದ್ದ ಅಂಗಡಿ ಮತ್ತು ಮನೆಯವರೆಲ್ಲರನ್ನೂ ಹೆಡ್ ಕಾನ್ಸ್‌ಟೇಬಲ್ ವಿಚಾರಿಸುತ್ತಿದ್ದರೆ, ಪಿ.ಎಸ್.ಐ ಜಗದೀಶ್ ಅವರು ಕೃಷ್ಟಪ್ಪನನ್ನು ವಿಚಾರಿಸಿದರು. “ನಾನು ದಿನಾ ಬೆಳಗ್ಗೆ 5 ಗಂಟೆಗೆ ಬೈಕ್ ನಲ್ಲಿ ಬಂದು ಬಿಡುತ್ತೇನೆ ಸರ್‌.‌ ಆದರೆ ಇವತ್ತು ಬೆಳಗ್ಗೆ ಮನೆಯಿಂದ ಹೊರಡುವುದು ತಡವಾಗಿದ್ದಕ್ಕೆ, ಹೋಟೆಲ್ ತಲುಪುವುದು ಮುಂಜಾನೆ 6 ಗಂಟೆ ಆಗಿತ್ತು. ನಾನು ಆ ಲಾರಿಯ ಕಡೆ ನೋಡಲಿಲ್ಲ, ಹೋಟೆಲ್ ನ ಕೆಲಸ ಜಾಸ್ತಿ ಆದ್ದರಿಂದ ಆಚೆ ಈಚೆ ಕಣ್ಣು ಹಾಯಿಸಲೂ ಆಗಿಲಿಲ್ಲ..” ಎಂದು ಕೃಷ್ಣಪ್ಪ ವಿವರಿಸಿದನು.

ಬೆಳಗ್ಗೆ ಪೇಪರ್ ಹಾಕುವವರು, ಹಾಲು ಕೊಡುವವರು, ವಾಕಿಂಗ್ ಮಾಡುವವರು.. ಯೊರೊಬ್ಬರಿಗೂ ಆ ಲಾರಿ ಎದುರಾಗಿರಲಿಲ್ಲ. ಎಷ್ಟೇ ವಿಚಾರಿಸಿದರೂ ಪೋಲೀಸರಿಗೆ ನೆರವಾಗುವ ಮಾಹಿತಿ ಅಲ್ಲಿದ್ದ ಜನರಿಂದ ಸಿಗಲಿಲ್ಲ. ಇಷ್ಟೆಲ್ಲಾ ಆಗುವಷ್ಟರಲ್ಲಿ, ತುಂಬಾ ಜನರು ಸೇರಿದ್ದರು. ಅಲ್ಲಿದ್ದವರನ್ನೆಲ್ಲಾ ವಿಚಾರಿಸಿ ಮತ್ತು ಆ ಲಾರಿಯಲ್ಲಿದ್ದ ಮೂಟೆಯನ್ನು ಪರೀಕ್ಷಿಸಿ ಅದನ್ನು ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕನಿಗೆ ನೀಡಿದರು. ನಂತರ ಲಾರಿಯನ್ನು ಸ್ಟೇಷನ್ ಬಳಿ ಸಾಗಿಸಲು ಪೋಲೀಸರಿಗೆ ಎಸ್.ಐ ಜಗದೀಶ್ ಸೂಚಿಸಿದರು. ಇಷ್ಟೆಲ್ಲಾ ಆಗುವಷ್ಟರಲ್ಲಿ ಸಮಯ ಸುಮಾರು ಸಂಜೆ 4 ಗಂಟೆ ಆಗಿತ್ತು. ಕಾಫಿ ಕೃಷ್ಣಪ್ಪನು ಚಹಾವನ್ನು ಲಾರಿಯ ಬಳಿ ತಂದು ಅಲ್ಲಿದ್ದ ಪೋಲೀಸರಿಗೆ ಕೊಡುತ್ತಿದ್ದನು. ಅಡಿಕೆಯ ವಿಷಯವಾದ್ದರಿಂದ ಸುತ್ತಮುತ್ತಲಿನ ಎಲ್ಲಾ ಊರಿನ ಜನರೂ ಅಲ್ಲಿ‌‌ದ್ದರು.

ಕಳ್ಳರು ಈ ಕ್ಷಣ ನಮ್ಮಲ್ಲೇ ಇದ್ದಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಆದರೆ ಕಳ್ಳರು ಮಾತ್ರ “ನಾವು ಇಲ್ಲೇ, ನಿಮ್ಮ ನಡುವೆಯೇ ಇದ್ದೇವೆ ಎಂದು, ಮತ್ತೆ ಸಾಬೀತು ಮಾಡಿಯೇ ಬಿಟ್ಟರು.” ಅಲ್ಲೇ ಜನರ ನಡುವೆಯೇ ಒಂದು ಮರದ ಕೆಳಗಿದ್ದ ಪೋಲೀಸ್ ಜೀಪಿನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿದನ್ನು ಗಮನಿಸಿದ ಸುತ್ತಲಿದ್ದ ಜನರು ಜೀಪಿನ ಹತ್ತಿರ ಹೋಗುವಷ್ಟರಲ್ಲಿ ಬೆಂಕಿ ಹೆಚ್ಚಾಗಿತ್ತು. ಹೆಡ್ ಕಾನ್ಸ್‌ಟೇಬಲ್, ಎಸ್.ಐ ಮತ್ತು ಉಳಿದ ಪೋಲೀಸರು ಕೃಷ್ಣಪ್ಪ ಕೊಟ್ಟ ಚಹಾ ಕುಡಿಯುವುದನ್ನು ಅರ್ಧದಲ್ಲೇ‌ ನಿಲ್ಲಿಸಿ ಓಡಿ ಬರುವಷ್ಟರಲ್ಲಿ “ಪೋಲೀಸ್ ಜೀಪ್ ಬೆಂಕಿಯಲ್ಲಿ ಮುಳುಗಿಹೋಗಿತ್ತು”. ಆ ಸನ್ನಿವೇಶ ನೋಡಿದ ಪ್ರತಿಯೊಬ್ಬರಿಗೂ “ಇದು ಆಕಸ್ಮಿಕವಾದ ಬೆಂಕಿ ಅಲ್ಲ, ಬೇಕಂತಲೇ ಜೀಪನ್ನು ಬೆಂಕಿಯಲ್ಲಿ ಹೊತ್ತಿ ಉರಿಯುವಂತೆ ಮಾಡಿದ್ದಾರೆ..” ಎಂಬುದು ಅರ್ಥವಾಗುತ್ತಿತ್ತು.

ಜನರನ್ನು ಕಳ್ಳರಿಂದ ಕಾಪಾಡುವುದಿರಲಿ, ತಮ್ಮ ಜೀಪನ್ನೇ ಪೋಲೀಸರಿಗೆ ಉಳಿಸಿಕೊಳ್ಳಲು ಆಗಲಿಲ್ಲಾ ಎಂದು ಜನರು ನಿಧಾನವಾಗಿ ಮಾತನಾಡಲು ಶುರುಮಾಡಿಕೊಂಡರು. ಎಸ್.ಐ ಜಗದೀಶ್ ಸಮೇತ ಅಲ್ಲಿದ್ದ ಎಲ್ಲಾ ಪೋಲೀಸರಿಗೂ ಈ ಘಟನೆಯಿಂದ ಇರಿಸುಮುರಿಸು ಉಂಟಾಯಿತು. “ಕಳ್ಳರು ಇಲ್ಲೇ ಇದ್ದಾರೆ, ಯೊರೊಬ್ಬರನ್ನೂ ಬಿಡದೇ ಈಗಲೇ ಹುಡುಕಿರಿ..” ಎಂದು ಎಸ್.ಐ ಹೇಳುವಷ್ಟರಲ್ಲಿ ಕಳ್ಳರು ಯಾರೆಂಬುದೇ ಗೊತ್ತಾಗದ ಹಾಗೆ ಅಲ್ಲಿದ್ದ ಜನರೆಲ್ಲಾ ನಮಗ್ಯಾಕೆ ಈ ಉಸಾಬರಿ ಎಂದು ಸದ್ದಿಲ್ಲದೆ ಒಬ್ಬೊಬ್ಬರಾಗಿ ಖಾಲಿಯಾದರು.

ಒಂದಿಷ್ಟು ಜನ ತಮ್ಮದೇ ಚರ್ಚಾ ಸ್ಥಳವಾದ ಕಾಫಿ ಕೃಷ್ಣಪ್ಪನ ಹೋಟೆಲ್‌ ನಲ್ಲಿ ತಮ್ಮನ್ನು ತಾವು ಲಾಯರ್ ಎಂಬಂತೆ ವಾದ ವಿವಾದಗಳಲ್ಲಿ ತೊಡಗಿಕೊಂಡರು. “ಹಿಂದಿನ ದಿನ‌‌‌ ಇದೇ ರೀತಿ ಗಜಕೋಲು ಬಂಗಲೆಯ ಹೊನ್ನಪ್ಪ ನಾಯ್ಕನ‌ ಜೀಪಿಗೆ ಬೆಂಕಿ ಬಿದ್ದು, ಅದೇ ದಿನ ರಾತ್ರಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಹಾಗಾದರೆ ಇಂದು ಪೋಲೀಸ್ ಸ್ಟೇಷನ್ ಅಲ್ಲೇ ಏನೋ ಕಳ್ಳತನ‌ ಆಗಬಹುದೆಂದು” ಮಾತನಾಡುತ್ತಿದ್ದರು. ಇನ್ನು ಕೆಲವರು “ಈ ರಾತ್ರಿಯೂ ಯಾರದೋ ಮನೆಯಲ್ಲಿ ಅಡಿಕೆ ಕದಿಯಲು ಕಳ್ಳರು ಮತ್ತೆ ಬಂದಿದ್ದಾರೆ” ಎನ್ನುವಾಗ.. ಅಲ್ಲೇ ಇದ್ದ ಹೊನ್ನಪ್ಪ ನಾಯ್ಕ ತಡಮಾಡದೇ ಮನೆ ಕಡೆ ಹೊರಟನು. ಅಲ್ಲಿದ್ದ ಸುಮಾರು ಜನರ ಮನೆಯಲ್ಲಿ ಅಡಿಕೆ ಮೂಟೆಗಳನ್ನು ಇಟ್ಟುಕೊಂಡಿದ್ದರಿಂದ, ಅವರವರ ಮನೆ ಕಡೆ ತರಾತುರಿಯಲ್ಲಿ ಓಡಿದರು. ಇಷ್ಟೆಲ್ಲಾ ಆಗುವಷ್ಟರಲ್ಲಿ ಸಮಯ ಸಂಜೆ 6 ಗಂಟೆಯಾಗಿತ್ತು.

ಎಸ್.ಐ ಜಗದೀಶ್ ಅಲ್ಲೇ ಇದ್ದ ಕೆಲವು ಪೋಲೀಸರಿಗೆ ರಾತ್ರಿ ಕಳೆದು‌ ಬೆಳಗ್ಗೆ ಆಗುವವರೆಗೂ ಊರಿನ ತುಂಬಾ ಯಾರೊಬ್ಬರು ಅನುಮಾನಾಸ್ಪದವಾಗಿ ಕಂಡರೂ, ಕೂಡಲೇ ತಿಳಿಸುವಂತೆ ಆದೇಶಿಸಿದರು.‌ ಪೋಲೀಸ್ ಸ್ಟೇಷನ್‌ನ ಸುತ್ತಲೂ‌ ಕಾಯಲು ಒಂದಿಷ್ಟು ಪೋಲೀಸರನ್ನು ನಿಲ್ಲಿಸಿದರು. “ಎಸ್‌.ಐ ಜಗದೀಶ್ ಗೆ ಈ ರಾತ್ರಿ ಕಳ್ಳರನ್ನು ಹಿಡಿಯುವುದು ಮತ್ತು ಊರಿನಲ್ಲಿ ಕಳ್ಳತನ‌ ಆಗದಂತೆ ನೋಡಿಕೊಳ್ಳುವುದು ಪ್ರತಿಷ್ಠೆಯ ಜೊತೆಗೆ ಅನಿವಾರ್ಯವೂ ಆಗಿತ್ತು.”

ಪೋಲೀಸರ ಜೀಪಿಗೆ ಬೆಂಕಿ ಬಿದ್ದ ಪರಿಣಾಮ, ಕಳ್ಳರು ಈ ರಾತ್ರಿ ನಮ್ಮ ಮನೆಯಲ್ಲಿದ್ದ ಅಡಿಕೆ ಮೂಟೆಯನ್ನು ಕದಿಯಲು ಬರುತ್ತಾರೆಂದು ಯೋಚಿಸಿದ ಊರಿನ ಎಲ್ಲಾ ಅಡಿಕೆ ಬೆಳೆಗಾರರು, ಲಕ್ಷದಿಂದ ಹಿಡಿದು ಕೋಟಿಗಟ್ಟಲೆ ಬೆಲೆ ಬಾಳುವ ಅಡಿಕೆ ಮೂಟೆಗಳನ್ನು ಮನೆಯಲ್ಲಿ ಉಳಿಸಿಕೊಂಡವರೆಲ್ಲರೂ, ನಿದ್ರೆ ಬಿಟ್ಟು ರಾತ್ರಿ ಪೂರ್ತಿ ಅಡಿಕೆ ಮೂಟೆಗಳನ್ನು ಕಾಯುತ್ತಿದ್ದರು.‌ ಪೋಲೀಸರು ಊಟ ನಿದ್ರೆ ಬಿಟ್ಟು ಊರಿನ ‌ತುಂಬಾ ತಿರುಗುತ್ತಾ ಅನುಮಾನ ಬರುವಂತೆ ಓಡಾಡುವವರನ್ನು ವಿಚಾರಿಸುತ್ತಾ ರಾತ್ರಿ ಕಳೆದರು. ಬೆಳಗ್ಗೆ 5 ಗಂಟೆ ಆಗಿತ್ತು. ಮತ್ತೆ ಕಾಫಿ ಕೃಷ್ಣಪ್ಪ ಎಂದಿನಂತೆಯೇ ಹೋಟೆಲ್ ತೆರೆದನು.‌ “ಕಳ್ಳರು ಹೆದರಿ ನಮ್ಮ ಮನೆಗಳ ಕಡೆ ಬರಲಿಲ್ಲ ಎಂದು ಅಡಿಕೆ ಮೂಟೆಗಳನ್ನು ಕಾದು ಕಾದು ಬೆಳಗ್ಗೆ ಮಾಡಿದ್ದವರೆಲ್ಲರೂ ನಿಟ್ಟುಸಿರು ಬಿಟ್ಟರು”. ಎಸ್.ಐ ಜಗದೀಶ್ ಅವರು, “ಯಾವುದಾದರೂ ಕಳ್ಳತನದ ಕಾಲ್ ಬರಬಹುದೇ..??” ಎಂದು‌ ಯೋಚಿಸುತ್ತಾ ಬೆಳಗಿನ ವರೆಗೂ ಸ್ಟೇಷನ್ ಅಲ್ಲೇ ಕುಳಿತಿದ್ದರು.

ಊರಿನ‌ ಅತೀ ಹೆಚ್ಚು ಶ್ರೀಮಂತರಲ್ಲಿ ಒಬ್ಬರಾದವರು “ಕತ್ತಲುಬ್ಯಾಣದ ದೇವೇಂದ್ರಣ್ಣ”. ತನ್ನ ಮನೆಯ ಆಳುಗಳಿಗೆ ರಾತ್ರಿ ಒಂದು ಕ್ಷಣವೂ ಮಲಗಲು ಬಿಡದೇ ಮನೆಯಲ್ಲಿದ್ದ ಅಡಿಕೆಯನ್ನು ಕಾಯಲು ಹೇಳಿ, ತಾನು ಮಾತ್ರ ನೆಮ್ಮದಿಯಿಂದ ನಿದ್ರಿಸಿದ್ದನು. ಬೆಳಗ್ಗೆ 5 ಗಂಟೆಗೆ ಎದ್ದ ದೇವೇಂದ್ರಣ್ಣ ಮನೆಯಲ್ಲಿದ್ದ ಅಡಿಕೆ‌ ಮೂಟೆಗಳು ಕಳ್ಳತನವಾಗದೇ ಇದ್ದದ್ದನ್ನು ನೋಡಿ, “ಈ ಕತ್ತಲುಬ್ಯಾಣದ ನನ್ನ ಮನೆಯ ಬಾಗಿಲ ಬಳಿ ಬರುವ ಧೈರ್ಯ ಆ ಕಳ್ಳರಿಗೆ ಎಲ್ಲಿಂದ ಬರಬೇಕು..” ಎಂದು ಆಳುಗಳಿಗೆ ಹೇಳುತ್ತಾ ಮನೆಯಿಂದ ಸ್ವಲ್ಪ ದೂರದ‌ ತನ್ನ ಅಡಿಕೆ ತೋಟಕ್ಕೆ ಹೋಗಿ ತಲೆ ಎತ್ತಿ‌ ನೋಡಿದವನಿಗೆ “ಒಮ್ಮೆಲೇ ಆಘಾತವಾಯಿತು… ಕೆಲವು ಮರದಲ್ಲಿನ ಹಸಿ ಅಡಿಕೆಯೇ ಕಾಣುತ್ತಿಲ್ಲ !!”. ಎದ್ನೋ ಬಿದ್ನೋ ಎಂಬಂತೆ ಓಡೋಡಿ ಆಳುಗಳನ್ನೆಲ್ಲಾ ಕೂಗಿ ಕರೆದು ಮರವನ್ನು ಎಣಿಸಿ‌ ನೋಡಿದರೆ “ಸುಮಾರು 500 ಅಡಿಕೆ ಮರಗಳಲ್ಲಿನ‌ ಅಡಿಕೆಯೇ ಇರಲಿಲ್ಲಾ!!”.

ಸಮಯ ಬೆಳಗ್ಗೆ 6:30 ಆಗಿತ್ತು. ಸ್ಟೇಷನ್ ಅಲ್ಲಿದ್ದ ಎಸ್.ಐ ಜಗದೀಶ್ ಮನೆ ಕಡೆ ಹೊರಟಿದ್ದರು. ಕಾಫಿ ಕೃಷ್ಣಪ್ಪನ‌ ಹೋಟೆಲ್ ನಲ್ಲಿ ಕಾಫಿ‌ ಆರ್ಡರ್ ಮಾಡಿ ಕುಳಿತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಈರಪ್ಪಣ್ಣನ ಮೊಬೈಲ್ ಗೆ ಒಂದು ಕಾಲ್ ಬಂದಿತ್ತು.‌….. !!

( ಮುಂದುವರೆಯುತ್ತದೆ… )

                                        — ದೀಕ್ಷಿತ್ ದಾಸ್
                                            ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

4 thoughts on ““ಬೆಂಕಿ‌ ಮನೆ ಕಳ್ಳರು” !! (ಭಾಗ – 3)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: