“ಬೆಂಕಿ‌ ಮನೆ ಕಳ್ಳರು” !! (ಭಾಗ – 1)

“ಬೆಂಕಿ‌ ಮನೆ ಕಳ್ಳರು” !!
( Part – 1 )

ಶಿವಮೊಗ್ಗ ಹಾಗೂ ಸಾಗರ ನಡುವಿನ ಎರಡು ಊರನ್ನು ತಲುಪುವ ರೈಲಿನ ಹಳಿ, ತನ್ನ ದಾರಿಯಲ್ಲಿ ಸುಮಾರು ಹಳ್ಳಿ ನಗರ ಕಾಡು ಗುಡ್ಡಗಳನ್ನು ಸೀಳಿ ನಿರ್ಮಾಣವಾಗಿತ್ತು. ರಾತ್ರಿ ಹಗಲು ಎನ್ನದೇ ರೈಲುಗಳು ನಿತ್ಯವೂ ಸಂಚರಿಸುತ್ತಿದ್ದವು ಮತ್ತು ಈಗಲೂ ಸಂಚರಿಸುತ್ತಿವೆ. ಹೀಗೆ ಸಾಗುವ ಹಾದಿಯಲ್ಲಿ ಒಂದು ಹಳ್ಳಿ !! ಈ ಕಾದಂಬರಿಯ ನೀವು ಓದುತ್ತಿರುವ ಘಟನೆಯ ಪ್ರಮುಖ ಭಾಗವಾದ ಈ ಹಳ್ಳಿಯ ಹೆಸರು “ಅನಲನಗರ”. ಸುಮಾರು ಸಾವಿರ ವರ್ಷಗಳ ಹಿಂದಿನ ಇತಿಹಾಸ ಇರುವ ಈ ಊರಿಗೆ ಸ್ವಾತಂತ್ರ್ಯ ಹೋರಾಟ, ಅನೇಕ ಚಳುವಳಿ, ಅನ್ಯಾಯದ ವಿರುದ್ದ ಹೋರಾಡುವ ಒಗ್ಗಟ್ಟು… ‌ಹೀಗೆ ಒಂದೊಳ್ಳೆಯ ಹೆಸರು ಗೌರವ ಎಲ್ಲವೂ ಇತ್ತು. ಆದರೆ ಈ ಎಲ್ಲವನ್ನೂ ಈ‌ಗಿನ ತಲೆಮಾರಿನವರು‌ ಉಳಿಸಿಕೊಂಡು ಬರಲಿಲ್ಲ. ಅನಾದಿಕಾಲದಿಂದಲೂ ಇದ್ದ ಆಸ್ತಿಯನ್ನು ಬೆಳೆಸಿಕೊಂಡು ಉಳಿಸಿಕೊಂಡು ಬಂದಿದ್ದ ಈಗಿನವರಿಗೆ ಹಣ ಮಾಡುವ ಆಲೋಚನೆಯೇ ಹೆಚ್ಚಿನದ್ದಾಗಿದೆ.

ಅನಲನಗರ ದಲ್ಲಿ ಆರ್ಥಿಕವಾಗಿ‌ ಹಿಂದುಳಿದವರು ಎಂದರೆ ಬೇರೆ ಊರಿನಿಂದ ಈ ಹಳ್ಳಿಗೆ ಬಂದು ನೆಲೆಕಟ್ಟಿಕೊಂಡವರು ಮಾತ್ರ. ಇವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಅತೀ ಹೆಚ್ಚಾಗಿ ಹಣ ಒಡವೆ ಮನೆ ತೋಟ ಗದ್ದೆ ಉಳ್ಳವರೇ ಆಗಿದ್ದಾರೆ. ಇಲ್ಲಿ ಎಲ್ಲಾ ಮನೆಗಳು ಆಸು ಪಾಸಿನಲ್ಲಿಲ್ಲ. ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ಲಿಸುವ ಸ್ಥಳದ ಸುತ್ತ ಮುತ್ತ ಅಂಗಡಿಗಳು ಹಾಗೂ ಇನ್ನಿತರ ವ್ಯವಹಾರಗಳು ಜೋರಾಗಿಯೇ ನಡೆಯುತ್ತಿವೆ. ರಸ್ತೆಯ ಆಚೆ ಈಚೆ ಸ್ವಲ್ಪ ದೂರದವರೆಗೂ ಮನೆಗಳು ಕಾಣಸಿಕ್ಕರೂ…. ಹೊರ ಊರಿಗೆ ಒಂದಿಂಚ್ಚೂ ಕಾಣದ ಹಾಗೆ ಇನ್ನೂ ಹಲವು ಮನೆಗಳು ಅಲ್ಲಲ್ಲಿ ತೋಟಗಳ ಮರೆಯಲ್ಲಿ ಮಹಡಿಗಳಂತೆ ಎದ್ದು ನಿಂತಿವೆ. ಹೊರ ಜಗತ್ತಿಗೆ ಇದರ ಪರಿಚಯವೇ ಇಲ್ಲ. ಊರಿನಲ್ಲೆಲ್ಲಾ ಕೋಟ್ಯಾಂತರ ರೂಪಾಯಿಗಳ ಅಡಿಕೆ ತೋಟಗಳ “ಧನಿಗಳು ಇದ್ದಾರೆಯೇ ಹೊರತು ದಾನಿಗಳು ಇಲ್ಲ!!”.

ಊರಿನಲ್ಲಿದ್ದ ಅನುಕೂಲಸ್ಥರ ಮನೆಗಳ ಪಟ್ಟಿ‌ ಮಾಡುತ್ತಾ ಹೋದರೆ ಅದು ತುಂಬಾನೆ ದೊಡ್ಡದು.‌ ಅರಮನೆಯಂತಹ ಮನೆಗಳು ರಸ್ತೆಗಳಿಂದ ಸುಮಾರು ದೂರದಲ್ಲಿದ್ದರೂ ಅವರೆಲ್ಲರೂ ಈಗಿನ ತಂತ್ರಜ್ಞಾನವನ್ನು ತುಂಬಾನೆ ಚೆನ್ನಾಗಿ ತಿಳಿದಿದ್ದಾರೆ. ಮನೆಗೊಬ್ಬರು ಇಬ್ಬರಂತೆ ಬೇರೆ ಪಟ್ಟಣ ಬೇರೆ ದೇಶಗಳಲ್ಲಿ ಓದುತ್ತಾ ಕೆಲಸ ಮಾಡುತ್ತಾ ಎಲ್ಲೆಲ್ಲೋ ನೆಲೆಯೂರಿದ್ದರೂ ಕೂಡ… ಇಲ್ಲಿದ್ದ ಮನೆ ತೋಟ ಆಸ್ಥಿ ನೋಡಿಕೊಳ್ಳಲು ಅಣ್ಣ ತಮ್ಮಂದಿರು,‌‌ ಅಪ್ಪ ಅಮ್ಮ, ಬೇರೆ ಊರಿನ ಕೆಲಸದವರು ಹೀಗೆ ಇದ್ದೇ ಇರುತ್ತಿದ್ದರು. ಸುಮಾರು ವರ್ಷಗಳ‌ ಹಿಂದೆಯಿಂದಲೂ ಇದೇ ರೀತಿ ನಡೆದುಕೊಂಡು‌ ಬಂದಿದ್ದು, ಈಗಲೂ ಹಾಗೆಯೇ ಇದೆ.

ಅನಲನಗರ ದಲ್ಲಿರುವ ಅದೆಷ್ಟೋ ಹಳೇಯ ಮತ್ತು ದೊಡ್ಡದಾದ ಮನೆಗಳಲ್ಲಿ ಒಂದು ಮನೆಯ ಹೆಸರು “ಗಜಕೋಲು ಬಂಗಲೆ”.‌ ಯಾವುದಕ್ಕೂ ಕಮ್ಮಿ ಇರದ ಈ ಮನೆಯ ಯಜಮಾನನ ಹೆಸರು “ಹೊನ್ನಪ್ಪ ನಾಯ್ಕ”. ಒಂದು ಸಂಜೆ ಸುಮಾರು 7 ಗಂಟೆಯ ಹಾಗೆ, ರೈಲು ನಿಲ್ದಾಣದ ಬಳಿ ತನ್ನ ಜೀಪು ನಿಲ್ಲಿಸಿ ಬೆಂಗಳೂರಿನಿಂದ ಬರುತ್ತಿದ್ದ ಮಗನನ್ನು ಇಳಿಸಿಕೊಳ್ಳಲು ರೈಲ್ವೇ ಸ್ಟೇಷನ್ ಒಳಗೆ ಹೋಗಿ ಮಗನನ್ನು ಇಳಿಸಿಕೊಂಡು ಇಬ್ಬರೂ ಜೀಪಿನ ಬಳಿ ಬಂದು ನೋಡಿದರೆ…. ಜೀಪು ಬೆಂಕಿ ಹತ್ತಿ ಉರಿಯುತ್ತಿದೆ. ನೋಡ ನೋಡುತ್ತಲೇ ಜೀಪು ಸುಟ್ಟು ಹೋಗಿ, ಕೆಲವೇ ನಿಮಿಷದಲ್ಲಿ ಈ ವಿಷಯ ಊರಿನ ತುಂಬೆಲ್ಲಾ ದೊಡ್ಡದಾಗಿ ಸುದ್ದಿಯಾಗಿದೆ‌. ಗಜಕೋಲು ಬಂಗಲೆ ಮನೆಯ ಹೊನ್ನಪ್ಪ ನಾಯ್ಕನವರ ಜೀಪಿಗೆ ಬೆಂಕಿ ಹಚ್ಚುವ ಧೈರ್ಯ ಯಾರಿಗೆ ಬಂತೆಂದ್ದು ಕೆಲವರು ಮಾತನಾಡಿಕೊಂಡರೆ, ಇನ್ನು ಕೆಲವರು ಇದು ಆಕಸ್ಮಿಕವಾಗಿ ತಗುಲಿದ ಬೆಂಕಿಯೇ ಇರಬೇಕು ಎಂದು ತೀರ್ಮಾನಿಸಿದರು.‌ ಹೊನ್ನಪ್ಪ ಪೋಲೀಸರಿಗೆ ಹತ್ತಿರದವನೇ ಆದ್ದರಿಂದ ಪೋಲೀಸರು ತಡಮಾಡದೇ ಅಲ್ಲಿಗೆ ಬಂದರು.

ಎಲ್ಲರ ಗಮನವೂ ಬೆಂಕಿ ಹೊತ್ತಿ ಉರಿಯುತ್ತಿದ್ದ ಜೀಪಿನ‌ ಕಡೆಗಿದೆ. ಊರಿನ ಜನಗಳ ಗುಂಪಿನ ಮಧ್ಯೆಯೇ ಹೊಸದಾಗಿ ಸೇರಿಕೊಂಡಿದ್ದ ಇಬ್ಬರು ಕಳ್ಳರು, “ಕತ್ತಲೆಯಲ್ಲಿ ಬೆಂಕಿ ಹಚ್ಚಿ ಕಳ್ಳತನದ ಕಿಡಿಯನ್ನು ದೊಡ್ಡ ಬೆಂಕಿಯ” ಮೂಲಕವೇ ಮಾಡಿರುವುದು ಕಳ್ಳರ ಗುಂಪಿನವರಿಗೆ ಹೊರತುಪಡಿಸಿ, ಬೇರೆಯವರಿಗೆ ಗೊತ್ತಾಗಲೇ ಇಲ್ಲ. “ಇನ್ನೇನು ಕೆಲವೇ ದಿನಗಳಲ್ಲಿ ಬೆಂಕಿ ಮನೆ‌‌‌ ಕಳ್ಳರು ಎಂದು ಕುಖ್ಯಾತಿ ಪಡೆಯುವ ಬುದ್ಧಿವಂತ ಚೋರರು!!” ಊರಿಗೆ ಕಾಲಿಟ್ಟಿದ್ದಾರೆಂದು ಯಾರೊಬ್ಬರಿಗೂ ಯಾವ ಊಹೆಯೂ ಇಲ್ಲ. ಕತ್ತಲು ಹೆಚ್ಚಾಗಿ ಸುಮಾರು 9 ಗಂಟೆಯೇ ಆಗಿದೆ. ಜನರು ಅವರವರ ಮನೆ ಕಡೆ ಹೊರಟರು‌. ಅಲ್ಲೇ ಬಂದಿದ್ದ ಪೋಲೀಸರು ಈ ವಿಷಯದ ಬಗ್ಗೆ ಗಜಕೋಲು ಬಂಗಲೆಯ ಯಜಮಾನನಿಂದ ವಿಷಯ ಪಡೆದ ನಂತರ, ತಮ್ಮ ಪೋಲೀಸ್ ಜೀಪಿನಲ್ಲಿಯೇ ಮನೆಗೆ ಬಿಡುವುದಾಗಿ ತಿಳಿಸಿದರು.‌‌‌‌‌‌… !! ಜೀಪ್ ಹತ್ತಿದ ಯಜಮಾನ ಮತ್ತು ಅವನ‌ ಮಗನನ್ನು ಪೋಲೀಸರು ಅವರ ಮನೆ ಕಡೆಗೆ ಕರೆದುಕೊಂಡು ಹೊರಟರು.

ಕಳ್ಳರ ಗುಂಪು ದೊಡ್ಡದಾಗಿತ್ತು ಮತ್ತು ಅವರ ಕಳ್ಳತನದ ಆಲೋಚನೆ ಯೋಜನೆ ಎಲ್ಲವೂ ಇನ್ನೂ ದೊಡ್ಡದಿತ್ತು. ಇಬ್ಬರು ಕಾನ್ಸಟೇಬಲ್ ಇದ್ದ ಪೋಲೀಸ್ ಜೀಪ್ ಗಜಕೋಲು ಬಂಗಲೆಗೆ ತಲುಪುವಷ್ಟರಲ್ಲಿ ಸಮಯ ಸುಮಾರು ರಾತ್ರಿ 10 ಗಂಟೆ. ಸಾಕಷ್ಟು ಅನುಕೂಲ ಇದ್ದ ಯಜಮಾನ ಹೊನ್ನಪ್ಪ ನಾಯ್ಕನಿಗೆ ಅವನ ಜೀಪ್ ಬೆಂಕಿಯಲ್ಲಿ ಸುಟ್ಟು ಹೋಗಿ ಆದ ನಷ್ಟದ ಜೊತೆಗೆ, ಇದರ ಹಿಂದಿನ ಕಾರಣ ಯಾರು? ಏನು? ಎಂಬ ಚಿಂತೆಯೂ ಹೆಚ್ಚುತ್ತಿದೆ. ಹೊನ್ನಪ್ಪನ ಮನೆಯಲ್ಲಿಯೇ ಊಟ ಮಾಡಿದ ಆ ಇಬ್ಬರು ಪೋಲೀಸರು, ಜೀಪ್ ಸುಟ್ಟು ಹೋದ ಹಿಂದಿದ್ದ ಕಾರಣ ಕೈವಾಡ ಎಲ್ಲವನ್ನೂ ಆದಷ್ಟು ಬೇಗ ನಿಮಗೆ ತಿಳಿಸುತ್ತೇವೆಂದು ಧೈರ್ಯ ಹೇಳಿ ರಾತ್ರಿ‌ 11 ರ ವೇಳೆಗೆ ಅಲ್ಲಿಂದ ಹೊರಟರು.

ಮನೆಯಿಂದ ಸ್ವಲ್ಪ ದೂರ ಹೋದ‌ ಮೇಲೆ, ಕಾಡು ದಾರಿಯಲ್ಲೇ ಪೋಲೀಸರ ಜೀಪ್ ಗೆ ಎದುರಿನಿಂದ ನಡುದಾರಿಯಲ್ಲಿ ವೇಗವಾಗಿ ಬಂದ ಬೈಕ್ ಒಂದಕ್ಕೆ ತಾಗಿಸುವುದನ್ನು ತಪ್ಪಿಸಲು‌ ಹೋಗಿ… ನಿಯಂತ್ರಣ ತಪ್ಪಿದ ಪೋಲೀಸ್ ಜೀಪ್ ದಾರಿ ಪಕ್ಕದ ಚರಂಡಿಯ ಹೊಂಡಕ್ಕೆ ಹಾರಿತು. ಬೈಕ್ ಅನ್ನು ನಿಲ್ಲಿಸದೇ ಆ ವ್ಯಕ್ತಿ ಪರಾರಿಯಾದನು‌. ಜೀಪಿನ ಒಂದು ಕಡೆಯ ಎರಡೂ ಚಕ್ರವೂ ಹೊಂಡಕ್ಕೆ ಹಾರಿದ ಪರಿಣಾಮ, ಆ ಇಬ್ಬರು ಪೋಲೀಸರಿಗೆ ಅದನ್ನು ಮೇಲೆತ್ತಲು ಆಗುತ್ತಿಲ್ಲ. ಎದುರಿಗೆ ಬಂದು ಇಷ್ಟೆಲ್ಲಾ ರಾದ್ಧಾಂತ ಮಾಡಿ, ನಂತರ ನಿಲ್ಲಿಸದೇ ಹೋದ ಆ ಬೈಕ್ ಸವಾರನಿಗೆ ಯಾವನೋ ಕುಡುಕ ಇರಬಹುದೆಂದು ಬೈದುಕೊಂಡರು. ಪೋಲೀಸರ ಬಳಿಯಿದ್ದ ಮೊಬೈಲಿನ ಸಿಮ್ ಗೆ ಆ ಜಾಗದಲ್ಲಿ ನೆಟ್ ವರ್ಕ ಸಿಗುತ್ತಿಲ್ಲ. ಸ್ವಲ್ಪ ಸಮಯದ ನಂತರ ಎದುರಿನಿಂದ ಬೈಕ್ ನಲ್ಲಿ ಬಂದ ಇನ್ಬೊಬ್ಬ ವ್ಯಕ್ತಿಯನ್ನು ತಡೆದು, ಗಜಕೋಲು ಬಂಗಲೆಯ ವರೆಗೂ ಬಿಡಲು ಹೇಳಿದರು.

ಹೆಲ್ಮೆಟ್ ಧರಿಸಿದ್ದ ಈ ಬೈಕ್‌ ನಲ್ಲಿದ್ದ ವ್ಯಕ್ತಿಯೇ “ನಾಲ್ಕನೇ ಕಳ್ಳ!!”. ಇಬ್ಬರು ಕಳ್ಳರು ರೈಲ್ಲೇ ಸ್ಟೇಷನ್ ಬಳಿ ಅಡಗಿಕೊಂಡು ಅಲ್ಲಿನ‌ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ಹಾಗಾದರೇ “ಮೂರನೇ ಕಳ್ಳ ಯಾರು????” ಎಂದರೆ, ಪೋಲೀಸರ ಜೀಪಿಗೆ ಅಡ್ಡ ಬಂದಂತೆ ನಾಟಕವಾಡಿ ಜೀಪನ್ನು ಹೊಂಡಕ್ಕೆ ಹಾರಿಸಿದವನೇ ಇಲ್ಲಿ ಮೂರನೇ ಕಳ್ಳ. ಇಲ್ಲಿ ಆದ ಪ್ರತೀ ಘಟನೆಯೂ ಕಳ್ಳರ ಪ್ಲಾನ್ ನ ಹಾಗೆ, ಅದೇ ರೀತಿ ನಡೆಯಿತು.

ಇಬ್ಬರನ್ನೂ ಕೂರಿಸಿಕೊಂಡ ನಾಲ್ಕನೇ ಕಳ್ಳ ನಿಧಾನವಾಗಿ ಬೈಕ್ ಓಡಿಸುತ್ತಾ, ಸುಮಾರು 12:30 ಕ್ಕೆ ಗಜಕೋಲು ಬಂಗಲೆಯಲ್ಲಿ ಪೋಲಿಸರನ್ನು ಬಿಟ್ಟು ಅಲ್ಲಿಂದ ಹೊರಟನು. ಮಲಗಿದ್ದ ಯಜಮಾನ ಎದ್ದು ಬಂದು ಮನೆಯ ಹೊರಗೆ ಮಲಗಿದ್ದ ಕೆಲಸದ ಆಳುಗಳಿಗೆ ಟ್ರಾಕ್ಟರ್ ನಲ್ಲಿ ಹೋಗಿ, ಏನೂ ತೊಂದರೆ ಆಗದಂತೆ ಜೀಪನ್ನು ಎಳೆದು ಸ್ಟೇಷನ್ ವರೆಗೂ ಬಿಡಲು ಹೇಳಿದನು. ಮೊದಲೇ ತನ್ನ ಜೀಪ್ ಸುಟ್ಟು ಹೋಗಿದ್ದ ಚಿಂತೆಯಲ್ಲಿದ್ದ ಯಜಮಾನ, ಒಳಗೆ ತೆರಳಿ ಮಲಗಿದನು.

ಟ್ರಾಕ್ಟರ್ ಡ್ರೈವರ್ ಮನೆಯ ಹೊರಗಿನ ಆಳುಗಳನ್ನು ಮತ್ತು ಪೋಲೀಸರನ್ನು ಕೂರಿಸಿಕೊಂಡು ಜೀಪ್ ಇದ್ದ ಸ್ಥಳಕ್ಕೆ ಎಲ್ಲರೂ ಬಂದರು. ಹೊಂಡದಿಂದ ಜೀಪನ್ನು ಎಳೆದ ನಂತರವೂ ಜೀಪ್ ಸ್ಟಾರ್ಟ ಆಗದ ಕಾರಣ, ಟ್ರಾಕ್ಟರ್ ನಲ್ಲಿ ಜೀಪನ್ನು ಎಳೆದುಕೊಂಡು ಪೋಲಿಸ್ ಸ್ಟೇಷನ್ ಗೆ ತಂದು ನಿಲ್ಲಿಸಿದರು. ಟ್ರಾಕ್ಟರ್ ನಲ್ಲಿ ಎಲ್ಲರೂ ಮತ್ತೆ ಗಜಕೋಲು ಬಂಗಲೆಗೆ ಬರುವಾಗ ಬೆಳಗಿನ ಜಾವ ಗಂಟೆ 4:30 ಆಗಿದೆ. ಜೊತೆಗೆ‌ ಒಂದು ಅಚ್ಚರಿ ಮತ್ತು ಆಘಾತ ಅವರಿಗೆ ಅಂಗಳದಲ್ಲಿ ಕಾದು ಕುಳಿತಿತ್ತು. ಮನೆಯ ಪಕ್ಕದ ದೊಡ್ಡ ಅಂಗಳದ ಚಪ್ಪರದಲ್ಲಿ ಬೇಯಿಸಿ ಒಣಗಿಸಿದ್ದ, “ಮರುದಿನ ಮಾರಾಟ ಮಾಡಲು ಮೂಟೆ ಕಟ್ಟಿ ಇಟ್ಟಿದ್ದ ಅಡಿಕೆಯ ಕಾಲು ಭಾಗ ಕಳ್ಳತನವಾಗಿತ್ತು !!”

ಸರಿ ಸುಮಾರು ಮೂರು ಸಾವಿರ ಕೆ.ಜಿ ಅಂದರೆ “30 ಕ್ವಿಂಟಾಲ್ ಅಡಿಕೆಯನ್ನೇ ಕದ್ದೊಯ್ದಿದ್ದರು!!”. ಅದರ ಬೆಲೆ ಅಂದಾಜು 10 ರಿಂದ 15 ಲಕ್ಷ. ಒಂದೆರಡಲ್ಲದೇ 42 ರಿಂದ 45 ಮೂಟೆಗಟ್ಟಲೆ ಅಡಿಕೆಯನ್ನು ಸದ್ದಿಲ್ಲದೇ ಕಳ್ಳರು ಕದ್ದು ಪರಾರಿಯಾಗಿದ್ದರು. ಪ್ರತಿ ಹೆಜ್ಜೆಯನ್ನೂ ಮೊದಲೇ ರೂಪಿಸಿಕೊಂಡು ತಮ್ಮ‌ ಕೆಲಸದಲ್ಲಿ ಯಶಸ್ವಿಯಾಗಿದ್ದರು. ಅಡಿಕೆ ಇಲ್ಲದ ವಿಚಾರ ತಿಳಿದ ಕೂಡಲೇ ಓಡಿದ ಕೆಲಸಗಾರರು,‌ ಮಲಗಿದ್ದ ಯಜಮಾನನ್ನು ಎಬ್ಬಿಸಿ ವಿಷಯ ತಿಳಿಸಿದರು !!

“ಎಷ್ಟು ಜನ ಕಳ್ಳರಿದ್ದರು?? ಹೇಗೆ ಈ ಕಳ್ಳತನವನ್ನು ಮಾಡಿದರು?? ಯಾರು ಇದರ ಹಿಂದಿನ ಬುದ್ದಿವಂತ ತಲೆ?? ಕಳ್ಳರು ಅದೇ ಊರಿನವರ ಅಥವಾ ಹೊರಗಿನವರ?? ಎಷ್ಟು ದಿನದ ಪ್ಲಾನ್ ಇದಾಗಿತ್ತು?? ಪೋಲೀಸರಿಗೆ ಕಳ್ಳರು ಸಿಗಬಹುದಾ?? ಕಳ್ಳರ ಮುಂದಿನ ಕಳ್ಳತನ ಎಲ್ಲಿ ಯಾವಾಗ ಹೇಗೆ??” ಈ ಎಲ್ಲಾ ನಿಗೂಢ ಪ್ರಶ್ನೆಗಳಿಗೆ ಉತ್ತರ ಮುಂದಿನ ಭಾಗದಲ್ಲಿ.. ನಿರೀಕ್ಷಿಸಿ !! ಮತ್ತು ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.. ಧನ್ಯವಾದಗಳು!

( ಮುಂದುವರೆಯುತ್ತದೆ…)

— ದೀಕ್ಷಿತ್ ದಾಸ್
     ಮುಂಬಾರು, ಹೊಸನಗರ

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

14 thoughts on ““ಬೆಂಕಿ‌ ಮನೆ ಕಳ್ಳರು” !! (ಭಾಗ – 1)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: