
(Part – 10)
ಜೀವ ಉಳಿಸಿಕೊಳ್ಳಲು ಸಂಜಯ್ ರಸ್ತೆಯಲ್ಲಿ ಓಡುತ್ತಿದ್ದರೆ, ಅವನ ಹಿಂದೆ ಆ ನಾಲ್ವರು ಸಾಕ್ಷಾತ್ ರಾಕ್ಷಸರಂತೆ ಅಟ್ಟಾಡಿಸಿಕೊಂಡು ಕಿರುಚುತ್ತಾ ಹಿಂಬಾಲಿಸುತ್ತಿದ್ದರು. ಕಾಣದ ಕತ್ತಲೆಯಲ್ಲಿ ಅವನ ಪರವಾಗಿ ಯಾರೂ ಇರಲಿಲ್ಲ. ಹಿಂದೆ ನೋಡುತ್ತಾ ಓಡುವಾಗ ಎದುರಿಗೆ ಬಂದ ವಾಹನವನ್ನು ಗಮನಿಸದೆ ಕಾರಿಗೆ ಡಿಕ್ಕಿಯಾದ ಸಂಜಯ್, ಅಲ್ಲೇ ಕುಸಿದನು. ಕಣ್ಣು ಮಂಜಾಗುವ ಮೊದಲು ಅವನಿಗೆ ಕಂಡಿದ್ದು ‘ಆ ನಾಲ್ಕು ಜನರು ಅವನನ್ನು ಸುತ್ತುವರೆದಿದ್ದು’.
ಆಗಿದ್ದೆಲ್ಲವೂ ನಿದ್ರೆಯಲ್ಲಿ ಕನಸಿನಂತೆ ಮತ್ತೆ ಮತ್ತೆ ಅದೇ ಕಣ್ಮುಂದೆ ಬಂದು ಹಿಂಸಿಸುವಾಗ, ಕಣ್ತೆರೆದು ನೋಡಿದ ಸಂಜಯ್ ಗೆ ಕಂಡಿದ್ದು ‘ಒಂದು ಹಳೇಯ ಗುಡಿಸಲಿನ ಮಾಳಿಗೆ’. ರಕ್ತ ಸೋರುತ್ತಿದ್ದ ತಲೆಗೆ ಕಟ್ಟಿದ್ದ ಬಟ್ಟೆಯನ್ನು ಮುಟ್ಟಿಕೊಂಡು ನಿಧಾನಕ್ಕೆ ಮೇಲೆದ್ದು ಆ ಪುಟ್ಟ ಗುಡಿಸಲಿನಿಂದ ಹೊರಬಂದನು. ಅವನ ಬಳಿ ಬ್ಯಾಗ್ ಬೈಕ್ ಮೊಬೈಲ್ ಇದ್ಯಾವುದೂ ಇರಲಿಲ್ಲ. ಮುಂಜಾವಿನ ಬೆಳಕು ನಿಧಾನವಾಗಿ ಹಬ್ಬುತ್ತಿತ್ತು. ಅಂಗಳದಲ್ಲಿ ವಯಸ್ಸಾದ ಮುದುಕಿ ಕಟ್ಟಿಗೆ ದೂಡುತ್ತಾ ಬೆಂಕಿ ಹಚ್ಚುತ್ತಿದ್ದಳು. ಇವನನ್ನು ಕಂಡೊಡನೇ ಓಡಿ ಬಂದು ಹೊರಗಿನ ಅಂಗಳದಲ್ಲಿ ಕೂರಿಸಿ ತಲೆಗೆ ಕಟ್ಟಿದ್ದ ಬಟ್ಟೆ ತೆಗೆದು ಸೊಪ್ಪಿನಿಂದ ಮಾಡಿದ ಔಷದಿ ಹಚ್ಚಿ ಬೇರೆ ಬಟ್ಟೆ ಕಟ್ಟಿ, ಏನೂ ಮಾತಾಡದೇ ಮತ್ತೆ ಕಟ್ಟಿಗೆ ದೂಡುತ್ತಾ ಒಲೆಯ ಮುಂದೆ ಕುಳಿತಳು.
ರಾತ್ರಿ ಆಗಿದ್ದೆಲ್ಲವೂ ನೆನಪಿದ್ದರೂ, ತಾನು ಇಲ್ಲಿಗೆ ಹೇಗೆ ಬಂದೆ ಹಾಗು ಯಾರು ಇಲ್ಲಿಗೆ ಬಿಟ್ಟರು ಎನ್ನುವುದು ಅವನಿಗೆ ತಿಳಿಯಲಿಲ್ಲ. ಅಜ್ಜಿ ಅಜ್ಜಿ ಎಂದು ಎಷ್ಟು ಸಲ ಕರೆದರೂ ಆ ಮುದುಕಿಯದ್ದೂ ಶೂನ್ಯ ಪ್ರತಿಕ್ರಿಯೆ. ಅಂಗಳದಾಚೆ ಹೋಗಿ ಸುತ್ತಲೂ ಕಣ್ಣು ಹಾಯಿಸಿದವನಿಗೆ ಅಚ್ಚರಿ ಮತ್ತು ಗಾಬರಿ.. ಎರಡೂ ಒಮ್ಮಲೇ ಆಗಲು ಕಾರಣ, ಸುಮಾರು ದೂರದವರೆಗೂ ಹಚ್ಚಹಸುರಾದ ಗದ್ದೆ, ದೂರದಲ್ಲಿ ಕಂಡ ತೋಟ.. ಹೀಗೆ ಈ ವಿಸ್ಮಯವನ್ನು ನೋಡಿ ಅವನಿಗೆ ಖಾತ್ರಿ ಅಗಿದ್ದು ‘ನಿನ್ನೆ ರಾತ್ರಿ ಆ ದಾಂಡಿಗರೇ ನನ್ನನ್ನು ಇಲ್ಲಿ ಬಿಟ್ಟಿದ್ದಾರೆಂದು’. ನಾನೀಗ ಕತ್ತಲೆಕಲ್ಲುಗುಡ್ಡದ ಒಳಗೇ ಇದ್ದೇನೆಂದು ಸಂತೋಷ ಪಟ್ಟ ಸಂಜಯ್, ಮತ್ತೆ ಯೋಚಿಸದೇ ಆ ತೋಟ ಇದ್ದ ಕಡೆಗೆ ಗದ್ದೆಯ ಹಾಳಿಯಲ್ಲಿ ರೆಕ್ಕೆ ಬಡಿದು ಹಾರುವ ಹಕ್ಕಿಯಂತೆ, ಕಾಲಿಗೆ ಆಗಿದ್ದ ಗಾಯವನ್ನೂ ಲೆಕ್ಕಿಸದೇ ಓಡುತ್ತಾ ಕೊನೆಗೂ ಗದ್ದೆ ಆಚೆಗಿನ ತೋಟವನ್ನು ತಲುಪಿದನು.
ತನಗಾದ ಆಯಾಸವನ್ನೂ ಲೆಕ್ಕಿಸದೇ ಅಡಿಕೆ ತೋಟದ ಒಳಗೆ, ಎದ್ದು ಬಿದ್ದರೂ ನಿಲ್ಲದೇ ಓಡಿದನು. ಸುಮಾರು ಒಂದು ಗಂಟೆಯ ವರೆಗೂ ಓಡಿ, ತೋಟದ ಅಂಚಿನಲ್ಲಿದ್ದ ಕಲ್ಲು ಮಣ್ಣಿನ ಹಾದಿಗೆ ಬಂದು ಸೇರಿದ. ಎಷ್ಟೊಂದು ದಣಿದಿದ್ದ ಎಂದರೆ ಹೃದಯದ ಬಡಿತ ಹೆಚ್ಚಾಗಿ ನೀರು ಬೇಕೆನ್ನುತ್ತಾ ಆ ಬಂಡೆಗಳ ರಸ್ತೆಯಲ್ಲೇ ಬಿದ್ದು ನೀರು ನೀರೆಂದು ಒಣಗಿದ ಗಂಟಲಿನಲ್ಲಿ ಪಿಸುಗುಡುತ್ತಲೇ ಹಾದಿ ನೋಡುತ್ತಾ, ತನ್ನನ್ನು ಕಾಪಾಡಲು ಯಾರಾದರು ಬರುತ್ತಾರೆಂದು ನೋಡುವಾಗ… ಹಿಂದಿನ ದಿನ ನೋಡಿದ್ದ ಅದೇ ಹಳೇಯ ಜೀಪಿನ ಸದ್ದು ಅವನ ಕಿವಿಗೆ ಅಪ್ಪಳಿಸಿತು. ಅವರಿಗೆ ಕಾಣದ ಹಾಗೆ ಎದ್ದು ಮರೆಯಾಗಲೂ ಆಗದೆ, ಮತ್ತೆ ಆ ದಾಂಡಿಗರ ಕೈಗೆ ಸಿಗುತ್ತಿದ್ದೇನೆ ಅಂದುಕೊಂಡು, ದೂರದಲ್ಲಿ ಬರುತ್ತಿದ್ದ ಜೀಪ್ ಅನ್ನು ನೋಡಿದನು. ಬದುಕುಳಿಯುವ ಸಾಧ್ಯತೆಯಂತೂ ಇಲ್ಲ ಎಂಬುದು ತಿಳಿದಿದ್ದರೂ.. ‘ಇವರ ಕೈಗೆ ನಾ ಸಿಕ್ಕರೂ ಸರಿ, ಆದರೆ ಇಲ್ಲಿನ ನಿಜ ಬಣ್ಣ ಏನೆಂದು ಮತ್ತು ಸ್ನೇಹಾಳ ಪಾತ್ರ ಇಲ್ಲಿ ಏನೆಂಬುದನ್ನು ತಿಳಿಯಬೇಕೆಂದು ನಿರ್ಧರಿಸಿದನು’.
ಜೀಪ್ ದೊಡ್ಡ ಸದ್ದು ಮಾಡುತ್ತಾ ಅವನ ಹತ್ತಿರ ಬಂದು ನಿಂತಿತು. ಸಂಜಯ್… ಎಂದು ಕೂಗುತ್ತಲೇ ಜೀಪಿನಿಂದ ಇಳಿದ ಸ್ನೇಹಾ, ಅವನ ಬಳಿ ಓಡಿ ಹೋದಳು. ಆ ಸ್ಥಿತಿಯಲ್ಲಿ ಅವನನ್ನು ನೋಡಿ, ಆಘಾತದೊಂದಿಗೆ ಅವನ ಬಳಿಯೇ ಕುಸಿದು ಕೂತು ಮಾತು ಹೊರಡದೇ ಮೌನಕ್ಕೆ ಜಾರಿದಳು. “ಅವನ ಒದ್ದಾಟವನ್ನು ನೆನೆದ ಅವಳ ಕಣ್ಣುಗಳು ಕೆಂಪು ಆಕಾಶದಂತಾಗಿ, ಕಣ್ಣೀರು ದಟ್ಟ ಮೋಡದಂತಾಗಿ ಮುಚ್ಚಿಹೋದವು.” ರಾಕ್ಷಸರಂತ ಜನರನ್ನು ಎದುರು ನೋಡುತ್ತಿದ್ದ ಸಂಜಯ್ ಗೆ, ತಾನು ಹುಡುಕಿ ಬಂದ ಅವಳು ತನ್ನೆದುರೇ ಬಂದಾಗ “ಅವನಿಗೂ ಮಾತು ಬರಲಿಲ್ಲ…”
(ಮುಂದುವರೆಯುತ್ತದೆ…)
—- ದೀಕ್ಷಿತ್ ದಾಸ್