ಆಗಲಿ ಬದಲಾವಣೆ.. ಪುಸ್ತಕದಿಂದ

ಆಗಲಿ ಬದಲಾವಣೆ..‌ ಪುಸ್ತಕದಿಂದ !!

ಈ ಕೊರೋನಾದಿಂದ ಬದುಕು ಎಷ್ಟು ಬದಲಾಯಿತು ಎಂದರೆ, ಅದನ್ನು ಸರಿಪಡಿಸಿಕೊಳ್ಳಲು ಮತ್ತೆ ಆಗದಷ್ಟು. ಆದರೂ ಕಲಿತ ಪಾಠಗಳು ಮಾತ್ರ ಬೆಟ್ಟ ದಷ್ಟು. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನು ‌ಈ‌ ಕೊರೋನಾ ಧನಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿಯಲ್ಲೂ ಕಾಡಿದೆ. ನಾನು ಈ ಕೊರೋನಾ ಎಂಬ ಕಗ್ಗತ್ತಲೆಗೆ ಸೇರದೇ ಮಹಾನಗರ ಬೆಂಗಳೂರಿನಿಂದ ಹಳ್ಳಿಯಲ್ಲಿರುವ ಸೂರಿಗೆ ಹೋಗಿ ಸುಮಾರು ತಿಂಗಳುಗಳೇ ಆಗಿತ್ತು. ಕೊರೋನಾ ತಣ್ಣಗಾದ ಮೇಲೆ, ಬೆಂಗಳೂರಿಗೆ ಬರದೇ ಸ್ವಲ್ಪ ಮನಃಶಾಂತಿ ಗಾಗಿ ಮೈಸೂರಿನಲ್ಲಿ ಒಂದೆರಡು ದಿನವನ್ನು ನೆಮ್ಮದಿಯಿಂದ ದೂಡಲು‌ ಹೊರಟೆ‌‌. ಪುಸ್ತಕ ಪ್ರಪಂಚದ ಬದುಕು ಅದೆಷ್ಟು ಸುಂದರ ಅದೆಷ್ಟು ಸ್ವಚ್ಛ ಅಂದರೆ ವರ್ಣಿಸಲು ಪದಗಳೇ ಸಾಲದು ಆದರೆ, ಅದನ್ನು ಅರಿತವರಿಗೆ ಆ ವರ್ಣನೆಯ ಸ್ವಾದಿಷ್ಟತೆ ಬಹಳ ಚೆನ್ನಾಗಿ ತಿಳಿದಿರುತ್ತದೆ.

ನನಗೆ ಪರಿಚಯ ಇರುವ ಒಬ್ಬ ಲೇಖಕರ ಜೊತೆಗೆ ಮೈಸೂರಿನ ಸ್ವಪ್ನ ಬುಕ್ ಹೌಸ್ ಕಡೆಗೆ ಒಂದು ಸಂಜೆ ಭೇಟಿ ಕೊಟ್ಟೆವು. ನನಗೇನು ಆ ಹೌಸ್ ಮೊದಲ ಬಾರಿ ಏನಲ್ಲಾ. ಆದರೆ ಅಲ್ಲಿ ಕಳೆವ ಪ್ರತಿ ಕ್ಷಣವೂ ಅಮೂಲ್ಯ. ಅಲ್ಲಿ ಸಿಗುವ ಶಾಂತಿ ನಿಜಕ್ಕೂ ಪ್ರತಿ ಒಬ್ಬರೂ ಅನುಭವಿಸುವಂತದ್ದು. ಅಲ್ಲಿರುವಷ್ಟು ಸಮಯವೂ ಬೇರೊಂದು ಪ್ರಪಂಚ, ಬೇರಯದ್ದೇ ವಾತಾವರಣ.

ಹೀಗೆ ಮೈಸೂರಿನಲ್ಲಿ ಇನ್ನಷ್ಟು ಸ್ಥಳಗಳನ್ನು ನೋಡಿ, ಒಂದಷ್ಟು ನೆಮ್ಮದಿ ನನ್ನ ಮನಸ್ಸಿನಲ್ಲಿ ಜಾಗ ಪಡೆದಿದ್ದವು. ಬೆಂಗಳೂರಿನ ಅತಿ ಎತ್ತರದ ಕಟ್ಟಡಗಳ ಜೊತೆಗೆ ಬದುಕಿಗಾಗಿ ಗುದ್ದಾಡ ಬೇಕಾದರೆ ಒಂದಿಷ್ಟು ತಾಳ್ಮೆ ಬಹಳ ಮುಖ್ಯ. ಈ ನನ್ನ ಮೈಸೂರು ಒಡನಾಟದ ನೆಮ್ಮದಿ, ಆ ತಾಳ್ಮೆಯ ಚೀಲವನ್ನು ಸ್ವಲ್ಪಮಟ್ಟಿಗೆ ಆದರೂ ಭದ್ರ ಪಡಿಸುತ್ತದೆ ಎನ್ನುವುದು ನನ್ನ ಚಿಂತನೆ ಹಾಗು ನನ್ನ ಅನುಭವ.

ಮಾರನೆಯ ದಿನ ನಾನು ಮಧ್ಯಾಹ್ನದ ವೇಳೆ ರೈಲಿನಲ್ಲಿ ತುಂಬಾ ದಿನಗಳ ನಂತರ ಬೆಂಗಳೂರು ಬರುವ ಸಮಯವಾಗಿತ್ತು.‌ ರೈಲಿನಲ್ಲಿ ಕಿಟಕಿಯ ಬದಿ ಕೂತಾಗ ಅದೇನೋ‌ ಹರ್ಷ, ಒಂದೊಳ್ಳೆಯ ಭಾವನೆ.‌ ಓಡುವ ಭೋಗಿಯ ಕಿಟಕಿಯಿಂದಾಚೆ ಕಾಣುವ ಮರ ಗಿಡಗಳು, ಹೊಸ ಊರು ಹಾಗೆಯೇ ಹೊಲ ಗದ್ದೆಯಲ್ಲಿ ಕೆಲಸ ಮಾಡುತ್ತಾ ಅವರ ಪ್ರಪಂಚದಲ್ಲಿ ಮಗ್ನರಾಗಿದ್ದವರೆಲ್ಲರೂ ಒಂದೇ ಭಾರಿ ಈಚೆ ಯಿಂದ ಆಚೆ ಹಾದು ಹೋಗುವುದನ್ನೆಲ್ಲ ನನಗೆ ಪರಿಚಯಿಸುವ ಕಿಟಕಿಯನ್ನು ಹೊಗಳುತ್ತಾ ಕುಳಿತರೆ…‌ಈಗಲೇ ಮತ್ತೆ ರೈಲು ಪ್ರಯಾಣ ಬೇಕೆನಿಸುತ್ತದೆ.

ಈ ಕಥೆ ಹಾಗಿರಲಿ, ನಾನಿಲ್ಲಿ ಬಹುಮುಖ್ಯವಾಗಿ ಹೇಳಲು ಹೊರಟಿರುವುದು ನನ್ನ ಮೈಸೂರು ಭೇಟಿಯನ್ನಲ್ಲ. ಬದಲಾಗಿ ಒಂದು ಪುಸ್ತಕದಿಂದಾದ ಬದಲಾವಣೆ. ಬದಲಾವಣೆ ಬೇಕೆಂದು ಅರಚಿಕೊಳ್ಳುವ ನಾವು, ನಮ್ಮಿಂದಾದ ಬದಲಾವಣೆಯನ್ಮು ಗಮನಿಸುವುದಿಲ್ಲ. ಸ್ವಲ್ಪ ದೂರದ ವರೆಗೂ ಕಿಟಕಿಯಿಂದಾಚೆಗೆ ಕಾಣುವ ಪ್ರಕೃತಿ ಜಗತ್ತನ್ನು ಸವಿದ ನಾನು ನಂತರ ಗಮನಿಸಿದ್ದು ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮುದ್ದಾದ ಒಂದು ಪುಟ್ಟ ಹುಡುಗಿ ಮತ್ತು ಆ ಹುಡುಗಿಯ ತಂದೆಯನ್ನು. ಆ ಪುಟ್ಟ ಹುಡುಗಿ ಅಪ್ಪನಿಂದ  ಮೊಬೈಲ್ ಪಡೆದು ಅದೇನೋ ಗೇಮ್ ಅನ್ನು ಆಡಲು ಶುರುಮಾಡಿದಳು. ಅಲ್ಲಿ ಬರುವ ಚಿತ್ರಗಳು ಹಾಗು ಬದಲಾಗುವ ಮ್ಯೂಸಿಕ್ ಗೆ ತಲೆ ಆಡಿಸುತ್ತಾ, ತುಂಬಾ ಖುಷಿ ಖುಷಿಯಾಗಿ ಇರುವ ತನ್ನ ಮಗಳನ್ನು ನೋಡಿದ ತಂದೆಯ ಮುಖದಲ್ಲೂ‌ ನಗು ಮೂಡಿತ್ತು.

ರೈಲು ಸ್ವಲ್ಪ ದೂರ ಸಾಗಿದ ನಂತರ, ನಾನು ಹಿಂದಿನ ದಿನ ಬುಕ್ ಹೌಸ್ ನಲ್ಲಿ‌ ಕೊಂಡುಕೊಂಡಿದ್ದ ಡಾ. ಕೆ. ಶಿವರಾಮ ಕಾರಂತರ “ಬಾಳ್ವೇಯೇ ಬೆಳಕು” ಪುಸ್ತಕವನ್ನು ತೆಗೆದು ಓದಲು ಶುರುಮಾಡಿದೆ. ಮೊಬೈಲ್ ನಲ್ಲಿ‌ ಆಟ ವಾಡುತ್ತಿದ್ದ ಆ ಪುಟ್ಟಿ, ಮೊದಲ ಬಾರಿಗೆ ನನ್ನ ಕೈನಲ್ಲಿದ್ದ ಪುಸ್ತಕವನ್ನೂ, ನನ್ನನ್ನೂ ನೋಡುವುದು, ಮತ್ತೆ ಮೊಬೈಲ್ ನಲ್ಲಿ ಆಟ ಆಡುವುದನ್ನು ಮಾಡುತ್ತಿದ್ದಳು. ನಾನು ಪುಸ್ತಕದ ಪುಟ ತಿರುವಿದಂತೆಲ್ಲಾ ಆ ಮಗುವಿನ ಪೂರ್ಣ ನೋಟ ನನ್ನ ಪುಸ್ತಕದ ಮೇಲೆಯೇ ಇತ್ತು.‌ ನಿಧಾನವಾಗಿ ಆ ಪುಟ್ಟ ಹುಡುಗಿ ಮೊಬೈಲ್ ಕಡೆಗೆ ನೋಡುವುದನ್ನು‌‌ ಕಡಿಮೆ ಮಾಡಿ, ನಾನು ಮತ್ತೆರಡು‌ ಪುಟ ತಿರುವಷ್ಟರಲ್ಲಿ ಆಕೆ ಮೊಬೈಲ್ ಅನ್ನು ಅಪ್ಪನಿಗೆ ಕೊಟ್ಟು, ತನ್ನ ಪುಟ್ಟ ಬ್ಯಾಗ್ ಅನ್ನು ಹಿಡಿದು ಏನನ್ನೋ ಹುಡುಕುವುದನ್ನು ನೋಡಿದೆ. ಏನಿರಬಹುದು ಅಂದುಕೊಳ್ಳುತಾ ಆ‌ ಕಡೆ ನೋಡದೇ ಸುಮ್ಮನೆ ನಾನು‌ ನನ್ನ ಪುಸ್ತಕವನ್ನೇ ನೋಡುತ್ತಾ ಕೂತೆ.‌ ಆ‌ ಮಗು ತನ್ನ ಪುಸ್ತಕವನ್ನು ಹೊರಗೆ ತೆಗೆದು ಪೆನ್ಸಿಲ್ ಹಿಡಿದು ಬರೆಯಲು ಶುರು‌ ಮಾಡಿದಳು. ನನ್ನ ಕಡೆ ತಿರುಗಿ ನಗುತ್ತಲೇ ಅಪ್ಪನಿಗೆ ತನ್ನ ಪುಸ್ತಕವನ್ನು ತೋರಿಸಿದಳು.‌ಆ ತಂದೆಗೆ ಅದೆಷ್ಟು ಖುಷಿ ಎಂದರೆ, ಆ ಮಗುವನ್ನು ತಬ್ಬಿ ಹಿಡಿದು, ಮಗುವಿನ ಕೈ ಹಿಡಿದ ಅಪ್ಪ ಅಕ್ಷರಗಳನ್ನು ಕಳಿಸುತ್ತಾ ಬರೆಸಲು ಶುರುಮಾಡಿದರು.

ಇಲ್ಲಿ ಮೊಬೈಲ್ ಮಾಯವಾಗಿತ್ತು. ಸಮಯ ವ್ಯರ್ಥ ಆಗುವ ಗೇಮ್ ಕೂಡ ಎಲ್ಲೋ ಅಡಗಿತ್ತು. ತಂದೆಗೆ ಸಂತೋಷವಾಗಿತ್ತು.‌ ಮಗುವಿಗೆ ಪುಸ್ತಕದ ನೆನಪಾಗಿತ್ತು. ಇದೆಲ್ಲವನ್ನೂ ಅಲ್ಲೇ ಪಕ್ಕದಲ್ಲಿದ್ದು ಕಣ್ತುಂಬಿಕೊಳ್ಳುತ್ತಿದ್ದ ನನಗೆ….. ‌ಹಿಂದಿನ ದಿನ ಈ ಪುಸ್ತಕ ಕೊಂಡುಕೊಂಡ ಉದ್ದೇಶ ನನಗೇ ಗೊತ್ತಿಲ್ಲದೇ ಆದ ಈ ಬದಲಾವಣೆಯನ್ನು ಪರಿಚಯಿಸಿತ್ತು. ಹಾಗೆಯೇ ಇದೆಲ್ಲವನ್ನೂ ಓದುಗರ ಬಳಿ ಹಂಚಿಕೊಳ್ಳುವ ಆಲೋಚನೆಯೂ ಜೀವ‌ ಪಡೆದಿದ್ದರಿಂದ ಸೃಷ್ಟಿಯಾಗಿದ್ದೇ… “ಆಗಲಿ ಬದಲಾವಣೆ.. ಪುಸ್ತಕದಿಂದ” ಎಂಬ ಈ ಬರಹ.

ಕೊನೆಯಲ್ಲಿ ಈ‌ ಮಾತು, ಆನ್ ಲೈನ್ ಕ್ಲಾಸ್ ಎಂಬ ಹೊಸ ಮಾರ್ಗದಲ್ಲಿ ಪುಸ್ತಕದ ಪರಿಚಯದಿಂದ ವಂಚಿತರಾಗಬೇಡಿ. ಮೊಬೈಲ್ ಒಂದೇ ಪ್ರಪಂಚವೆಂದು ಎಂದಿಗೂ ಅಂದುಕೊಳ್ಳಬೇಡಿ !!

— ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

7 thoughts on “ಆಗಲಿ ಬದಲಾವಣೆ.. ಪುಸ್ತಕದಿಂದ

 1. ಸತ್ಯ
  ಈ ಕಂಪ್ಯೂಟರ್ ಯುಗದಲ್ಲಿ ಪುಸ್ತಕದ ಹವ್ಯಾಸವೇ ಇಲ್ಲವಾಗಿದೆ ನನಗೂ ಸಹ…
  ಮೊದಲ ಬಾರಿಯ ಓದುಗರಿಗೆ ಯಾವ ಕನ್ನಡ ಪುಸ್ತಕವನ್ನು ಸೂಚಿಸುತ್ತೀರಿ….

  Liked by 1 person

 2. ನೀವು ಮೈಸೊರನ್ನು ವರ್ಣಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು ಗೆಳೆಯ _ನಂತರ ನಿಮಗೆ ಅನುಭವವಾದ ರೈಲಿನ ದೃಶ್ಯದ ಸಾಲುಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ಒಂದು ಮುಗುಳ್ನಗೆ ಬೀರಿತು ಗೆಳೆಯ…😊 All_The_Best_Friend_

  Liked by 1 person

  1. ನಿಮ್ಮ ಅಭಿಪ್ರಾಯ ನಿಜಕ್ಕೂ ನನಗೆ ಖುಷಿ ಕೊಟ್ಟಿದೆ.. ‌😊 ನನ್ನ ಬರಹ ನಿಮ್ಮ ಮುಗುಳ್ನಗೆಗೆ ಕಾರಣವಾಗಿದ್ದು ತುಂಬಾ ಸಂತೋಷ ನನಗೆ.. Thank you very much 💐💐

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: