
( Part – 2)
ಭಾಗ ಎರಡಲ್ಲಿ ಬರುವ ಹೊಸ ಪಾತ್ರಗಳ ಪರಿಚಯ..
1. “ಕಾಫಿ ಕೃಷ್ಣಪ್ಪ”
2. “ಪಿ.ಎಸ್.ಐ ಜಗದೀಶ್ ರಾಮ್”
ಆಳುಗಳೆಲ್ಲರೂ ಸೇರಿ ಪೋಲೀಸ್ ಜೀಪನ್ನು ಟ್ರಾಕ್ಟರ್ ನ ಸಹಾಯದಿಂದ ಸ್ಟೇಷನ್ ಗೆ ಬಿಟ್ಟು, ವಾಪಸ್ಸು ಗಜಕೋಲು ಬಂಗಲೆಗೆ ಬಂದು ನೋಡಿದಾಗ… ಸುಮಾರು ನಲವತೈದು ಮೂಟೆ ಅಡಿಕೆ ಕಳ್ಳತನವಾಗಿರುವುದು ತಿಳಿಯಿತು. ಎಲ್ಲರೂ ಗಾಬರಿಯಿಂದ ಯಜಮಾನ್ರೇ !! ಎನ್ನುತ್ತಾ ಓಡಿ ಹೋಗಿ ಮಲಗಿದ್ದ ಹೊನ್ನಪ್ಪ ನಾಯ್ಕನನ್ನು ಎಬ್ಬಿಸಿ, ತರ ತರ ನಡುಗುತ್ತಲೇ ಕಳ್ಳತನದ ವಿಷಯ ತಿಳಿಸಿದರು. ಹೊನ್ನಪ್ಪ ನಾಯ್ಕನಿಗೆ ಏನೂ ತೋಚದೆ, ಸಿಟ್ಟು ಹೆಚ್ಚಾಗಿ ಎಲ್ಲಾ ಆಳುಗಳಿಗೆ ಬಾಯಿಗೆ ಬಂದಂತೆ ಬೈದನು. “ಇಷ್ಟು ಬೆಲೆ ಬಾಳುವ ಅಡಿಕೆ ಮೂಟೆಗಳು ಅಂಗಳದಲ್ಲೇ ಇರುವಾಗ, ಯಾರೊಬ್ಬರೂ ನೋಡಿಕೊಳ್ಳದೆ ಎಲ್ಲರೂ ಹೋಗಿದ್ದೇ ಇದಕ್ಕೆ ಕಾರಣ” ಎಂದು ಅಸಹಾಯಕತೆಯಿಂದ ಕೂಗಾಡಿದನು.
“ರಾತ್ರೋ ರಾತ್ರಿ, ಗಜಕೋಲು ಬಂಗಲೆಯಲ್ಲಿ ಮೂಟೆಗಟ್ಟಲೆ ಅಡಿಕೆ ಕದ್ದರಂತೆ..!!” ಹೀಗೆಂದು ಅನಲಪುರದ ಹಾದಿ ಬೀದಿ, ಗದ್ದೆ ತೋಟ, ಮನೆ ಅಂಗಡಿ, ಬಸ್ಸು ರೈಲು ನಿಲ್ದಾಣ….. ಹೀಗೆ ಎಲ್ಲೆಂದರಲ್ಲಿ ಬೆಳಗಿನ ಜಾವದ ಬಿಸಿ ಬಿಸಿ ಚರ್ಚೆ ಅಡಿಕೆ ಕಳ್ಳತನದ ಪಾಲಾಯಿತು. ಇದರ ಪರಿಣಾಮ ಎಷ್ಟಿದೆ ಎಂದರೆ ಜನರೆಲ್ಲರೂ ಜಾತ್ರೆಗೆ ಹೋದ ಹಾಗೆ ಸಾಲು ಸಾಲಾಗಿ ಊರಿನಿಂದ ದೂರವಿದ್ದ ಗಜಕೋಲು ಬಂಗಲೆಯ ಕಡೆಗೆ ಹೊರಟರು. ಇನ್ನೂ ಕೆಲವರು ಕಾಫಿ ಕೃಷ್ಣಪ್ಪನ ಪುಟ್ಟ ಹೋಟೆಲ್ ನಲ್ಲಿ ಈ ಕಳ್ಳತನದ ಕುರಿತು ತಮ್ಮದೇ ಶೈಲಿಯ ವಾರ್ತಾ ವಾಚನ ಶುರು ಮಾಡಿಕೊಂಡರು.
“ಕಾಫೀ ಕೃಷ್ಣಪ್ಪ” ಈ ಹೋಟೆಲ್ ನ ಸಾರಥಿ. ಚಿಕ್ಕ ವಯಸ್ಸಿನಲ್ಲೇ ರೈಲಿನಲ್ಲಿ ಕಾಫಿ ಮಾರುತಿದ್ದ ಕೃಷ್ಣಪ್ಪ, ಕೆಲವೇ ವರ್ಷಗಳಲ್ಲಿ ತನ್ನದೇ ಆದ ಪುಟ್ಟ ಹೋಟೆಲ್ ಇಟ್ಟುಕೊಂಡಿದ್ದ. ಕೃಷ್ಣಪ್ಪ ಮಾಡುವ ಕಾಫಿ ದಿನಕ್ಕೆ ಒಮ್ಮೆಯಾದರೂ ಸವಿಯಲೇ ಬೇಕೆಂದು ಇವತ್ತಿಗೂ ಸುತ್ತಮುತ್ತಲಿನ ಊರಿನವರು ಬರುವುದುಂಟು. ಆದರೆ ಈ ಮುಂಜಾನೆ ಮಾತ್ರ ಎಲ್ಲರೂ ಕಾಫಿ ಬದಲು “ಚಹಾ ಕೊಡ್ರೀ ಕೃಷ್ಣಪ್ಪ!!” ಅನ್ನುತ್ತಿದ್ದರು. ಜನರಿಗೆ ಊರಿನಲ್ಲಾದ ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನದ ಮತ್ತು ಅದನ್ನು ಹೇಗೆ ಕದ್ದಿರಬಹುದೆಂಬ ಕುತೂಹಲ… ಒತ್ತಡವಾಗಿ ಬದಲಾಗುತ್ತಾ “ಚಹಾ” ಕುಡಿಯಲು ತೀರ್ಮಾನಿಸಿದರು. ಇದನ್ನು ಗಮನಿಸಿದ ಕಾಫಿ ಕೃಷ್ಣಪ್ಪನಿಗೆ “ನನ್ನ ಕಾಫಿಯ ಮೌಲ್ಯ ಕುಸಿಯುವಂತೆ ಮಾಡಿದ” ಈ ಖದೀಮ ಕಳ್ಳರು ಯಾರಿರಬಹುದೆಂದು ಯೋಚಿಸುತ್ತಲೇ ಟೀ ಕೊಡಲು ಹೊರಟನು.
ನಾ ಮುಂದು ತಾ ಮುಂದು ಎನ್ನುತ್ತಾ ಊರಿನ ಜನರೆಲ್ಲಾ ಹೊನ್ನಪ್ಪ ನಾಯ್ಕನ ಗಜಕೋಲು ಬಂಗಲೆಗೆ ಬಂದು, ತಮ್ಮ ಊರಿನ ಮೊದಲ ಕಳ್ಳತನದ ಸ್ಥಳ ಪರಿಶೀಲನೆಯಲ್ಲಿ ಮುಳುಗಿದರು. ಜನಕ್ಕೊಂದು ಮಾತೆಂಬಂತೆ ಕಟ್ಟು ಕಥೆಗಳ ಮೂಲಕ ಕಳ್ಳತನವನ್ನು ನಿರೂಪಣೆ ಮಾಡುತ್ತಿದ್ದರು. ಹೊನ್ನಪ್ಪ ನಾಯ್ಕನ ಕೆಲವು ಆಪ್ತರು ಸಂಬಂಧಿಕರು ಹಾಗು ಪರಿಚಯಸ್ತರು ಮನೆಯ ಒಳಗಡೆ ಹೋಗಿ ಯಜಮಾನ ಹೊನ್ನಪ್ಪನಿಗೆ ಸಮಾಧಾನ ಹೇಳಲು ಶುರುಮಾಡಿದರು.
ಹಿಂದಿನ ರಾತ್ರಿ ಅಲ್ಲಿದ್ದ ಇಬ್ಬರೂ ಕಾನ್ಸ್ ಟೇಬಲ್ ಗಳು ಸರಿಯಾಗಿ ನಿದ್ರೆ ಇಲ್ಲದೆ, ಸ್ಟೇಷನ್ ನಲ್ಲಿ ಕೂತು ನಿದ್ರೆಗೆ ಜೋತುಬಿದ್ದು ಕುಗುರುತ್ತಿದ್ದರು. ಕಳ್ಳತನದ ವಿಷಯ ತಿಳಿದ ಕೂಡಲೇ, ಎದ್ನೋ ಬಿದ್ನೋ ಎಂಬತೆ ಇಬ್ಬರೂ ಪೋಲೀಸರು ಬೈಕ್ ನಲ್ಲಿ ಬಂಗಲೆಗೆ ಬಂದರು. ನಿನ್ನೆ ರಾತ್ರಿ ಇಲ್ಲಿ ನೋಡಿಕೊಳ್ಳಲು ಒಬ್ಬರನ್ನೂ ಬಿಡದೇ ಎಲ್ಲಾ ಆಳುಗಳನ್ನು ತಮ್ಮ ಜೀಪ್ ಎಳೆಯಳು ಕರೆದುಕೊಂಡು ಹೋಗಿದ್ದರಲ್ಲಿ ನಮ್ಮ ಬೇಜವಾಬ್ದಾರಿಯೂ ಸೇರಿಕೊಂಡಿದೆ. ಇದೇ ಕಾರಣಕ್ಕೆ ಪಿ.ಎಸ್.ಐ ನಮ್ಮ ಮೇಲೆ ಕೋಪಗೊಂಡರೇನು ಗತಿ ಎಂದು ಚಿಂತಿತರಾಗಿ ಬಂಗಲೆಯ ಒಳಗೆ ಯಜಮಾನನ್ನು ವಿಚಾರಿಸಲು ಓಡಿದರು.
ಸಮಯ ಬೆಳಿಗ್ಗೆ 9 ಗಂಟೆ ಆಗಿದೆ. “ಪೋಲೀಸ್ ಸಬ್ ಇನ್ಸ್ಪೆಕ್ಟರ್ ಜಗದೀಶ್ ರಾಮ್” ಜೀಪಿನಲ್ಲಿ ಗಜಕೋಲು ಬಂಗಲೆಗೆ ಬಂದಿಳಿದರು. ಹೊನ್ನಪ್ಪ ನಾಯ್ಕ ಒಬ್ಬ ಶ್ರೀಮಂತ ಮತ್ತು ಪ್ರೌಭಾವಿ ವ್ಯಕ್ತಿ ಆದ್ದರಿಂದ, ಮೇಲಾಧಿಕಾರಿಗಳು ಈ ಕೇಸಿನ ಸಂಪೂರ್ಣ ಜವಾಬ್ದಾರಿ ಪಿ.ಎಸ್.ಐ ಜಗದೀಶ್ ಅವರಿಗೆ ವಹಿಸಿದ್ದರು. ಇನ್ಸ್ಪೆಕ್ಟರ್ ಜಗದೀಶ್ ಒಬ್ಬ ಅತೀ ಬುದ್ದಿವಂತ ಹಾಗೂ ತುಂಬಾನೆ ಕ್ರಿಯೇಟಿವ್ ಆಲೋಚನೆಯಿರುವ ವ್ಯಕ್ತಿ. “ಒಂದೆರಡು ದಿನಗಳಲ್ಲಿ ಆ ಕಳ್ಳರನ್ನು ಈ ಪೋಲೀಸರು ಸುಲಭವಾಗಿ ಹಿಡಿದು ಕಂಬಿಗಳ ಹಿಂದೆ ನಿಲ್ಲಿಸುತ್ತಾರೆ” ಎಂದು ಅಲ್ಲಿದ್ದ ಜನಗಳು ಮಾತನಾಡಿಕೊಂಡರು. ಹೊನ್ನಪ್ಪ ನಾಯ್ಕರನ್ನು ಭೇಟಿ ಆಗಲು ಬಂಗಲೆಗೆ ಕಾಲಿಟ್ಟ ಮರುಕ್ಷಣವೇ, ಈ ಕೇಸಿನ ವಿಚಾರಣೆಯನ್ನು ಜಗದೀಶ್ ಪ್ರಾರಂಭಿಸಿದ್ದರು.
ಅಂಗಳಕ್ಕೆ ಬಂದ ಪಿ.ಎಸ್.ಐ, ಹೊರಗಡೆ ಇದ್ದ ಎಲ್ಲಾ ಊರಿನ ಜನರನ್ನು ವಿಚಾರಣೆಗೆ ಅಡ್ಡಿ ಮಾಡಬೇಡಿ ಎಂದು ಹೇಳಿ ತಮ್ಮ ತಮ್ಮ ಮನೆಗೆ ಹೋಗಲು ಹೇಳಿದರು. ನಂತರ ಹೊನ್ನಪ್ಪ ನಾಯ್ಕನ ಮನೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಆಳುಗಳನ್ನು ಮತ್ತು ಹಿಂದಿನ ರಾತ್ರಿ ಇದ್ದ ಪೋಲೀಸರನ್ನು ಅಂಗಳಕ್ಕೆ ಕರೆದು, ಬೆಳಗ್ಗೆ 10 ಗಂಟೆಯ ಸುಮಾರಿಗೆ ತುರ್ತು ವಿಚಾರಣೆ ಕೈಗೊಂಡರು. ಒಂದು ಕಡೆ ಇಲ್ಲಿ ಅಂಗಳದಲ್ಲಿ ನಿನ್ನೆ ಏನೇನಾಯಿತು ಎಂದು ತಿಳಿದುಕೊಳ್ಳಲು ವಿಚಾರಣೆ ನಡೆಯುತ್ತಿದ್ದರೆ… ಇನ್ನೊಂದು ಕಡೆ, “ಇಡೀ ಊರಿನ ಪ್ರತೀ ಮನೆ ಅಂಗಡಿ ಹೊಲ ತೋಟ ಏನನ್ನೂ ಬಿಡದೇ ಊರಿನ ಮೂಲೆ ಮೂಲೆಯಲ್ಲೂ ಒಂದಿಚ್ಚೂ ಬಿಡದೆ ಹುಡುಕಾಟ ನಡೆಸಬೇಕೆಂದು” ತಿಳಿಸಿ, ಎಲ್ಲಾ ಪೋಲೀಸರನ್ನು ಗುಂಪು ಗುಂಪಾಗಿ ಮಾಡಿ ಪಿ.ಎಸ್.ಐ ಜಗದೀಶ್ ರಾಮ್ ಖಡಕ್ ಆದೇಶ ಹೊರಡಿಸಿದರು.
ಸುಮಾರು ಒಂದು ಘಂಟೆಗಳ ಕಾಲ ವಿಚಾರಿಸಿದ ಪಿ.ಎಸ್.ಐ ಜಗದೀಶ್ ಅವರೆದುರು, ನಿನ್ನೆ ಏನೇನಾಯಿತು ಎಂದು ಆಳುಗಳು, ಇಬ್ಬರು ಕಾನ್ಸ್ ಟೇಬಲ್ ಮತ್ತು ಹೊನ್ನಪ್ಪ ನಾಯ್ಕ ವಿವರಣೆ ಕೊಟ್ಟರು. ಇದೇ ಸಮಯದಲ್ಲಿ ಜಗದೀಶ್ ಗೆ ಕಾಲ್ ಮಾಡಿದ ಒಂದು ತಂಡದ ಪೋಲೀಸರು… “ಸರ್,,, ರೈಲು ಮತ್ತು ಬಸ್ಸು ನಿಲ್ದಾಣದ ಬಳಿ ಇರುವ ಕಾಫಿ ಕೃಷ್ಣಪ್ಪ ಅವರ ಹೋಟೆಲ್ ಹಿಂಬದಿಯಲ್ಲಿ ಒಂದು ಹಳೇಯ ಲಾರಿ ಅನುಮಾನಾಸ್ಪದವಾಗಿ ನಿಂತಿತ್ತು. ಹತ್ತಿರ ಹೋಗಿ ನೋಡಿದಾಗ ಅದರಲ್ಲಿ ಎರಡು ಮೂಟೆ ಅಡಿಕೆ ಉಳಿದಿದೆ ಸರ್ !!” ಎಂದರು.
( ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
ಮುಂಬಾರು, ಹೊಸನಗರ
Nyc bro Intresting
LikeLiked by 1 person
Thank you very much Amith..💐💐
LikeLike
ಕಥೆ👌
LikeLike