ಹೀಗೊಂದು ಅನುರಾಗ !!(ಭಾಗ – 12)

“ಹೀಗೊಂದು ಅನುರಾಗ !!”
(Part – 12)

ಆ ಒಂದು ದಿನ‌ ನನ್ನ ಪಾಲಿಗೆ ಜೀವನದ ಪ್ರತಿ ಕ್ಷಣವೂ ಮರೆಯಲಾಗದ ಕೆಟ್ಟ ನೆನಪಾಗಿ ಉಳಿದು ಹೋಗುತ್ತದೆ, ಎನ್ನುವ ಚಿಕ್ಕ ಸುಳಿವೂ ನನಗಿರಲಿಲ್ಲ……. ಎನ್ನುತ್ತಾ ಸ್ನೇಹಾ ಮಾತು ಆರಂಭಿಸಿದಳು. ಸಂಜಯ್ ಆ ಪೋಟೋದಲ್ಲಿ‌ ತನ್ನನ್ನೇ ನೋಡುವಂತೆ ನಗುತ್ತಿರುವ ಸಂಗೀತಾಳ ಕಡೆ ನೋಡುತ್ತಿದ್ದನು. ಇಷ್ಟು ದಿನದ ತನ್ನ ಪ್ರಯಾಣದಲ್ಲಿ ಸೇರುವ ಸ್ಥಳ ನಿಜವಾಗಿಯೂ ಇರಲೇ ಇಲ್ಲ !! ಎಂಬುದು ಸಂಜಯ್ ನನ್ನು ಮೌನದ ಮನೆಯೊಳಗೆ ಬಿಗಿಯಾಗಿ ಬಂಧಿಸಿಟ್ಟಿತ್ತು. ಸ್ನೇಹಾ ಮಾತು ಮುಂದುವರೆಸಿದಳು…

ಅಂದು ನೀನು ಲೈಬ್ರರಿಯಲ್ಲಿ ಸಂಗೀತಾ ಬಿಟ್ಟು ಹೋಗಿದ್ದ ಪುಸ್ತಕ ಮತ್ತು ಅದರಲ್ಲಿನ ಅರ್ಥಪೂರ್ಣವಾದ‌ ಕನ್ನಡದ ಸೊಗಸನ್ನು ತುಂಬಿಸಿ ಅವಳು ಬರೆದಿದ್ದ ಕವಿತೆ, ಮತ್ತು ಕಥೆಗಳು ನಿನಗೆ ಅವಳ ಮೇಲೆ ಮನಸ್ಸಾಗಿಸಿತ್ತು.‌ ಆದರೆ ನೀನು ಅಂದುಕೊಂಡಂತೆ ಅವಳು ನಮ್ಮ ಕಾಲೇಜಿನ ಹುಡುಗಿಯೇ ಆಗಿರಲಿಲ್ಲ. ನಿನಗೆ ನೆನಪಿರಬಹುದು, ನಮ್ಮ ಕಾಲೇಜಿನ‌ ಸ್ವಲ್ಪ ದೂರದಲ್ಲೇ ಇದ್ದ ನಮ್ಮದೇ ಮತ್ತೊಂದು ಪದವಿ ಕಾಲೇಜಿನಲ್ಲಿ ನೀನು ರಚಿಸಿದ್ದ‌ ಅದ್ಭುತವಾದ ಪ್ರಬಂಧದ ಸಾಲುಗಳಿಗೆ ಒಳ್ಳೆಯ ಮೆಚ್ಚುಗೆಯ ಜೊತೆಗೆ ಪ್ರಶಸ್ತಿಯೂ ಲಭಿಸಿತ್ತು.‌ ಮೊದಲ‌ ಬಹುಮಾನ ಬಂದ ನಿನಗೆ ನಂತರದ ಬಹುಮಾನ‌ ಪಡೆದ ಅದೇ ಕಾಲೇಜಿನ ಸಂಗೀತಾಳ ಹೆಸರು ಕರೆದಾಗ ಅದನ್ನು ನೀನು ಗಮನಿಸಲಿಲ್ಲ. ಆದರೆ ಅವಳು ನೀ ರಚಿಸಿದ್ದ ಪ್ರತಿ ಸಾಲುಗಳನ್ನು ಓದಿ ನಿನ್ನ ಜೊತೆ‌‌ ಮಾತನಾಡಬೇಕೆಂದು ಹಲವು ಭಾರಿ ನನ್ನೊಡನೆ ಹೇಳಿಕೊಂಡಿದ್ದಳು.‌ ನನ್ನೊಡನೆ ಹಠ ಮಾಡಿ ನಿನ್ನ ಸಾಲುಗಳನ್ನು ಪಡೆದು ಓದುತ್ತಿದ್ದಳು. ನೀ‌ ಬರೆದ ಅನೇಕ‌‌ ಸಾಲುಗಳು ನಿನ್ನ ಸ್ನೇಹಿತನ ಸಹಾಯದಿಂದ ನಾನು ಅದನ್ನು ಸಂಗೀತಾಳಿಗೆ  ತಲುಪಿಸುತ್ತಿದ್ದೆ. ತುಂಬಾ ಸಲ‌ ನಿನಗಾಗಿ ಈ‌ ಕಾಲೇಜಿಗೆ ಬಂದು ಹೋಗುತ್ತಿದ್ದರೂ, ಅವಳು ನಿನ್ನ ಬಳಿ ಒಮ್ಮೆಯೂ ಮಾತನಾಡುವ ಪ್ರಯತ್ನ ಮಾಡಲಿಲ್ಲ. ಈ‌‌ ಪ್ರಶ್ನೆಗೆ ಅವಳು ನನಗೆ ಉತ್ತರವೇ ಕೊಡಲಿಲ್ಲ. ನನ್ನ ಯಾವ ವಿಷಯವನ್ನೂ ನೀವು ಸಂಜಯ್ ಗೆ ಹೇಳಬಾರದೆಂದು ನನ್ನ ಬಳಿ ಹಾಗೂ ನಿನ್ನ ಸ್ನೇಹಿತನೊಬ್ಬನ ಬಳಿ ಮಾತು ಪಡೆದುಕೊಂಡಿದ್ದಳು.

ನೀನು ಲೈಬ್ರರಿಯಲ್ಲಿ ನೋಡಿದ್ದ ಅವಳ ಪುಸ್ತಕ, ಅವಳು ಬೇಕಂತಲೇ ಅಲ್ಲಿ ಬಿಟ್ಟು ಹೋಗಿದ್ದಳು. ಬಹಳ ದಿನದ ವರೆಗೂ ಇದನ್ನೇ ಮಾಡುತ್ತಾ ನಮ್ಮ‌‌ ಕಾಲೇಜಿನಲ್ಲೇ ಇರುತ್ತಿದ್ದ ಅವಳಿಗೆ ಕೊನೆಗೊಂದು‌‌ ದಿನ‌ ಆ ಸಮಯ ಬಂದಿತ್ತು.‌ ನೀನು ಅದೇ ಟೇಬಲ್‌‌ ಬಳಿ‌‌ ಹೋಗಿ‌‌ ಕುಳಿತಾಗ ಅವಳು ಇಟ್ಟಿದ್ದ ಆ ಪುಸ್ತಕ ನಿನ್ನ ಕೈ ಸೇರಿತ್ತು ಮತ್ತು ನೀನು ಅದರ ಒಡತಿಗಾಗಿ ಪ್ರತಿ ದಿನವೂ ಕಾಯುತ್ತಿದ್ದರೆ.. ಅವಳು ಮಾತ್ರ ಅಂದಿನಿಂದ ನಮ್ಮ‌‌‌ ಕಾಲೇಜಿನ ಕಡೆಗೆ ಬರುವುದನ್ನೇ ಬಿಟ್ಟಳು. ಅವಳು ಅಂದುಕೊಂಡಂತೆ, ಅವಳಂತೆಯೇ ಬರವಣಿಗೆಯ ಅಭಿರುಜಿ ಇರುವ ನಿನಗೆ ಅವಳು ಬರೆದ ಸಾಲುಗಳನ್ನು ತಲುಪಿಸಿ, ನಿನ್ನನ್ನು ಭೇಟಿಯಾಗುವ ಬಯಕೆ ಅವಳದ್ದಾಗಿತ್ತು. ನನ್ನ ಬಳಿ‌‌ ಇದನ್ನು ಹೇಳುತ್ತಿದ್ದಾಗ ನಾನು ಅವಳ‌‌‌ ಮಾತಿಗೆ ತಲೆ ಆಡಿಸುತ್ತಾ ಅವಳ ಸಂತೋಷದಲ್ಲಿ ನಾನು ನೆಮ್ಮದಿಯಿಂದ ಇರುತ್ತಿದ್ದೆ. ನಮ್ಮ‌ದು ಮುದ್ದಾದ ಗೆಳೆತನ‌‌‌ ಎನ್ನುತ್ತಾ ಸಂಗೀತಾಳನ್ನು ನೆನೆದು ಸ್ನೇಹಾ ಕಣ್ಣುಗಳಲ್ಲಿ ಅವಳಿಲ್ಲದ ನೋವು ಕಣ್ಣೀರಾಗಿತ್ತು.

ಎಲ್ಲವನ್ನೂ ಸಂಜಯ್ ನಿಗೆ ಹೇಳಿ ಮುಗಿಸಬೇಕೆಂದು ನಿರ್ಧರಿಸಿದ್ದ ಸ್ನೇಹಾ, ತನ್ನ ಗೆಳತಿ ಸಾಯುವಾಗ ಪಡೆದುಕೊಂಡಿದ್ದ ಮಾತನ್ನು ಅವಳ‌‌‌ ಸಂತೋಷದ‌ ಭಾಗವಾಗಿದ್ದ ಸಂಜಯ್ ನ ನೋವು ತಾಳಲಾರದೆ, ಮಾತು ತಪ್ಪಿ ಸತ್ಯ ಹೇಳುವ ನಿರ್ಧಾರ ಮಾಡಿದ್ದಳು. ನೀನು ನಮ್ಮ ಕಾಲೇಜಿನಲ್ಲಿ‌‌ ಅವಳಿಗಾಗಿ ಅವಳ ಉಂಗುರದ ಕೈ ಸುಳಿವಿನಿಂದ ಹುಡುಕುತ್ತಿದ್ದರೆ, ಅವಳಲ್ಲಿ ನಿನ್ನೆದುರು ಬಂದು ನಿನ್ನೊಡನೆ ತನ್ನನ್ನು ಪರಿಚಯಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿದ್ದಳು. ನೀನು ಅವಳಿಗಾಗಿ ಅಲೆಯುತ್ತಾ ಎರಡು ವಾರ ಆಗುವಷ್ಟರಲ್ಲಿ, ಒಂದು ದಿನ ಸಂಗೀತಾ ನನ್ನ ಬಳಿ‌ ಬಂದು ನಾಳೆ ಸಂಜಯ್ ಗಾಗಿ ಲೈಬ್ರರಿಯ ಅದೇ ಟೇಬಲ್ ನಲ್ಲಿ‌ ಕಾಯುತ್ತಿರುತ್ತೇನೆ ಮತ್ತು ಅವನ‌ ಸ್ನೇಹಿತನಿಗೆ ಹೇಳಿ‌ ಅವನನ್ನು ಅಲ್ಲಿಗೆ ಕರೆತಂದು ಆಶ್ಚರ್ಯಗೊಳಿಸಬೇಕು ಎಂದು ಹೇಳಿದ್ದಳು. ಅವಳ‌ ಮಾತಿಗೆ ಒಪ್ಪಿದ ನಾನು, ಸಂತೋಷವಾಗಿದ್ದ ಅವಳನ್ನು ಬಿಡಲು ಅವಳ ಹಾಸ್ಟೆಲ್ ಸಮೀಪ ಹೋದಾಗ, ಅಲ್ಲಿ‌ ಅವಳ ಅಪ್ಪ ಗೇಟಿನ ಬಳಿಯಲ್ಲಿ ನಿಂತಿದ್ದರು. ಅಪ್ಪನನ್ನು‌ ನೋಡಿದ ಕೂಡಲೇ ಸಂತೋಷದಿಂದ ಇದ್ದ ಸಂಗೀತಾ ಸಪ್ಪೆಯಾಗಿ, ನಿಂತಲ್ಲೇ ಸ್ತಬ್ಧವಾದಳು. ಅವಳು ನನಗೆ ಹೇಳಿದ ಹಾಗೆ.. ಅವಳ ಮನೆಯವರು ತುಂಬಾನೆ ಅನುಕೂಲವಾಗಿದ್ದು ಅವಳ ಮದುವೆಗಾಗಿ ತುದಿಗಾಲಲ್ಲಿ ನಿಂತಿದ್ದರು. ಅಜ್ಜನ ಕಾಲದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮಾತು ಕೊಟ್ಟ ವರನ‌ ಜೊತೆ‌ ಮದುವೆಗೆ ಇವಳನ್ನು ಎಷ್ಟೇ ಒತ್ತಾಯಿಸಿದರೂ ಇವಳು ಒಪ್ಪಿರಲಿಲ್ಲ. ಆ ದಿನ ಅವಳ ಅಪ್ಪ ನಮ್ಮನ್ನು ನೋಡಿದ ಕೂಡಲೇ ನಮ್ಮ‌ ಬಳಿ ಬಂದು ನನ್ನನ್ನು ನಗು ಮುಖದಿಂದ‌ ಮಾತನಾಡಿಸಿ, ಮಗಳ ಕ್ಷೇಮ ವಿಚಾರಿಸುತ್ತಾ‌ ಸಂಗೀತಾಳನ್ನು ಕಾರಿನಲ್ಲಿ ಕೂರಿಸಿಕೊಂಡರು, ಕಾರು ಹೊರಟಿತ್ತು.‌ ಹೊರಡುವ ಕಾರಿನಲ್ಲಿ ನನ್ನ ಕಡೆ ನೋಡುತ್ತಿದ್ದ ಅವಳ ಕಣ್ಣಿನಲ್ಲಿ ಸಂಜಯ್ ನನ್ನು ಭೇಟಿ ಆಗದೇ ಹೋಗುತ್ತಿರುವ ನೋವಿರುವುದು ನನಗೆ ಕೂಗಿ ಹೇಳುವಂತಿತ್ತು.

ಅವಳು ನನ್ನನ್ನು ನೋಡುತ್ತಲೇ, ಕಾರು ಇನ್ನೇನು ಹಾಸ್ಟೆಲ್ ಗೇಟಿನಿಂದ ಮುಖ್ಯರಸ್ತೆಗೆ ಹೋಗುತ್ತಿದ್ದಂತೆ……… ವೇಗವಾಗಿ ಬರುತ್ತಿದ್ದ ಲಾರಿ ಕಾರಿಗೆ ತಾಗಿದ ರಭಸಕ್ಕೆ, ನನ್ನ ಕಣ್ಣೆದುರೇ ಅವಳಿದ್ದ ಕಾರು ಸುಮಾರು ದೂರದವರೆಗೂ ಜಾರಿಹೋಗಿತ್ತು. ಕಣ್ಣೆದುರೇ ಆ ಘಟನೆಗೆ ನೋಡಿದ ನಾನು, ಸಂಗೀತಾ ಎಂದು ಕೂಗತ್ತಾ ಓಡಿಹೋದೆ ಆದರೆ ಕಾರು ಅದಾಗಲೇ ಸುಮಾರು ದೂರ ಜಾರಿ ರಸ್ತೆ‌ ಪಕ್ಕದ ಮರಕ್ಕೆ ಹೊಡೆದಿತ್ತು. ಕಾರನ್ನು ಓಡಿಸುತ್ತಿದ್ದ ಅವಳ ಅಣ್ಣ, ಒಳಗಿದ್ದ ಅವಳ ಅಪ್ಪ, ಇನ್ನೊಬ್ಬರು ಅವರ ಮನೆಯ ಆಳು‌ ಈ‌ ಎಲ್ಲಾ ಮೂರೂ ಜನರು ಒಳಗೆ ಸಿಲುಕಿ‌ ಹೊರಬರಲಾಗದೆ ಪ್ರಜ್ಞೆ ಕಳೆದುಕೊಂಡರು. ಸಂಗೀತಾ ಎಂದು ಅರಚಿಕೊಳ್ಳುತ್ತಾ ನಾನು ಓಡಿಹೋಗುವ ದಾರಿಯಲ್ಲಿ ರಸ್ತೆಯೇ ರಕ್ತದ ಕೆಂಪು ಹಾಸಿಗಿಯಂತಾಗಿ ಸಂಗೀತಾ ನನ್ನ ಕಡೆ ಕೈ ತೋರಿಸುತ್ತಾ ಒದ್ದಾಡುತ್ತಿದ್ದಳು. ಅಳುತ್ತಾ ಅಸಹಾಯಕತೆಯಿಂದ ಅರಚಿ ಕೊಳ್ಳುತ್ತಾ ಹತ್ತಿರ ಹೋದ ನಾನು ಅವಳನ್ನು ಕಾಲಿನ ಮೇಲೆ ಮಲಗಿಸಿದ್ದಷ್ಟೇ…. ಅವಳು ಇನ್ನೂ ಉಸಿರಾಡುತ್ತಿದ್ದಳು, ನನಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಅಲ್ಲಿ ತುಂಬಿಕೊಂಡಿದ್ದ ಜನರು ಮತ್ತು ಆಂಬುಲೆನ್ಸ್ ಶಬ್ಧಕ್ಕೆ ಅವಳು ಏನನ್ನು ಹೇಳುತ್ತಿದ್ದಾಳೆಂದು ನನಗೆ ಕೇಳಿಸಲಾಗದಷ್ಟು ಭಯಂಕರವಾದ ಸನ್ನಿವೇಶ ಅದಾಗಿತ್ತು. ಎರಡು ಮೂರು ಆಂಬುಲೆನ್ಸ್ ನಲ್ಲಿ ಒಬ್ಬೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದರು‌ ಮತ್ತು ನನ್ನ ಕೈ ಯನ್ನು ಬಿಗಿಯಾಗಿ ‌ಹೀಡಿದ ಸಂಗೀತಾಳ‌ ಜೊತೆಗೆ ನಾನು ಇನ್ನೊಂದು ಆಂಬುಲೆನ್ಸ್ ನಲ್ಲಿ ಅವಳಿಗೆ ಜೊತೆಯಾದೆ. ಕಾಲೇಜಿನ ಹತ್ತಿರದ ಹಾಸ್ಪಿಟಲ್ ನಲ್ಲೇ ಅವಳ ಅಪ್ಪ ಮತ್ತು ಮನೆಯ ಆಳು ಕೊನೆಯುಸಿರೆಳೆದಿದ್ದರು. ಸಂಗೀತಾ ಮತ್ತು ಅವಳ ಅಣ್ಣನಿಗೆ ಈ ವಿಷಯದ ಬಗ್ಗೆ ಏನೂ ಗೊತ್ತಿರಲಿಲ್ಲ.
ನಾನು ಅವಳಿಗಾಗಿ ತುಂಬಾ ಸಮಯದವರೆಗೂ ಐ.ಸಿ.ಯು ನ ಎದುರು ನಿಂತು ಕಾಯುತ್ತಿದ್ದೆ.‌ ಗಂಭೀರ ‌ಸ್ಥಿತಿಯಲ್ಲಿದ್ದ ಅವಳನ್ನು ಮತ್ತು ಅವಳ ಅಣ್ಣನನ್ನು ಅವರ ಮನೆಯ ಕಡೆಯವರು ಬಂದು ಬೇರೆ ಊರಿನ ದೊಡ್ಡ ಆಸ್ಪತ್ರೆಗೆ ಸಾಗಿಸಲು ಮುಂದಾದರು.‌ ಅವರ ಕಡೆಯವರು ನನ್ನನ್ನೂ ಸಹ ಸಂಗೀತಾಳ ಬಳು ಹೋಗಲು ಬಿಡುತ್ತಿರಲಿಲ್ಲ. ಅವಳನ್ನು ಐ.ಸಿ.ಯು ನಿಂದ ಹೊರಗೆ ಕರೆತರುತ್ತಿದ್ದಂತೆ ಅವಳನ್ನು ಮಾತನಾಡಿಸಲು ಓಡಿದೆ. ಅವಳ ನೋವಿನ ಒದ್ದಾಟ ನೋಡಲು ಆಗುತ್ತಿರಲಿಲ್ಲ. ನನ್ನ ಬಳಿ ಮಾತು ತೆಗೆದುಕೊಂಡು.. “ಅವಳ‌ ಉಂಗುರವನ್ನು ನನಗೆ ಕೊಟ್ಟು, ತನ್ನ ರೂಮಿನಲ್ಲಿರುವ ಬಟ್ಟೆಗಳನ್ನು ಮತ್ತು ಪುಸ್ತಕವನ್ನು ತೆಗೆದುಕೊಳ್ಳಲು ಹೇಳಿದ ಸಂಗೀತಾ… ಇನ್ನು ಮುಂದೇ ನೀನೇ ಆ ಉಂಗುರ ಮತ್ತು ಪುಸ್ತಕದ ಹುಡುಗಿ ಎಂದು ಹೇಳುತ್ತಾ ಅತ್ತಳು. ಅವನಿಗೆ ನನ್ನ ವಿಚಾರ ಹೇಳಬೇಡ, ನೀನೆ ಅವನಿಗೆ ಇನ್ನು ಮುಂದೆ ಆ ಉಂಗುರದ ಹುಡುಗಿ ಆಗಬೇಕು. ನಾನಿಲ್ಲದ ನೋವು ಅವನಿಗೆ ಆಗಬಾರದು ಎಂದಳು”. ಮಾತಾಡದ ಸ್ಥಿತಿಯಲ್ಲಿ ಇದ್ದರೂ ಇಷ್ಟೊಂದು ಹೇಳಿದ ಸಂಗೀತಾಳನ್ನು ಆಂಬುಲೆನ್ಸ್ ನಲ್ಲಿ ಕಳಿಸಿದರು.‌

ಇದಾದ ಮೇಲೆ ನಾನು ಒಳ್ಳೆಯ ಸ್ನೇಹಿತೆಯನ್ನು ಕೆಳದುಕೊಂಡೆ ಒಂಟಿಯಾದೆ‌. ಅವಳ ಮೊಬೈಲ್ ಗೆ ಕಾಲ್ ಹೋಗಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅವಳ‌ ಬಗ್ಗೆ ತಿಳಿಯಲಿಲ್ಲ. ‌ಮೂರು ದಿನಗಳ ನಂತರ ಅವಳ ಹಾಸ್ಟೆಲ್ ನಲ್ಲಿ ಪುಸ್ತಕವನ್ನು ತರಲು‌ ಹೋದಾಗ, ಅಲ್ಲಿದ್ದವರನ್ನು ವಿಚಾರಿಸಿದೆ. ಸಂಗೀತಾ ಚಿಕಿತ್ಸೆಗೆ ಸಹಕರಿಸಿದೆ ಕೊನೆಯುಸಿರೆಳೆದಳು ಎಂದರು. ನಾನು ಇದನ್ನು ನಂಬಲಿಲ್ಲ. ಹೇಗಾದರು ಮಾಡಿ‌ ತಿಳಿದುಕೊಳ್ಳಬೇಕೆಂದು ಪ್ರಯತ್ನಿಸಿದೆ, ಆದರೂ ಅವಳು ಸತ್ತು ಹೋಗಿದ್ದಾಳೆಂದು ಅವಳಿಗೆ ಪರಿಚಯ ಇದ್ದವರೆಲ್ಲರೂ ಹೇಳಿದರು. ಹೀಗಿರುವಾಗ ಒಂದು ದಿನ ನನಗೆ ಬಂದ ಕಾಲ್ ಅವಳ ಅಣ್ಣನದ್ದಾಗಿತ್ತು.. “ಬದುಕಿ ಬರುತ್ತಾಳೆ ಎಂದು ಕೊಂಡಿದ್ದ ಸಂಗೀತಾ, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದಳು.‌‌ ನೀವು ನಂಬದಿದ್ದರೂ ಇದೇ ಸತ್ಯ ಎಂದು ಹೇಳಿ‌ ಮಾತು ಮುಗಿಸಿದರು”. ಆ ನಂಬರ್ ಗೆ ಮತ್ತೆ ಎಷ್ಟೇ ಕಾಲ್ ಮಾಡಿದರು ಹೋಗಲಿಲ್ಲ.‌ ದಿನ ಕಳೆದಂತೆ ನಾನು ಸಂಗೀತಾಳಿಗೆ ಕೊಟ್ಟಿದ್ದ‌ ಮಾತನ್ನು ನೆರವೇರಿಸುವ ಸಲುವಾಗಿ, ನಾನು ಅವಳ ಉಂಗುರ ಮತ್ತು ಪುಸ್ತಕದಿಂದ ನಿಮಗೆ ಹತ್ತಿರವಾಗಿ ಅವಳ ಮಾತನ್ನು ಉಳಿಸಿಕೊಂಡಿದ್ದೆ….. ಆದರೆ ಇಂದು ಅವಳಿಗೆ ಕೊಟ್ಟ ಮಾತನ್ನು‌ ಮೀರಿ, ನಿನ್ನ ಬಳಿ‌ ಎಲ್ಲವನ್ನೂ ಹೇಳಿಕೊಂಡೆ. ಈಗಲೂ ನನಗೆ ಸಂಗೀತಾಳ ಸಾವಿನ ವಿಚಾರದಲ್ಲಿ ಗೊಂದಲವಿದೆ. ಅವಳ ಅಣ್ಣನ‌ ಮಾತು, ಹಾಗೂ ಸಾವಿನ ಕುರಿತು ಹೆಚ್ಚು ಏನೂ ಎಲ್ಲಿಯೂ ವರದಿ ಆಗಿಲ್ಲ. ಅವಳಿದ್ದ ಮನೆಯ ವಿಳಾಸ ಪಡೆದು, ಒಂದು ದಿನ ನಾನು ನನ್ನ ಅಪ್ಪನ ಜೊತೆ ಅವರ ಮನೆಗೆ ಭೇಟಿ ಕೊಟ್ಟೆವು. ಆದರೆ ಅವರ ಅಣ್ಣ ಮತ್ತು‌‌ ಅವಳ ಅಮ್ಮ ಹಾಗೂ ತಮ್ಮ‌, ಎಲ್ಲಾ ಆಸ್ತಿಯನ್ನು ಮಾರಿ‌ ಊರು ಬಿಟ್ಟಿದ್ದರು……. ಎಂದು ಬೇಸರದಿಂದ ಸ್ನೇಹಾ ಸಂಜಯ್ ನಿಗೆ ತಿಳಿಸಿದಳು.

ಸಂಜಯ್ ಇವೆಲ್ಲವನ್ನೂ ಕೇಳಿ, ಯಾವ ಮಾತನ್ನು ಆಡದೇ ನೋವಿನಿಂದ ತತ್ತರಿಸಿ ಹೋಗಿದ್ದನು. ಮಾತನ್ನು ಮುಂದುವರೆಸಿದ ಸ್ನೇಹಾ…. ಸಂಗೀತಾಳ ಸಾವು ನಿಜಕ್ಕೂ ಈಗಲೂ ನನಗೆ ನಂಬಲಾಗುತ್ತಿಲ್ಲ. ಅದನ್ನು ಹುಡುಕಿ ಹೋಗುವಷ್ಟು ಸಮಯ ನನ್ನಲ್ಲಿದ್ದರೂ, ಅವಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾನು ಅವಳನ್ನು ಹುಡುಕುವುದನ್ನು ನಿಲ್ಲಿಸಿ ನಿನಗೆ ಅವಳ ಆಸೆಯಂತೆ ಪರಿಚಯವಾದೆ. ನೀನು ಹೀಗೆ ನನ್ನನ್ನು ಹುಡುಕಿ ಇಲ್ಲಿಗೆ ಬಂದ ಹಾಗೆ ಮತ್ತೆ ಅವಳಿಗಾಗಿ ಇಲ್ಲದ ಅವಳನ್ನು ಹುಡುಕಿ ಹೋಗುವಂತಾಗದಿರಲಿ ಎಂದು, ನಡುರಸ್ತೆಯಲ್ಲೇ ನನ್ನೆದುರೇ ಕೊನೆಯುಸಿರೆಳೆದಳು ಎಂದು ಹೇಳುವ ‌ಮೂಲಕ, ಗೊಂದಲದ ಅವಳ ಸಾವಿನ ವಿಚಾರವನ್ನು ನಿನ್ನಿಂದ ಮುಚ್ಚಿಡಲು ಪ್ರಯತ್ನಿಸಿದೆ ಎಂದಳು.

ಸ್ನೇಹಾಳ ಈ ಎಲ್ಲಾ ಮಾತುಗಳನ್ನು ಕೇಳುತ್ತಲೇ, ಸಂಜಯ್‌ ‌ನಿಗೆ ಮತ್ತೆ ತಾನು ಸಂಗೀತಾಳ ಅಣ್ಣನನ್ನು ಹುಡುಕಿ, ನಿಜಕ್ಕೂ ಸಂಗೀತಾ ಸತ್ತಿದ್ದಾಳ ಅಥವಾ ಅಲ್ಲಿ ನಡೆದ್ದಾದರು ಏನು ಹಾಗೂ ಅವಳನ್ನು ಯಾವ ಕಾರಣಕ್ಕೆ ಅಂದು ಕಾರಿನಲ್ಲಿ ಏನೂ ಹೇಳದೇ ಕರೆದೊಯ್ದರು ಎಂಬುದನ್ನು ಹೇಗಾದರೂ ತಿಳಿದುಕೊಳ್ಳಬೇಕೆಂಬ ಹಠ ಮೂಡಿತ್ತು. ಇದನ್ನೂ ಸ್ನೇಹಾಳ ಬಳಿ ಸಂಜಯ್ ಹೇಳುತ್ತಿರುವಾಗಲೇ, ಸ್ನೇಹಾಳ ಮೊಬೈಲ್ ಗೆ ಒಂದು ಕಾಲ್ ಬಂದಿತು.

ಹಲೋ… ಎಂದ ಸ್ನೇಹಾಳಿಗೆ ಆಘಾತಯಿತು. ಆ ಕಡೆಯಿಂದ ಸಂಗೀತಾಳ ಧ್ವನಿ !! “ಸ್ನೇಹಾ ಹೇಗಿದ್ದೀಯಾ ನಾನು ಸಂಗೀತಾ…..” ಎಂದಳು.

(ಮುಂದುವರೆಯುತ್ತದೆ…)

—- ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

3 thoughts on “ಹೀಗೊಂದು ಅನುರಾಗ !!(ಭಾಗ – 12)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: