ಹೀಗೊಂದು ಅನುರಾಗ !!(ಭಾಗ – 6)

ಹೀಗೊಂದು ಅನುರಾಗ !!
(Part – 6)

ಸ್ನೇಹಿತರಿಗೆ ಸಂಜಯ್ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸುವಾಗ,‌ ಗೊಂದಲದ‌ ಗೂಡು ನಿರ್ಮಾಣವಾಗಿ… ಆ ಗೂಡಿಗೆ ಗುಬ್ಬಚ್ಚಿ ಆದವಳು ಸ್ನೇಹ.‌ ಎಲ್ಲರಿಗೂ ಸ್ನೇಹಾಳ‌‌‌ ಕುರಿತು ಊಹಿಸಲಾಗದ ಹಾಗೂ ಉತ್ತರವೇ ಇರದ ಪ್ರಶ್ನೆಗಳು‌ ಉದ್ಭವಿಸಿದವು.‌‌ ಸಂಜಯ್ ಹೇಳಿದ ಹಾಗೆ ಆ ರಾತ್ರಿ ಅವನಿಗೆ ಸ್ನೇಹ ಸಿಕ್ಕಿದ್ದು ಆ ಕಾಡಿನ ಪಕ್ಕದ ಜಾತ್ರೆಯ ಊರಿನಲ್ಲಿ.

ಸಂಜಯ್ ತನ್ನ ಸ್ನೇಹಿತರಿಗೆ ಎಲ್ಲವನ್ನೂ ಹೀಗೆ ವಿವರಿಸಲು ಶುರುಮಾಡಿದನು. “ಅವಳ ಮುಖವನ್ನು ನೋಡಲಾಗದೆ, ಅವಳು ಧರಿಸಿದ ಬಟ್ಟೆಯನ್ನಷ್ಟೇ ನೆನಪಿನಲ್ಲಿಟ್ಟುಕೊಂಡ  ಕಾರಣ, ಅವಳಿಗಿಂತ ಮೊದಲೇ ಹಾಸ್ಟೆಲ್ ಗೇಟ್ ಬಳಿ‌ ಹೋಗಿ ಅವಳು ಯಾರೆಂದು ತಿಳಿಯಲು ವೇಗವಾಗಿ ಬರುತ್ತಿದ್ದೆ. ಜಾತ್ರೆಯ ರಸ್ತೆಯಲ್ಲಿ ಜನಗಳ ಜೊತೆ ವಾಹನಗಳ ಸಂಖ್ಯೆ ಅತೀ ಹೆಚ್ಚಾಗಿದ್ದರಿಂದ, ತಡವಾದರೆ ಈ ಬಾರಿಯೂ ಅವಳು ತಪ್ಪಿ ಹೋಗ ಬಹುದೆಂದು ಅಲ್ಲೇ ರಸ್ತೆಯ ಪಕ್ಕದಲ್ಲಿರುವ ಅಡ್ಡ ಹಾದಿಯ ಹಿಡಿದೆ. ಬೇಗ ಬರಲೆಂದು ಆ ಕಾಡಿನ ದಾರಿಯಲ್ಲಿ ಹೊರಟಿದ್ದೆ. ಅದೊಂದು ಕಿರಿದಾದ ಮತ್ತು ಬೈಕ್ ಹೋಗಲು ಜಾಗ ಇರುವ ಹಾದಿ ಆದರೂ, ಸ್ವಲ್ಪ ದೂರದವರೆಗೂ ಯಾವುದೇ ಅಳುಕಿಲ್ಲದೇ ಹೋಗುತ್ತಿರುವಾಗ, ಹಿಂದೆ ಇಂದ ಇನ್ನೊಂದು ಬೈಕ್ ವೇಗವಾಗಿ ಬರುತ್ತಾ ಅತಿಯಾದ ಹಾರ್ನ್ ಮಾಡಿ ನನಗೆ ಬೈಕ್ ನಿಲ್ಲಿಸುವಂತೆ ಕೂಗಿ ಕೊಳ್ಳುತ್ತಿರುವುದು ಹಾಗೂ ಏನೋ ದೊಡ್ಡ  ತಪ್ಪು ನಡೆದಂತೆ ಜೋರಾಗಿ ಕೂಗುತ್ತಿರುವುದು ಕೇಳಿಸಿತು. ಈ ವೇಳೆಯಲ್ಲಿ ಬೈಕ್ ನಿಲ್ಲಿಸಿದರೆ ಏನಾದರೂ ತೊಂದರೆ ಆಗಬಹುದೆಂದು, ನಿಲ್ಲಿಸದೇ ಮುಂದೆ ಸಾಗಿದೆ‌. ಅಷ್ಟರಲ್ಲಿ ಇಬ್ಬರೂ ಆ ಭಯಾನಕ ಕಾಡಿನಲ್ಲಿ ಬಹುದೂರ ಬಂದಿದ್ದೆವು. ಅವನ ಕೂಗಿನ ಮಧ್ಯೆ, ‘ಆ ಆ ಆ ಉಂ, ಉಂಗುರ‌.. ಉಂಗುರವನ್ನು’ ಎಂಬ ವಾಕ್ಯ ಕೇಳಿಸಿ ತಕ್ಷಣವೇ ಬೈಕ್ ನಿಲ್ಲಿಸಿದೆ‌. ಅವನೂ ಬೈಕ್ ನಿಲ್ಲಿಸಿ, ನನ್ನ ಬಳಿ ಬಂದು ಆ ಉಂಗುರದ ಹಿಂದೆ ಎಂದಿಗೂ ಹೋಗಬೇಡ, ಅದು ನಿನಗೆ ಬೇರೆ ಲೋಕದ ಪರಿಚಯ ಮಾಡಿಸದೆ ಬಿಡದು !! ಎಂದು ಹೇಳುತ್ತಾ ವಿಚಿತ್ರವಾಗಿ ವರ್ತಿಸಿದನು.

ನನಗೆ ಅವನ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ತಿಳಿಯಲಾಗದೇ, ಅವನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನನ್ನಲ್ಲಿದ್ದ ಉಂಗುರವನ್ನು ಎತ್ತಿಕೊಂಡು ಇವನು ಹೇಳುತ್ತಿರುವ ಈ ಉಂಗುರದ ಹಿಂದಿನ ಕಥೆ ಏನು ??  ನಿಜವೇ ಅಥವಾ ಉಂಗುರವನ್ನು ಕದಿಯಲು ಸುಳ್ಳು ಸೃಷ್ಟಿಸುತ್ತಿದ್ದಾನೆಯೇ ?? ಎಂದು ಉಂಗುರ ಹಿಡಿದು ನಾನು ನೋಡುತ್ತಿರುವಾಗ.. ಕಳ್ಳನು ಉಂಗುರವನ್ನು ನನ್ನ ಕೈನಿಂದ ಕಸಿದು ನನ್ನನ್ನು ಪಕ್ಕಕೆ ದೂಡಿ, ನಾನು ಏಳುವಷ್ಟರಲ್ಲಿ ಅಲ್ಲಿಂದ ವೇಗವಾಗಿ ಬೈಕ್ ನಲ್ಲಿ ಹೊರಟನು‌‌. ಮೇಲೆದ್ದ ನಾನು ಅಷ್ಟೇ ವೇಗದಲ್ಲಿ ಹಿಂಬಾಲಿಸುವಾಗ ಅವನು ನಿಧಾನವಾಗಿ ನನ್ನಿಂದ ದೂರವಾಗುತ್ತಾ ಹೋದನು.‌ ಕತ್ತಲೆಯಲ್ಲಿ ನನಗೆ ಅವನು ಹೋದ ದಾರಿ ಮರೆಯಾಗಿ, ಅವನ ಹಿಂಬಾಲಿಸಲು ಹೋಗಿ ನಾನೇ ದಾರಿ ಕಾಣದೇ ಎಲ್ಲೆಲ್ಲೋ ಹೋಗುತ್ತಿದ್ದೆ. ಹೀಗೆ ದಾರಿ ಕಾಣದೇ ದಿಕ್ಕು ತಪ್ಪಿದಾಗ ಅಲ್ಲೊಂದು ಮೂಲೆಯಲ್ಲಿ ವಾಹನಗಳು ಹೋಗುತ್ತಿರುವುದು ಕಾಣಿಸಿ ಆಕಡೆ ಬೈಕ್ ತಿರುಗಿಸಿದೆ. ರಸ್ತೆ ಸಮೀಪಿಸುವಾಗ ತಿಳಿಯಿತು, ಅದು ಜಾತ್ರೆಯ ಸಮೀಪದ ಅದೇ ದಾರಿಯಲ್ಲಿ ಬರುವ ಊರು. ಅಂಗಡಿಗಳು ಜನಗಳು ಜೊತೆಗೆ ಜಾತ್ರೆಯ ವಾತಾವರಣ ಇಲ್ಲಿಯೂ ಹಬ್ಬಿತ್ತು. ಬೈಕ್ ನಿಲ್ಲಿಸಿ ಟೀ ಕುಡಿಯಲು ಅಂಗಡಿ ಬಳಿ ಹೋಗುತ್ತಿರುವಾಗ,  ಆಶ್ಚರ್ಯ ಎಂಬಂತೆ ನಾ ನೋಡಿದ್ದ ಆ ಬಟ್ಟೆ ಧರಿಸಿದ್ದ ಹುಡುಗಿ ಒಬ್ಬಳು ಗಾಬರಿಯಿಂದ ನಿಂತಿದನ್ನು ಗಮನಿಸಿದೆ. ಅವಳನ್ನು ಕಂಡ ನಾನು ಉಂಗುರದ ಕಳ್ಳನನ್ನು ಹಿಂಬಾಲಿಸುವ ಹಾದಿಯನ್ನೇ ಮರೆತು ಹೋದೆ. ಆದರೂ ಹಿಂದಿನ ಈ ಎಲ್ಲಾ ಘಟನೆಗಳಿಂದ ಕಾಣದ ಅವಳನ್ನು ಕಾಣುವ ಬಯಕೆ ಸ್ವಲ್ಪ ತಣಿದಿತ್ತು‌. ಅವಳನ್ನು ಗಮನಿಸುತ್ತಾ ಅವಳ ಬಳಿ ಹೋಗಿ ವಿಚಾರಿಸಲು ಯತ್ನಿಸಿದಾಗ, ಅವಳು ಆಚೆ ಬದಿ ತಿರುಗಿ ಕೈಯಲ್ಲಿದ್ದ ಆ ಪುಸ್ತಕವನ್ನು ಮರೆಮಾಚುತ್ತಾ ‌ತಲೆ ಮೇಲೆತ್ತದೇ ನಾನು ಹತ್ತಿರ ಹೋಗಿದ್ದೂ ಗೊತ್ತಿಲ್ಲದ ಹಾಗೆ ನಿಂತಳು. ನನಗೆ ಅವಳ ಬಳಿ‌ ಹೋಗುತ್ತಿದ್ದಂತೆ‌ಯೇ, ಮೊದಲೇ ಕುತೂಹಲ ವಿದ್ದ ಪುಸ್ತಕ ಮತ್ತು ಉಂಗುರದ ನೆನಪಾಗಿ ಅವಳನ್ನು ನೋಡಿದೆ. ಅವಳು ಕೈನಲ್ಲಿ ಆ ಪುಸ್ತಕ ಹಿಡಿದಿದ್ದಳು, ಆದರೆ ಉಂಗುರ ಅವಳ ಕೈ ಬೆರಳಲ್ಲಿ ಇರಲಿಲ್ಲ. ಆಗ ನನಗೆ ನಾನು ಹುಡುಕಿದ ಅವಳೇ ಇವಳೆಂದು ಅರಿವಾಯಿತು. ನಾನು ಮಾತನಾಡಿಸಲು ಪ್ರಯತ್ನಿಸಿದರೂ ಅವಳು ನನ್ನ ಕಡೆ ಗಮ‌ನ‌ ಕೊಡಲಿಲ್ಲ‌‌. ಮುಖ್ಯ ರಸ್ತೆಯ ಬದಿಯಲ್ಲೇ ಇದ್ದ ಆ ಜಾತ್ರೆಯ ದಾರಿಯಲ್ಲಿ ಕತ್ತಲಾಗಿದ್ದರೂ ಕತ್ತಲು ಕರಗುವಷ್ಟು, ವಾಹನಗಳ ಹಾಗೂ ಬೀದಿ ದೀಪಗಳ ಬೆಳಕು ಮಿಂಚುತ್ತಿತ್ತು. ಮುಂಜಾವು ಸಮೀಪಿಸುವಷ್ಟು ಸಮಯ ವಾಗಿತ್ತು. ಜನರು ಹಿಂದೆ‌ ಮುಂದೆ ಓಡಾಡುತ್ತಲೇ ಇದ್ದರು. ಅವಳ ಪಕ್ಕದಲ್ಲೇ ನಿಂತ ನಾನು ನನ್ನನ್ನು ಪರಿಚಯಿಸಿಕೊಂಡು, ನಾನು ಅವಳನ್ನು ಗುರುತಿಸಿದ್ದನ್ನೂ ಹಾಗೂ ಅವಳಿಗಾಗಿ ಹುಡುಕಿದ್ದನ್ನೂ.. ಎಲ್ಲವನ್ನೂ ಅವಳ‌ ಬಳಿ ಹೇಳಿಕೊಂಡೆ‌.

ಮೊದಲನೇ ದಿನ‌ ಲೈಬ್ರರಿಯಲ್ಲಿ ಪುಸ್ತಕ ಸಿಕ್ಕಿದ್ದು, ನಂತರ ಅವಳ ಉಂಗುರ ನೋಡಿದ್ದು, ಹಾಗೆಯೇ ಅವಳಿಗಾಗಿ ಹುಡುಕಿದ್ದು, ಕೊನೆಗೊಂದು ದಿನ ಜಾತ್ರೆಯಲ್ಲಿ ಅವಳ ಉಂಗುರವನ್ನು ಹಿಡಿದ ಕಳ್ಳ ಓಡಿ ಬಂದಿದ್ದು, ಹಾಗೂ ನಂತರ ಕಳ್ಳನು ನನ್ನ ಹಿಂಬಾಲಿಸಿ ಉಂಗುರ ವನ್ನು ಕದ್ದೊಯ್ದಿದ್ದು… ಹೀಗೆ ನಾ ಅವಳ ಬಳಿ ವಿವರಿಸುತ್ತಿರುವಾಗ, ಉಂಗುರದ ವಿಷಯ ಅವಳ ಕಿವಿಗೆ ಬಿದ್ದಕೂಡಲೇ, ಅವಳು ನನ್ನ ಕಡೆ ತಿರುಗಿ ಸ್ವಲ್ಪ ಸಮಾಧಾನ ಮಾಡಿಕೊಂಡು, ನಗುತ್ತಲೇ.. ನಾನು ಸ್ನೇಹಾ,, ಎನ್ನುತ್ತಲೇ ಅವಳ ಪರಿಚಯ ಮಾಡಿಕೊಟ್ಟು ನನ್ನ ಮಾತಿಗೆ ದನಿಗೂಡಿಸಿದಳು. ಆ ಉಂಗುರ ನನಗೆ ತುಂಬಾನೆ ಮುಖ್ಯ ಮತ್ತು ನಾನು ಆ ಉಂಗುರ ಕದ್ದ ಕಳ್ಳನನ್ನು ಹಿಂಬಾಲಿಸಲೆಂದೇ ಇಲ್ಲಿಯವರೆಗೂ ಬಂದೆ‌. ಕಳ್ಳ ಇಲ್ಲಿ ದಾರಿ ಮಧ್ಯೆ ಸಿಗಬಹುದೇನೋ ಎಂದು ಇಲ್ಲಿ ನಿಂತು ಬಂದು ಹೋಗುವ ಎಲ್ಲರನ್ನೂ ನೋಡುತ್ತಿರುವುದಾಗಿ ಹೇಳಿದಳು. ಜೊತೆಗೆ ಇದನ್ನೂ ಹೇಳಿದಳು, ಲೈಬ್ರರಿಯಲ್ಲಿ ನೀವು ನೋಡಿದ ಪುಸ್ತಕ ನನ್ನದೇ ಹಾಗೂ ಅದರಲ್ಲಿನ ಬರಹಗಳೂ ನನ್ನದೇ ಎಂದು ತನ್ನ ಕೈನಲ್ಲಿದ್ದ ಪುಸ್ತಕವನ್ನು ನೋಡುತ್ತಾ ಹೇಳಿದಳು. ನನಗೆ ನನ್ನ ಪುಸ್ತಕ ಬೇಕಾಗಿತ್ತು, ನಾನು ಲೈಬ್ರರಿಯಲ್ಲಿ ಗೊತ್ತಾಗದೇ ಮರೆತು ಬಿಟ್ಟೆ, ನಂತರ ಊರಿಗೆ ಹೋಗಿ ಕೆಲವು ದಿನಗಳ ನಂತರ ಮರಳಿ ಬಂದು ಲೈಬ್ರರಿಯಲ್ಲಿ ಪುಸ್ತಕವನ್ನು ಹುಡುಕುತ್ತಿರುವಾಗ ನಿಮ್ಮ ಟೇಬಲ್ ಬಳಿ ಆ ಪುಸ್ತಕ ಕಂಡೆನು. ನೀವು ಅದನ್ನು ಹಿಡಿದು ಮಲಗಿದ್ದನ್ನು ನಾನು ಸರಿಯಾಗಿ ಗಮನಿಸಲಿಲ್ಲ. ನನಗೆ ಆ ಪುಸ್ತಕ ಮಾತ್ರವೇ ಮುಖ್ಯವಾಗಿತ್ತು, ಅದರಿಂದ ಅದನ್ನು ನಿಮ್ಮಿಂದ ಎಳೆದುಕೊಂಡು ನೀವು ಯಾರು ಎಂಬುದನ್ನೂ ನೋಡದೆ ಅಲ್ಲಿಂದ ಹೊರಟೆ ಎಂದಳು‌. ನಾನು ಈ ಪುಸ್ತಕವನ್ನು ಎಲ್ಲೇ ಹೋದರೂ ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಎಂದಳು. ಜಾತ್ರೆಯಲ್ಲಿ ನಾನು ಸ್ನೇಹಿತೆಯ ಜೊತೆ ಆಚೆ ಈಚೆ ನೋಡುತ್ತಾ ನಡೆಯುವಾಗ ಆ ಕಳ್ಳನು ನನ್ನ ಕೈಯಿಂದ ಉಂಗುರವನ್ನು ಎಳೆದುಕೊಂಡು ಏನೋ ಒಂದು ವಿಚಿತ್ರವೆಂಬಂತೆ ಆ ಉಂಗುರವನ್ನು ಬಿಗಿಯಾಗಿ ಹಿಡಿದು ಭಯದಿಂದಲೇ ಅಲ್ಲಿಂದ ಓಡಿ ಬರುತ್ತಿರುವಾಗ ನಿಮಗೆ ಡಿಕ್ಕಿ ಯಾಗಿ.. ನಂತರ ಇಷ್ಟೆಲ್ಲಾ ಆಯಿತು ಎಂದಳು.

ನಾವಿಬ್ಬರೂ ಯೋಚಿಸಿದೆವು, ಏಕೆ ಈ ಉಂಗುರದ ಹಿಂದೆ ಕಳ್ಳನು ಹೀಗೆ ಬಿದ್ದಿದ್ದಾನೆಂದು. ಸ್ನೇಹ ನನ್ನನ್ನು ಕೇಳಿಕೊಂಡಳು, ಆ ಉಂಗುರ ನನಗೆ ಮಾತ್ರವಲ್ಲ, ನನ್ನ ಕುಟುಂಬದವರಿಗೂ ತುಂಬಾನೆ ಮುಖ್ಯ. ನಾನು ಈಗ ಉಂಗುರದ ಬಗ್ಗೆ ಏನೂ ಹೇಳಲಾರೆ ಆದರೆ ಮತ್ತೆ ನಾವು ಕಳ್ಳ ನನ್ನು ಹುಡುಕಿ ಉಂಗುರವನ್ನು ಹೇಗಾದರು ಪಡೆಯಬೇಕು ಎಂದಳು. ನನ್ನ ಸಹಾಯವನ್ನೂ ಕೇಳಿದಳು. ನನಗೆ ಮತ್ತೆ ಕಳ್ಳನನ್ನು ಹುಡುಕಿ ಕಾಡಿನ ಕಡೆಗೆ ಹೋಗುವ ಮನಸ್ಸಿಲ್ಲದಿದ್ದರೂ, ಅವಳಿಗೆ ಬೇಸರ ಪಡಿಸಲು ಮನಸ್ಸಾಗಲಿಲ್ಲ. ಅದಾಗಲೇ ಬೆಳಗಾಗುವ ಸಮಯ ಆಗುತ್ತಿದ್ದರಿಂದ ನಾನು ಕತ್ತಲೆಯಲ್ಲಿ ಮತ್ತೆ ಕಾಡಿನೊಳಗೆ ಸಿಕ್ಕಿ ಹಾಕಿಕೊಳ್ಳುವ ಸನ್ನಿವೇಶ ಬರುವುದಿಲ್ಲ, ಎಂದುಕೊಳ್ಳುತ್ತಾ ಕಳ್ಳ ನನ್ನು ಹುಡುಕಿ ಬೈಕ್ ನಲ್ಲಿ ಅವಳ ಜೊತೆಗೇ ಕಾಡಿನ ಕಡೆ ತುಸು ದೂರ ಹೋದಾಗ, ನನ್ನ ಯೋಚನೆ ತಲೆ ಕೆಳಗಾಯಿತು‌‌. ಕತ್ತಲು ಬೆಳಕು ಹೀಗೆ ಭಯಾನಕ ವಿಚಿತ್ರಗಳ ಜೊತೆ ಇಬ್ಬರೂ ದಾರಿ ತಪ್ಪಿದ್ದಲ್ಲದೇ,  ಆ ದಿನ ಪೂರ್ತಿ ಅಲ್ಲೇ ಹೊರಬರುವ ದಾರಿ ಹುಡುಕುತ್ತಲೇ ಕಾಲ ಕಳೆದೆವು. ಆ ದಾರಿ ಹುಡುಕುವ ಹೋರಾಟದಲ್ಲೇ ಅವಳ ಪುಸ್ತಕವೂ ಕಳೆದು ಹೋಯಿತು. ಕತ್ತಲಾಗಿದ್ದು ಹಗಲು ಬಂದಿದ್ದು ಸಂಜೆಯಾಗಿದ್ದು ಇದ್ಯಾವುದೂ ತಿಳಿಯದಷ್ಟು ಕಂಗೆಟ್ಟಿದ್ದೆವು. ಹೀಗೇ ಹೊರಬರುವ ದಾರಿ ಹುಡುಕುವಾಗ……….
ನೀವೆಲ್ಲರೂ ನನಗೆ ಆ ಕತ್ತಲೆಯ ಕಾಡಿನೊಳಗೆ ಎದುರಾದಿರಿ… ಹೀಗೆ ನಮ್ಮ ಬೇಟಿ ಆಗಿದ್ದು…” ಎಂದು ಸಂಜಯ್ ಹಾಸ್ಟೆಲ್ ನಲ್ಲಿ ತನ್ನ ಸ್ನೇಹಿತರಿಗೆ ವಿವರಿಸಿದನು‌.

ಎಲ್ಲವನ್ನೂ ಆಲಿಸಿದ ನಂತರ, ಸಂಜಯ್ ಹಾಗೂ ಅವನ ಸ್ನೇಹಿತರಿಗೆ ಭಯ ಹುಟ್ಟಿಸಿದ್ದು, ಉತ್ತರ ಸಿಗದೇ ಉಳಿದಿದ್ದು.. “ಸಂಜಯ್ ನ ರೂಪದಲ್ಲಿ ಹಾಸ್ಟೆಲ್ ಸಮೀಪಿಸಿ, ಉಂಗುರವನ್ನು ಪಡೆದು.. ನಮ್ಮನ್ನು ಕಾಡಿನೊಳಗೆ ಕರೆದೊಯ್ದಿದ್ದು ಯಾರು ?? ಎಂಬುದು‌. ಈವಾಗಿನ ಕಾಲದಲ್ಲಿ ಒಬ್ಬರ ರೂಪದಲ್ಲಿ ಇನ್ನೊಬ್ಬರ ಬರುವುದು ಅಂದರೆ ಹೇಗೆ ಸಾಧ್ಯ ?? ಇದರಲ್ಲೇನೋ ಇದೆ ಎಂದು ಸ್ನೇಹಿತರು ಯೋಚಿಸಲು ಪ್ರಾರಂಭಿಸಿದರು. ಎಲ್ಲರ ಮನಸ್ಸಲ್ಲೂ ಸಂಜಯ್ ಸುಳ್ಳು ಹೇಳುತ್ತಿದ್ದಾನೆಂದು ಅವನ ಮೇಲೆಯೇ ಅನುಮಾನ ಶುರುವಾಯಿತು. ಆದರೂ ಅದನ್ನು ನಂಬಲು ಅವರು ಸಿದ್ದವಿರಲಿಲ್ಲ. ಸ್ನೇಹಿತರ ಮೌನವನ್ನು ಗಮನಿಸಿದ ಸಂಜಯ್, ಬೇಜಾರಿನಿಂದಲೇ ಮಾತು ಆರಂಭಿಸಿದನು. ನಾನು ಎಲ್ಲವನ್ನೂ ನಿಮಗೆ ತಿಳಿಸಿದ್ದೇನೆ. ನಾನು ಸ್ನೇಹಾಳ ಜೊತೆಗೇ ಇದ್ದೇ. ನಾನು ಹಾಸ್ಟೆಲ್ ಗೆ ಬಂದಿರಲಿಲ್ಲ ಮತ್ತು ನಿಮ್ಮನ್ನು ಯಾರೋ‌ ದಾರಿ ತಪ್ಪಿಸಲು ನನ್ನ ರೂಪದಲ್ಲಿ ಬಂದಿರಬಹುದು ಎಂದನು. ಮೂರು ವರ್ಷದಿಂದಲೂ ಜೊತೆಗೇ ಇದ್ದವರು ನಾವು, ನಿನ್ನ ರೂಪದಲ್ಲಿ ಇನ್ನೊಬ್ಬ ಬಂದರೆ ಅದು ತಿಳಿಯಲು ಆಗದಷ್ಟು ಮೂರ್ಖರು ನಾವಲ್ಲ ಎಂದು ಒಬ್ಬ ಸ್ನೇಹಿತನು ಹೇಳಿದಾಗ, ಉಳಿದವರು ಮಾತು ಆರಂಭಿಸಿ, ಇದರಲ್ಲಿ ಏನೋ ಅಡಗಿದೆ !! ನಾವು ಇದರ ಹಿಂದಿನ ಸತ್ಯವನ್ನು ಹುಡುಕಲೇ ಬೇಕು ಅಥವಾ ಆಗಿದ್ದನ್ನೆಲ್ಲಾ ಮರೆತು ನಾವು ಮುಂದೆ ನಡೆಯಬೇಕು ಎಂದರು‌.

ಸಂಜಯ್ ಮಾತ್ರ ಇಲ್ಲಿಗೇ ಈ ವಿಷಯವನ್ನು ಮರೆತು ಬಿಡುವುದನ್ನು ಒಪ್ಪಲಿಲ್ಲ. ಈ ಭಯಾನಕತೆಯಲ್ಲಿನ ವಿಚಿತ್ರ ಏನೆಂಬುದನ್ನು ನಾನು ತಿಳಿದುಕೊಳ್ಳಲು ನಿರ್ಧರಿಸಲಾಗಿದೆ ಎಂದನು. ಕಳ್ಳನು ಸಾಯುವಾಗ ಉಂಗುರ ತೋರಿಸಿ ಏನನ್ನೋ ಹೇಳಲು ಪ್ರಯತ್ನಿಸಿದ್ದನ್ನು ಸ್ನೇಹಿತರಿಗೆ ನೆನಪಿಸಿದ ಸಂಜಯ್, ಒಂದು ಜೀವ ಸಾಯುವಾಗಲೂ ತನ್ನ ಕೊನೆ ಆಸೆಯನ್ನೂ ಹೇಳದೇ, ಈ ಉಂಗುರವನ್ನು ತೋರಿಸಿ ಏನೋ ಹೇಳಲು ಹೊರಟಿದ್ದನು ಎಂದರೆ, ಇದರಲ್ಲೇನೋ ರಹಸ್ಯ ಅಡಗಿದೆ. ನಾವಿದನ್ನು ಮರೆತು ಬಿಡುವುದು ಸರಿಯಲ್ಲ ಎಂದು ಸ್ನೇಹಿತರೆಲ್ಲರಿಗೆ ಹೇಳಿದನು.  ಸಂಜಯ್ ನಿಗೆ ಇಲ್ಲಿ ನನ್ನ ರೂಪದಲ್ಲಿ ಇನ್ನೊಬ್ಬರು ಬರುವುದೆಂದರೆ ಅದು ನಿಜವಾಗಿಯೂ ಇನ್ನೇನೋ ದೊಡ್ಡ ಶಕ್ತಿಯೇ ಇದೆ ಎಂಬುದು ತಿಳಿದಿತ್ತು.

ಉಂಗುರ ಸ್ನೇಹಾಳ ಕೈಯಿಂದ ಕಳೆದುಹೋದ ಮೇಲೆ, ಇಷ್ಟೆಲ್ಲಾ ಉತ್ತರ ಸಿಗದ ಘಟನೆಗಳು ಆಗಿ, ಕೊನೆಗೆ ಉಂಗುರ ಸ್ನೇಹಾಳ ಕೈ ಸೇರಿದೆ..!!
ಇಲ್ಲಿ……..‌
ಸ್ನೇಹಿತರಿಗೆ ತಾವು ಕಳೆದುಕೊಂಡ ಸಂಜಯ್ ಸಿಕ್ಕರೂ, ಅವನ‌ ಮೇಲೆಯೇ ಅನುಮಾನ ಶುರುವಾಗಿದೆ ???
ಸಂಜಯ್ ಗೆ, ತಾನು ಹುಡುಕುತ್ತಿದ್ದ ಸ್ನೇಹ ಸಿಕ್ಕಿದ್ದರೂ  ಅವಳೇ ಇದಕ್ಕೆಲ್ಲಾ ಕಾರಣ ಆಗಿರಬಹುದೇನೋ ಎಂಬ ಪ್ರಶ್ನೆ ಎದ್ದಿದೆ ???

(ಮುಂದುವರೆಯುತ್ತದೆ..)

— ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: