ಹೀಗೊಂದು ಅನುರಾಗ !!(ಭಾಗ – 11)

ಹೀಗೊಂದು ಅನುರಾಗ !!”
(Part – 11)

ವಾಸ್ತವದ ಭಯಾನಕ ಅದೆಷ್ಟಿತ್ತು ಎಂದರೆ,‌ ಎಲ್ಲವೂ ಕಾಣದ ದೇವರ ಕೈಚಳಕದಲ್ಲಿ ಮೊದಲೇ ಚಿತ್ರಿಸಲ್ಪಟ್ಟಂತೆ. ಎದುರಿಗಿದ್ದರೂ ಅವಳನ್ನು ಮಾತನಾಡಿಸಲು ಆಗದಷ್ಟು ಅವನು ದಣಿದಿದ್ದರೆ, ಅವಳಿಗೆ ಅವನ ಸ್ಥಿತಿಯನ್ನು ಅರಗಿಸಿಕೊಳ್ಳಲಾಗದೆ ಮಾತುಗಳೇ ಇಲ್ಲಿ ಉಸಿರು ನಿಲ್ಲಿಸಿದ್ದವು.

ನೀರು ಕುಡಿಸಿ, ಸಂಜಯ್ ನನ್ನು ಹಿಡಿದು ಜೀಪಿನಲ್ಲಿ ಕೂರಿಸಿದ ಸ್ನೇಹಾ, ತಾನು‌ ಇಲ್ಲಿಗೆ ಬಂದ ದಾರಿಯನ್ನು ವಿವರಿಸಿದಳು….. ಮುಂಜಾನೆ ಮನೆಯಲ್ಲಿ ನನ್ನ ಅಜ್ಜ ಮತ್ತು ಆಳುಗಳು, ಅಪ್ಪನೆದುರು ರಾತ್ರಿ ನಗರದಲ್ಲಿ ನಡೆದ ಘಟನೆಯನ್ನು ವಿವರಿಸಿ ಅಲ್ಲೊಬ್ಬ ಸಂಜಯ್ ಎಂಬ ಹುಡುಗ ನಮ್ಮನೆಯ ಹುಡುಗಿಯ ಹೆಸರು ಹೇಳಿ ವಿಚಾರಿಸುತ್ತಿದ್ದ….!! ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡ ನಾನು, ಗಾಬರಿಯಾಗಿ ಅಲ್ಲಿಂದ ಹೊರಟೆ ಎಂದಳು. ಇಲ್ಲಿಗೆ ಹೊರಗಿನವರು ಬಂದರೆ ಜೀವಂತವಾಗಿ ಆಚೆ ಹೋಗುವುದಿಲ್ಲ, ಅಷ್ಟೊಂದು ರಕ್ಕಸವಾದ ಸೇಡಿನ‌ ಹಿನ್ನೆಲೆ ಕುಟುಂಬದ ಒಳಗಿನವರಲ್ಲೇ ಇದೆ. ಅದಕ್ಕಾಗಿ ನಿನ್ನನ್ನು ಈ ಊರಿನಿಂದ ಹೇಗಾದರು ಆಚೆ ಕಳಿಸಬೇಕೆಂದು ಜೀಪ್ ಹಿಡಿದು ಯಾರಿಗೂ ಹೇಳದೆ ಹೊರಟು ಬಂದೆ… ಎಂದು ಹೇಳಿದಳು.‌

ಇದನ್ನು‌ ಕೇಳಿದವನಿಗೆ ಈ ಊರಿನಿಂದ ತಪ್ಪಿಸಿಕೊಳ್ಳಬೇಕೆಂಬ ಯಾವ ಆಲೋಚನೆಯೂ ಬರಲಿಲ್ಲ.‌ ಬದಲಾಗಿ, ಕಾಲೇಜ್ ನಲ್ಲಿ ಆಗಿದ್ದ ಉಂಗುರ, ಡೈರಿ, ವಿಚಿತ್ರ ಅನುಭವ, ಕಳ್ಳನ‌ ಸಾವಿನ ವಿಚಾರದ ಜೊತೆಗೆ ನಿಮ್ಮನೆಯವರು ನಿನ್ನ ಹೆಸರು ಹೇಳಿದ್ದಕ್ಕೆ ಯಮನಂತೆ ನನ್ನ ಹಿಂದೆ ಬಿದ್ದ ವಿಷಯಗಳೆಲ್ಲವೂ ಗೊತ್ತಾಗದೇ ನಾನು ಇಲ್ಲಿಂದ ಹೋಗುವುದಿಲ್ಲವೆಂದು ಹೇಳಿದ ಅವನು, ಎಲ್ಲಾ ವಿಷಯಗಳಿಗೂ ನಿನ್ನ ಬಳಿಯೇ ಉತ್ತರವಿದೆ, ನೀನು ಹೇಳದೆ ನಾನು ಇಲ್ಲಿಯವರೆಗೂ ಬರುವ ಹಾಗೆ ಆಗಿದೆ ಎಂದನು.‌ ಇವೆಲ್ಲವನ್ನೂ ತಿಳಿಯದೆ ನಾನು‌‌ ಇಲ್ಲಿಂದ ಹೊರಡುವ ಮಾತಿಲ್ಲ ಎಂದು ಪಟ್ಟು ಹಿಡಿದು, ತನ್ನನ್ನು‌ ಮನೆಗೆ ಕರೆದೊಯ್ಯುವಂತೆ ಹೇಳಿದನು. ಸ್ನೇಹಾ ಎಷ್ಟೇ ಬಿಡಿಸಿ ಹೇಳಲು‌ ಯತ್ನಿಸಿದರೂ ಅದನು ಸಂಜಯ್ ಒಪ್ಪದ ಕಾರಣ, ಬೇರೆ ದಾರಿಯಿಲ್ಲದೆ ಜೀಪನ್ನು‌‌ ಮನೆಯ ಕಡೆಗೆ ತಿರುಗಿಸಿದಳು.

ಅವಳ‌ ಮನೆಯವರಿಗೆ, ಅವಳ ಅಪ್ಪನಿಗೆ, ಅಜ್ಜನಿಗೆ ಮತ್ತು‌ ಅಲ್ಲಿನ ಎಲ್ಲಾ ಆಳುಗಳಿಗೆ ಸ್ನೇಹಾ ಎಂದರೆ ತುಂಬಾ ಪ್ರೀತಿ‌ ಕಾಳಜಿ. ಅವಳು ತೆಗೆದುಕೊಂಡ‌ ಯಾವೊಂದು ನಿರ್ಧಾರವೂ ತಪ್ಪಾಗಿದ್ದೇ ಇಲ್ಲ. ಹಣ ಆಸ್ತಿ ಅಂತಸ್ತು ಸಾಕಷ್ಟಿದ್ದರೂ, ವ್ಯವಹಾರದ ವಿಚಾರದಲ್ಲಿ ಗೊಂದಲ ಉಂಟಾದಾಗ ಅವಳ ಅಪ್ಪನೂ ಕೂಡ ಸ್ನೇಹಾಳ ಬಳಿಯೇ ಸಲಹೆ ತೆಗೆದುಕೊಳ್ಳುತಿದ್ದರು. ಇದನ್ನೆಲ್ಲವನ್ನೂ ಮನೆಗೆ ವಾಪಾಸ್ಸಾಗುವ ದಾರಿಯಲ್ಲಿ ಸಂಜಯ್ ಗೆ ವಿವರಿಸುತ್ತಿದ್ದಳು. ಇನ್ನೇನು ಮನೆ‌ ಹತ್ತಿರ ಬರುತ್ತಿದ್ದೇವೆ ಎಂದು ಸ್ನೇಹಾ ಹೇಳುವಷ್ಟರಲ್ಲಿ ಎದುರಿಗೆ‌ ದೊಡ್ದದಾದ ಹಳೇಯ ಗೇಟ್, ಅದನ್ನು ತೆಗೆಯಲಿಬ್ಬರು ಜನರು, ನಂತರ ಅವನೆದುರು ಸ್ವಲ್ಪ ದೂರದಲ್ಲಿ ಬಹುದೊಡ್ಡದಾದ ಪ್ರಾಚೀನ ಕಾಲದ ಮನೆ. ಜೀಪ್ ಇಳಿದು ಸಂಜಯ್ ನನ್ನು ಮನೆಯ ಕಡೆಗೆ ಕರೆದುಕೊಂಡು ಹೋಗುತ್ತಿದ್ದನ್ನು ಹಿಂದಿನ ದಿನ‌ ದಾಳಿ ಮಾಡಿದ್ದ ನಾಲ್ಕು ಜನ‌‌ ನೋಡಿ, ಅವಳೆದುರು ತಲೆ ತಗ್ಗಿಸಿ ಸುಮ್ಮನೆ ನಿಂತರು.‌‌ ತನ್ನ ಬೈಕ್ ಮತ್ತು ಬ್ಯಾಗ್ ಅಲ್ಲೇ ಮನೆ ಎದುರು ಇರುವುದನ್ನು ಗಮನಿಸಿದ.‌ ಒಳಗಿನಿಂದ ಬಂದ ಅಜ್ಜ ಮತ್ತು‌ ಅಪ್ಪನಿಗೆ, ಇವನು ನನ್ನ‌ದೇ ಕಾಲೇಜಿನ ಹುಡುಗ.‌‌ ಕಾರಣಾಂತರಗಳಿಂದ ನಾನು ಇವನಿಗೆ ಹೇಳದೇ ಅಲ್ಲಿಂದ ಹೊರಟು ಬಂದಿದ್ದೆ. ನನ್ನನ್ನು ಹುಡುಕಿ ಬಂದು ನಿನ್ನೆ ರಾತ್ರಿ ಅಜ್ಜ ಹಾಗು ಆಳುಗಳ ಕೈಗೆ ಸಿಲುಕಿದ್ದಾನೆ, ನಾನು ಇಂದು ಮುಂಜಾನೆ ಹೋಗುವುದು ಸ್ವಲ್ಪ ತಡವಾಗಿದ್ದರೂ ಇವನು ಇಲ್ಲಿಗೆ ಬರುತ್ತಿರಲಿಲ್ಲ ಎಂದಳು ದುಃಖದಿಂದ. ಎಲ್ಲವನ್ನೂ ಕೇಳಿಸಿಕೊಂಡ ಅವಳ‌ ಅಪ್ಪ, ಇವರೆಲ್ಲರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿ ಅವನನ್ನು ಒಳ ಕರೆದು ಉಪಚಾರಿಸಿದರು.

ತನ್ನ ಸ್ನೇಹಿತ ಎಂದು ಪರಿಚಯಿಸಿದ ಸ್ನೇಹಾಳ ಮಾತನ್ನು ಅಲ್ಲಿನ ಯಾರೊಬ್ಬರೂ ವಿರೋಧಿಸಲಿಲ್ಲ. ಅಷ್ಟೊಂದು ‌ನಂಬಿಕೆ ಮನೆಮಗಳ ಮೇಲೆ.‌ ಅವನೆದುರು ಬಂದ ಅವಳ ಅಜ್ಜ, ಅವನನ್ನು ಅಟ್ಟಾಡಿಸಿದ ಕಾರಣವನ್ನು ತಿಳಿಸಿದರು. ನಮ್ಮದು ಹಳೇಯ ಮನೆತನ. ಕತ್ತಲೆಕಲ್ಲುಗುಡ್ಡ ಎಂಬ ಹೆಸರು ಇಲ್ಲಿನ‌ ಸುತ್ತಮುತ್ತಲಿನ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ನಮ್ಮೂರಿನ ನಿಜವಾದ ಹೆಸರು ಹಸಿರುಬೆಟ್ಟ. ಎಲ್ಲಾ ದಾಖಲೆಯಲ್ಲಿಯೂ ಹಸಿರು ಬೆಟ್ಟ ಅಂತಲೇ ಇದೆ. ನಮಗಿಲ್ಲಿ ಅನಾದಿ ಕಾಲದಿಂದಲೂ ಹಗೆ ಸಾಧಿಸಿಕೊಂಡು ಬಂದವರೇ ಹೆಚ್ಚು. ಒಬ್ಬರನೊಬ್ಬರು ಸಾಯಿಸುವಷ್ಟು ದ್ವೇಷದ ನಡುವೆ ನಾವು ಬದುಕುತ್ತಿದ್ದೇವೆ. ಮನೆಮಗಳು ಸ್ನೇಹಾ ಅಷ್ಟು ದೂರದ ಊರಿಗೆ ಓದಲು ಹೋಗುತ್ತೇನೆ ಎಂದಾಗ, ನಮ್ಮೂರಿನ ಹಸಿರುಬೆಟ್ಟ ಅನ್ನುವ ಹೆಸರು ಎಲ್ಲರಿಗೂ ತಿಳಿದಿದ್ದರಿಂದ ಅವಳಿಗೆ ತೊಂದರೆ ಆಗಬಾರದು ಮತ್ತು ಕಾಲೇಜಿನ ಯಾರೊಬ್ಬರೂ ಈ ಊರಿಗೆ ಬರಬಾರದೆಂದು ನಾವು ನಮ್ಮೂರಿನ ತುಂಬಾ ಹಳೇಯ ಹೆಸರಾದ ಕತ್ತಲೆಕಲ್ಲುಗುಡ್ಡ  ಎಂದೇ ಅಲ್ಲಿ ನಮೂದಿಸಿದ್ದೆವು ಎಂಬುದಾಗಿ ಸಂಜಯ್ ಗೆ ವಿವರಿಸುತ್ತಾ, ನೀನು ಇಲ್ಲಿಗೆ ಬಂದಿರುವ ಕಾರಣ ಏನೆಂದು ನಾವು ಕೇಳುವುದಿಲ್ಲ. ನಮಗೆ‌ ಸ್ನೇಹಾಳ ಮೇಲೆ ತುಂಬಾನೆ ನಂಬಿಕೆ‌ ಇದೆ ಹಾಗೂ ಈ ಊರಿಗೆ ನೀನು ತಿಳಿದಿದ್ದಕ್ಕಿಂತಲೂ ಬೇರೆಯದ್ದೇ ಮುಖವಿದೆ. ಅದೆಲ್ಲವನ್ನೂ ಅವಳು ಹೇಳಿದರೆ ನಿನಗೇ ತಿಳಿಯುತ್ತದೆ ಎಂದು‌ ಹೇಳಿ‌ ಅಜ್ಜ ಹೊರಟರು. ವಿಶ್ರಾಂತಿ ತೆಗೆದುಕೊಳ್ಳಲು ‌ತಿಳಿಸಿ, ಅವಳ‌ ಅಪ್ಪನೂ ಸಹ ಅಲ್ಲಿಂದ ಹೊರಟರು.

ಸ್ನೇಹಾಳ ಕಡೆ ನೋಡಿ‌ದ ಸಂಜಯ್, ನನಗೆ ಎಲ್ಲವೂ ಆಶ್ಚರ್ಯವೆಂಬಂತೆ ಕಾಣುತ್ತಿದೆ‌. ಇಲ್ಲಿ ಏನೇನೋ ಆಗುತ್ತಿದೆ‌ ಮತ್ತು ನೀನು ಇಷ್ಟೊಂದು ಧೈರ್ಯವಂತೆ ಎಂಬುದು ನಿಜಕ್ಕೂ ನನಗೆ ಕಾಲೇಜಿನಲ್ಲಿ ತಿಳಿದಿರಲಿಲ್ಲ. ಆ ಉಂಗುರ ಮತ್ತು‌‌ ಪುಸ್ತಕ ಇಲ್ಲದಿದ್ದರೆ ಮನೆಯಲ್ಲಿ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ, ಒಂದು‌‌ ಮಾತನ್ನೂ ಹೇಳದೇ ಏಕೆ ಅಂದು ಮನೆಗೆ ಹೊರಟು ಬಂದೆ ಎಂದು ಕೇಳಿದನು‌. ಎಲ್ಲಾ ಘಟನೆಗಳಿಗೆ ಉತ್ತರ ಬೇಕೆಂದು ಮತ್ತು‌ ತನ್ನ ಉಂಗುರದ ಹುಡುಗಿಗಾಗಿ‌ ಇಷ್ಟೊಂದು ದೂರ ಬಂದ ಇವನಿಂದ ಇನ್ನೂ ಆ ಸತ್ಯವನ್ನು ಮುಚ್ಚಿಟ್ಟರೆ ಅವನಿಗೆ ಮೋಸ‌‌ ಮಾಡಿದಂತೆ ಆಗುತ್ತದೆ, ಕೊಟ್ಟ ಮಾತಿಗೆ ತಪ್ಪಿದಂತಾದರೂ ಸರಿ, ಆ ಎಲ್ಲವನ್ನೂ ಇವನಿಗೆ ತಿಳಿಸಬೇಕೆಂದು ತೀರ್ಮಾನಿಸಿದ ಅವಳು, ನೀನು ತಿಳಿದುಕೊಳ್ಳದೇ ಇರುವುದು ಬೇರೆಯೇ ಇದೆ ಹಾಗೂ ಆ ನಿಗೂಢತೆ ನಿನ್ನ ಇಷ್ಟು ದಿನದ ಆಸೆಯನ್ನು ಕ್ಷಣಮಾತ್ರದಲ್ಲಿ ನುಂಗಿ ಹಾಕುತ್ತದೆ ಎಂದಳು. ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ, ಆ ಡೈರಿ ಮತ್ತು ಪುಸ್ತಕ‌‌ ಅದೆಲ್ಲದಕ್ಕೂ ಉತ್ತರ ಮೇಲೆ ಇದೆ ನೋಡು ಎನ್ನುತ್ತಾ, “ಗೋಡೆಯ ಮೇಲೆ ತೂಗು ಹಾಕಿದ್ದ ತುಂಬಾ ಸುಂದರವಾದ ಪೋಟೋದ ಕಡೆಗೆ ಕೈ ತೋರಿಸಿ, ನನ್ನ ಬಳಿಯಿದ್ದ ನೀನು ಇಷ್ಟು ದಿನ ಕಾಯುತ್ತಿದ್ದ ಉಂಗುರ ಮತ್ತು ಡೈರಿಯ ನಿಜವಾದ ಯಜಮಾನಿ ನಾನಲ್ಲ, ಅಲ್ಲಿ‌ ಆ ಪೋಟೋ‌‌ದಲ್ಲಿ ಮುದ್ದಾಗಿ ನಗುತ್ತಾ ನಿಂತಿರುವ ಸಂಗೀತಾ ಎಂದಳು. ಸಂಜಯ್ ಕಣ್ಣುಗಳು ಕಣ್ಣೀರಿನಿಂದ ತುಂಬಿ, ಭಾವಗಳ ಬೇಲಿಯಲ್ಲಿ ಬಂಧಿಯಾದನು.‌ ಪೋಟೋದ ಬಳಿ‌ ಓಡಿ ಹೋದವನೇ, ಹಾಕಿದ್ದ ಹಾರವನ್ನು ಕಿತ್ತೆಸೆದು ಭಾವಚಿತ್ರದಲ್ಲಿದ್ದ ಅವಳ ಮೇಲೆ ತನ್ನ ನಡುಗುತ್ತಿದ್ದ ಕೈಯಿಂದ ಸ್ಪರ್ಶಿಸುತ್ತಾ…. ಸಂಗೀತಾ !! ಎಂದು ಕೂಗಿಕೊಂಡನು.‌

ಸ್ನೇಹಾಳ ಹತ್ತಿರ ಬಂದವನೇ, ನೀನು ಸುಳ್ಳು ಹೇಳುತ್ತಿರುವೆ. ನಾನು ಲೈಬ್ರರಿಯಲ್ಲಿ‌ ನೋಡಿದ ಆ ಉಂಗುರ ನಿನ್ನದೇ, ಮತ್ತು ನಾನು ಇಷ್ಟಪಟ್ಟ ಉಂಗುರದ ಒಡತಿ ನೀನೆ. ಪೋಟೋದಲ್ಲಿ ಬೇರೆ ಯಾರದ್ದೋ ಚಿತ್ರ ತೋರಿಸಿ, ನಾನು‌ ಇಲ್ಲಿಂದ ಹೋಗಲಿ ಎಂದು ನೀನು ಮಾಡುತ್ತಿರುವ ನಾಟಕ ಇದು‌ ಎನ್ನುತ್ತಾ… ತನ್ನ ಕಣ್ಣೆದುರೇ ಇದ್ದ ವಾಸ್ತವವನ್ನು ಒಪ್ಪಿಕೊಳ್ಳಲು ಸಂಜಯ್ ನಿಂದ ಸಾಧ್ಯವಾಗುತ್ತಿರಲಿಲ್ಲ. ಸ್ನೇಹಾ ಒಂದು ಪೆಟ್ಟಿಗೆಯನ್ನು ತಂದು ಅವನಿಗೆ ಕೊಟ್ಟಳು. ಅದನ್ನು ತೆಗೆದು ನೋಡಿದ ಸಂಜಯ್ ಆ ನೋವಿನಲ್ಲೂ ಒಮ್ಮೆ ಸಂತೋಷಪಟ್ಟನು. ಅದರಲ್ಲಿ ಅವನು ನೋಡಿದ್ದ ಉಂಗುರ ಮತ್ತು ಡೈರಿ‌ ಇತ್ತು.‌

ಸಂಜಯ್ ನೀನು ಇದನ್ನು ನಂಬಲೇ ಬೇಕು. ನಾನು ಸಂಗೀತಾಳ ಆತ್ಮ‌ ಸ್ನೇಹಿತೆ.‌ ನಾವಿಬ್ಬರೂ ಸದಾ ಒಟ್ಟಿಗೇ ಇರುತ್ತಿದ್ದೆವು. ನೀನು ಹುಡುಕುತ್ತಿದ್ದ ಸಂಗೀತಾ‌ ಇನ್ನೆಂದೂ ಬರುವುದಿಲ್ಲ. ನೀ ಕಂಡ ಉಂಗುರದ ಹುಡುಗಿ ನಾನೆಂದು ನಿನಗೆ ಪರಿಚಯವಾಗಿದ್ದು, ಉಂಗುರ – ಡೈರಿ ಕಳೆದುಹೋಗಿದ್ದು ಮತ್ತು ನೀನು ಕಾಡಿನಲ್ಲಿ ಕಂಡ ವಿಚಿತ್ರ ಅನುಭವ ಹಾಗೂ ಆ‌‌ ಕಳ್ಳನ‌ ಸಾವು…‌ ಇವೆಲ್ಲವೂ ಸಂಗೀತಾಳ ಕೊನೆಯ ಆಸೆಯಂತೆ‌ ನಾನು‌ ಮತ್ತು ನಿನ್ನ ಸ್ನೇಹಿತರು ಆಡಿದ ನಾಟಕ ಎಂದಳು. ಅವಳು ಸಾಯುವಾಗ ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದಳು. ನಿನಗೆ ಅವಳಿಲ್ಲದ ವಿಷಯ ಗೊತ್ತಾಗಬಾರದೆಂದು, ನನಗೆ ಅವಳಂತೆ ನಟಿಸುವಂತೆ ಮಾತು ಪಡೆದುಕೊಂಡು, ಅವಳ ಉಂಗುರ ಮತ್ತು ಡೈರಿಯನ್ನು ನನ್ನ ಕೈಯಲ್ಲಿಟ್ಟು ರಸ್ತೆಯಲ್ಲೇ ಕೊನೆಯುಸಿರೆಳೆದಳು ಎಂದಾಗ….. ಕೇಳಿಸಿಕೊಳ್ಳುತ್ತಿದ್ದ ಸಂಜಯ್, ಉಂಗುರ ಮತ್ತು ಡೈರಿಯ ಸಮೇತ ಅವಳ ಭಾವಚಿತ್ರದ ಕಡೆಗೆ ನಡೆದನು.

(ಮುಂದುವರೆಯುತ್ತದೆ…)

—- ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

8 thoughts on “ಹೀಗೊಂದು ಅನುರಾಗ !!(ಭಾಗ – 11)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: