ಹೀಗೊಂದು ಅನುರಾಗ !!(ಭಾಗ – 8)

ಹೀಗೊಂದು ಅನುರಾಗ !!
(Part – 8)

ಸ್ನೇಹ ತನಗೆ ಒಂದು ಮಾತನ್ನೂ ಹೇಳದೆ ಹೀಗೇಕೆ ಊರಿಗೆ ಹೋದಳೆಂದು ಸಂಜಯ್ ಬೇಸರಗೊಂಡನು. ಎಷ್ಟೇ ಕಾಲ್ ಮಾಡಿದರೂ ಅದು ಸ್ನೇಹಾಳ ಮೊಬೈಲ್ಗೆ ತಲುಪಲಿಲ್ಲ. ಅವಳಿಗೆ ಪರಿಚಯ ಇರುವ ಎಲ್ಲರ ಬಳಿ ವಿಚಾರಿಸಿದರೂ… ಅವಳ ಬಗ್ಗೆ, ಅವಳ ಮನೆಯ ಬಗ್ಗೆ  ಯಾರೊಬ್ಬರಿಗೂ ಏನೂ ಗೊತ್ತಿರಲಿಲ್ಲ‌. ಮಾರನೆಯ ದಿನ‌‌ ಕಾಲೇಜಿನ ದಾಖಲೆಯಲ್ಲಿ ಸ್ನೇಹಾಳ ಊರಿನ ವಿವರವನ್ನು ಹಾಗೂ ಅವಳ ತಂದೆಯ ಹೆಸರನ್ನು ಸಂಜಯ್ ಪಡೆದುಕೊಂಡ.‌ ಕಾಲೇಜ್ ಮುಗಿಯಲು ಇನ್ನೂ   ನಾಲ್ಕೈದು ದಿನ ಇರುವಾಗಲೇ ಸಂಜಯ್ ತನ್ನ ಬಟ್ಟೆಗಳನ್ನೆಲ್ಲಾ ತುಂಬಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ನೇಹಿತರು, ಯಾವ ಕಡೆಗೆ ಪಯಣ ?? ಎಂದು ಕೇಳಿದಾಗ.. ಸಂಜಯ್ ನಡೆದದನ್ನು ವಿವರಿಸಿ ಅವಳ ಊರಿಗೆ ಹೋಗುವುದಾಗಿ ತಿಳಿಸಿದ.

ಸ್ನೇಹಿತರು ಊರು ಯಾವುದೆಂದು ಕೇಳಿದಾಗ, “ಕತ್ತಲೆಕಲ್ಲುಗುಡ್ಡ” ಎಂದು ಹೇಳಿದನು. ಅಲ್ಲೇ ಇದ್ದ ಸ್ನೇಹಿತರು ಇಂಟರ್ನೆಟ್ ನಲ್ಲಿ ಎಷ್ಟೇ ಹುಡುಕಿದರೂ‌ ಕತ್ತಲೆಕಲ್ಲುಗುಡ್ಡ ಎಂಬ ಹೆಸರಿನಲ್ಲಿ ಯಾವ ಊರೂ ಸಿಗಲಿಲ್ಲ. ‌ಇದನ್ನು ಸಂಜಯ್ ಗೆ ಹೇಳಿದಾಗ, ನನಗೂ ಆ ಊರಿನ ಬಗ್ಗೆ ಅಷ್ಟೇನು ಗೊತ್ತಿಲ್ಲ ಆದರೆ ಕತ್ತಲೆಕಲ್ಲುಗುಡ್ಡ ಶಿವಮೊಗ್ಗದ ತೀರ್ಥಹಳ್ಳಿಯ ಸಮೀಪ‌ ಎಂದು ಅವಳ ಕಾಲೇಜಿನ‌ ದಾಖಲೆಯಲ್ಲಿ ತಿಳಿಯಿತು ಎಂದನು. ಮೈಸೂರಿನ ಹುಡುಗನಾಗಿದ್ದ ಸಂಜಯ್ ಮಲೆನಾಡಿನ ಕಡೆಗೆ ಎಂದೂ ಬಂದವನಲ್ಲ. ಸ್ನೇಹಿತರು ಸಂಜಯ್ ಗೆ ಈ ದಾರಿಯಲ್ಲಿ ಹೋಗುವ ಮೊದಲು‌ ಮತ್ತೊಮ್ಮೆ ಯೋಚಿಸು ಎಂದರು. ನಮ್ಮ ಅಜ್ಜನ ಕಡೆಯವರ ಮನೆಯೊಂದು ಶಿವಮೊಗ್ಗದ ಸಮೀಪದಲ್ಲಿ ಎಲ್ಲೋ ಇದೆ, ನಾನು ಅಲ್ಲೇ ಇದ್ದು ಆನಂತರ ಕತ್ತಲೆಕಲ್ಲುಗುಡ್ಡದ ಕಡೆಗೆ ಹೊರಡುವೆ ಹಾಗೂ ಏನೇ ತೊಂದರೆ ಆದರೂ ನಿಮಗೆ ತಿಳಿಸುತ್ತೇನೆ ಎಂದು ಹೇಳಿದ ಸಂಜಯ್,  ಆ ರಾತ್ರಿಯೇ ಬಸ್ ನಲ್ಲಿ ಕಾಲೇಜು ಇದ್ದ ನಗರವಾದ ಬೆಳ್ತಂಗಡಿಯಿಂದ ಹೊರಟನು.

ಬೆಳಗಾಗುವಷ್ಟರಲ್ಲಿ ಶಿವಮೊಗ್ಗ ಸೇರಿದ ಸಂಜಯ್, ಸಾಗರ ಸಮೀಪದ ಅವರ ಅಜ್ಜನ ಸಂಬಂಧಿಕರ ಮನೆಯನ್ನು ಹುಡುಕಿ ತಲುಪಿದಾಗ ಸಂಜೆ ಯಾಗಿತ್ತು.‌ ಅಲ್ಲಿಯೂ ಯಾರೊಬ್ಬರಿಗೂ ಕತ್ತಲೆಕಲ್ಲುಗುಡ್ಡದ ಬಗ್ಗೆ ತಿಳಿದಿರಲಿಲ್ಲ. ಊಟ ಮಾಡಿ ಮಲಗಿದ ಸಂಜಯ್ ನ ತಲೆಯಲ್ಲಿ ತಾನು ಮಾರನೆಯ ದಿನ ಕತ್ತಲೆಕಲ್ಲುಗುಡ್ಡವನ್ನು ಹುಡುಕುವ ಯೋಚನೆಯ ಜೊತೆಗೆ, ಸ್ನೇಹಾಳನ್ನು ನೋಡಬೇಕೆನ್ನುವ ಆತುರವು ಅವನಿಗಿತ್ತು.‌ ಸಂಜಯ್ ಅದಾಗಲೇ ಅಂದುಕೊಂಡಿದ್ದನು, ಆ ಉಂಗುರ ಆ ಪುಸ್ತಕ ಆ ಕಳ್ಳನ ಸಾವು ಮತ್ತು ತಾನು ಹಾಗು ತನ್ನ ಸ್ನೇಹಿತರು ಕಾಡಿನಲ್ಲಿ ಅನುಭವಿಸಿದ ಎಲ್ಲಾ ವಿಸ್ಮಯಗಳಿಗೂ ಮತ್ತು ದಿಢೀರನೆ ಮನೆಗೆ ಹೊರಟು ಹೋದ ಸ್ನೇಹಾಳಿಗೂ‌‌ ಏನೋ‌ ಸಂಬಂಧವಿದೆ ಎಂಬುದನ್ನು ನಿರ್ಧರಿಸಿದ್ದನು. ಇಷ್ಟೆಲ್ಲಾ ತೊಂದರೆ ಎದುರಿಸಲು‌ ಸಂಜಯ್ ಹೊರಟಿದ್ದ ಇನ್ನೊಂದು ಕಾರಣವೇ ಅವನಿಗೆ ಸ್ನೇಹ ಇಷ್ಟವಾಗಿದ್ದು, ಹಾಗೆಯೇ ಅವಳು ಅವನಲ್ಲಿ ಕೊನೆಯ ಭಾರಿ ಮಾತನಾಡಿ ಅವನಿಗೆ ಕೊಟ್ಟು ಹೋದ ಡೈರಿಯಿಂದಾಗಿ ಅವಳು ಮತ್ತೆ ಕಾಲೇಜಿಗೆ ವಾಪಸ್ಸಾಗುವುದು ಅನುಮಾನ ಎಂಬುವುದು ಅವನಿಗೆ ಅನಿಸತೊಡಗಿತ್ತು. ರಾತ್ರಿ ಪೂರ್ತಿ ಮತ್ತೆ ಮತ್ತೆ ಅವಳ ಮೊಬೈಲ್ ಗೆ ಕಾಲ್ ಮಾಡುತ್ತಲೇ ಇದ್ದರೂ ಯಾವ ಪ್ರಯೋಜನವೂ ಆಗಲಿಲ್ಲ.

ಬೆಳಗ್ಗೆ ಸೂರ್ಯ ಕಾಣಿಸುವ ಮೊದಲೇ ಬೇರೊಬ್ಬರಿಂದ  ಬೈಕ್‌ ಪಡೆದ ಸಂಜಯ್, ಸಾಗರದಿಂದ ಕತ್ತಲೆಕಲ್ಲುಗುಡ್ಡವನ್ನು  ಹುಡುಕುವ ಸಲುವಾಗಿ ತೀರ್ಥಹಳ್ಳಿಯ ಕಡೆಗೆ ಹೊರಟನು.‌ ತಾನು‌ ಹೊರಟಿರುವ ದಾರಿ ತನ್ನನ್ನು ನುಂಗಬಹುದು ಎಂಬ ಸ್ವಲ್ಪ ಮಟ್ಟಿಗಿನ ಆಲೋಚನೆಯೂ ಅವನಿಗೆ ಇರಲಿಲ್ಲ. ಬರುವ ದಾರಿಯಲ್ಲಿ‌ ಒಂದೆರಡು ಕಡೆಯ ರಸ್ತೆ ಬದಿಯ ಚಹಾ ಅಂಗಡಿಗಳಲ್ಲಿ ಕತ್ತಲೆಕಲ್ಲುಗುಡ್ಡದ ಕುರಿತು ಕೇಳಿದಾಗ, ಅವರೆಲ್ಲರದ್ದೂ ಒಂದೇ ಉತ್ತರ… ನಾವು ಈ ಊರಿನ ಹೆಸರನ್ನೇ ನಮ್ಮ ಸುತ್ತಲಿನಲ್ಲಿ ಕೇಳಿಲ್ಲ ಎಂಬುದಾಗಿತ್ತು. ಎಲ್ಲರಿಗೂ ತಿಳಿಯದ ಈ ಊರು ನಿಜವಾಗಿಯೂ ಇರುವುದು ಸಾಧ್ಯವೇ ??? ಇದ್ದರೂ ಅದು ಯಾಕೆ ಯಾರೊಬ್ಬರಿಗೂ ಗೊತ್ತಿಲ್ಲ ?? ಏಕೆ ಎಲ್ಲಿಯೂ ಆ ಊರಿನ ಬಗ್ಗೆ ದಾಖಲಾಗಿಲ್ಲ ?? ಎಂದು ಸಾವಿರ ಪ್ರಶ್ನೆಗಳನ್ನು ಹೊತ್ತ ಸಂಜಯ್…. ನಿಧಾನವಾಗಿ ಬೈಕ್ ನಲ್ಲಿ ಕತ್ತಲೆಕಲ್ಲುಗುಡ್ಡವನ್ನು ಹುಡುಕುತ್ತಾ “ಭೂತಕಾಲದ ವಿಸ್ಮಯಗಳನ್ನು ಚಿತ್ರ ವಿಚಿತ್ರವಾಗಿ ತನ್ನೊಳಗೆ ಹುದುಗಿಟ್ಟುಕೊಂಡ ಆ ಊರಿನ ಕಡೆಗೆ” ಸಾಗಿದನು !!

(ಮುಂದುವರೆಯುತ್ತದೆ…)

—- ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

6 thoughts on “ಹೀಗೊಂದು ಅನುರಾಗ !!(ಭಾಗ – 8)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: