ಹೀಗೊಂದು ಅನುರಾಗ !!(ಭಾಗ – 7)

ಹೀಗೊಂದು ಅನುರಾಗ !!
(Part – 7)

ಎಲ್ಲಾ ಪ್ರಶ್ನೆಗಳು ಎಲ್ಲರಲ್ಲಿಯೂ ಬೂದಿ ಮುಚ್ಚಿದ ಕೆಂಡದಂತೆ ಉಳಿದು ಹೋಗಿದೆ. ರಾತ್ರಿ ಚಂದ್ರನ ನಂತರ, ಸೂರ್ಯನ ಬೆಳಕು.. ಆ ಬೆಳಕು ಕಳೆದು ಸಂಜೆ ಸಮೀಪಿಸುವ ಹೊತ್ತಿಗೆ.. ಆ ದಿನದ ಕೆಲಸಗಳು ಆಗಲೇಬೇಕು.‌ ಹೀಗೆ ಕಾಲೇಜ್, ಓದು ಹಾಗೂ ಇನ್ನಿತರ ಚಟುವಟಿಕೆಗಳನ್ನು ಪಕ್ಕದಲ್ಲಿಟ್ಟು ಕೆಲವು‌ ದಿನಗಳ ವರೆಗೂ ಸಂಜಯ್ ಹಾಗೂ ಸ್ನೇಹಿತರು‌ ತಲೆ ಕೆಡಿಸಿಕೊಂಡರು. ಆದರೆ ಏನೇ ಪ್ರಯತ್ನ ಪಟ್ಟರೂ ಆದ ವಿಚಾರಗಳ ಕುರಿತು ಯಾವ ಸುಳಿವೂ ಸಿಗಲ್ಲಿಲ್ಲ‌. ಹಲವಾರು ಗೊಂದಲದ ಜೊತೆಗೆ ಸಂಜಯ್ ಸಪ್ಪೆಯಾದರೆ, ಸ್ನೇಹ ಮಾತ್ರ ಆ ಕಡೆ ಉಂಗುರವು ಇಲ್ಲದೆ, ಈ ಕಡೆ ಪುಸ್ತಕವೂ ಸಿಗದೆ ಇದರ ಯೋಚನೆಯಲ್ಲಿಯೇ ಉಳಿದು ಬಿಟ್ಟಳು.

ಆಗಾಗ ಸಂಜಯ್ – ಸ್ನೇಹ ಮತ್ತು ಸ್ನೇಹಿತರು ಒಂದು ಕಡೆ ಸೇರಿ ಆದ ವಿಷಯಗಳ ಬಗ್ಗೆ ಚರ್ಚಿಸುತ್ತಲೇ ಇದ್ದರು. ದಿನಗಳು ಓಡುತ್ತಿದ್ದವು. ಎಲ್ಲರೂ ಕಾಲೇಜ್ ಕಡೆ ಗಮನಕೊಡುತ್ತಾ ಸುಮಾರು ತಿಂಗಳುಗಳೇ ಕಳೆಯಿತು.‌ ಸಂಜಯ್ ಸ್ನೇಹಾಳ ಎದುರು ಒಳ್ಳೆಯ ಸ್ನೇಹಿತನಾಗಿ ಉಳಿದನು. ಆದರೆ ಅವನೊಳಗೆ ಮೊದಲ ದಿನದಿಂದ ಅವಳನ್ನು ಹುಡುಕುವಾಗ ಜೀವ ಪಡೆದಿದ್ದ ಸುಂದರ ಭಾವನೆಗಳನ್ನು ಅವಳೆದುರು ಹೇಳುವ ಅವಕಾಶವೇ ಅವನಿಗೆ ಸಿಗಲಿಲ್ಲ. ಅವಳೂ ಮೊದಲಿನಂತೆ ಇರಲಿಲ್ಲ. ಉಂಗುರ ಮತ್ತು ಪುಸ್ತಕದ ನೆನಪುಗಳಲ್ಲಿ ಇರುತ್ತಿದ್ದಳೇ ಹೊರತು ಸಂಜಯ್ ಕಡೆಗೆ ಗಮನ‌ ಕೊಡಲಿಲ್ಲ. ಅವಳು ಆದಷ್ಟು ಒಂಟಿಯಾಗಿಯೇ ಉಳಿದು ಹೋದಳು.‌ ಆಗಾಗ‌ ಸ್ನೇಹ, ಸಂಜಯ್ ಬಳಿ ಬಂದು ನಾವು ಮತ್ತೆ ಕಾಡಿಗೆ ಹೋಗಿ ಏನಾದರೂ ಉತ್ತರ ಸಿಗುತ್ತಾ ನೋಡೋಣ ಎಂದಾಗಲೆಲ್ಲಾ ಸಂಜಯ್ ಅದಕ್ಕೆ ಒಪ್ಪಲಿಲ್ಲ. ಮತ್ತೆ ಏನಾದರೂ ಅಪಾಯ ಆಗಬಹುದೆಂದು ಸ್ನೇಹಾಳ ಈ ಮಾತನ್ನು ಸಂಜಯ್ ನೆರವೇರಿಸಲಿಲ್ಲ.

ಸಂಜಯ್ ನಿಗೆ ಅವನಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರಿಯದೆ ಅವನನ್ನೇ ಅವನು ನಿಯಂತ್ರಿಸಲಾಗದೇ ಆವಿಯಾಗುತ್ತಾ ದಿನಗಳ ಕಳೆದನು. ಸ್ನೇಹ ಸಿಕ್ಕಿದಾಗಲೆಲ್ಲಾ ಉಂಗುರದ ಬಗ್ಗೆ ಕೇಳುತ್ತಿದ್ದಳೇ ಹೊರತು, ಬೇರೆ ಯಾವ ಮಾತಿಗೂ ಕಿವಿಗೊಡದೇ ಇರುವುದು ಸಂಜಯ್ ಗೆ ಬಹಳ ನೋವುಂಟು ಮಾಡಿತ್ತು. ಅವಳ ಆಸಕ್ತಿ ದಿನೇ ದಿನೇ ಕಡಿಮೆ ಆಗುತ್ತಾ ಹೋಗಿ, ತಿಂಗಳುಗಳು ಉರುಳಿ ಆ ವರ್ಷದ ಕಾಲೇಜ್ ಮುಗಿಯುವ ಅಂಚಿಗೆ ಬಂತು. ಇನ್ನೇನು ಕಾಲೇಜ್ ಮುಗಿಯಲು ಕೊನೆಯ ವಾರ ಇರುವಾಗ, ಸ್ನೇಹ ಸಂಜಯ್ ಬಳಿ ಬಂದು ತನ್ನನ್ನು ಕ್ಷಮಿಸುವಂತೆ ಕೇಳಿದಳು‌…‌ ಅವಳ ಕಣ್ಣುಗಳನ್ನು ಕಣ್ಣೀರು ಆಕ್ರಮಿಸಿರುವುದನ್ನು ಸಂಜಯ್ ಗಮನಿಸಿದರೂ ಏನೂ ಹೇಳದೇ ಮೌನಿಯಾದನು.‌‌ ಸಂಜಯ್ ನಿಗೆ ಸ್ನೇಹ ತಾನು ತಂದಿದ್ದ ಹೊಸ ಡೈರಿಯನ್ನು ಕೊಟ್ಟು, ತನ್ನ ಮನದಾಳದಲ್ಲಿ ನೂರಾರು ನೋವುಗಳನ್ನು ಚಿಲಕ ಹಾಕಿದಂತೆ ಬಚ್ಚಿಟ್ಟು, ಹೊರಗಡೆ ನಗುತ್ತಲೇ‌, ಕಣ್ಣೀರಿನ ಜೊತೆಗೆ ಅಲ್ಲಿಂದ ಹಾಸ್ಟೆಲ್ ಕಡೆಗೆ ಹೆಜ್ಜೆ ಇಟ್ಟಳು. ಮತ್ತಷ್ಟು ಗೊಂದಲದಿಂದ ಸಂಜಯ್, ಈ ಸಂಜೆ ಯಾಕಿಷ್ಟು ಸಪ್ಪೆಯಾಗಿದೆ ಎಂದುಕೊಳ್ಳುತ್ತಲೇ ಹೊಸ ಡೈರಿಯನ್ನು ಹಿಡಿದು ತನ್ನ ರೂಮಿಗೆ ಹೊರಟನು.

ಸ್ನೇಹಾಳಿಗೆ ಸಂಜಯ್ ರಾತ್ರಿ  ಕಾಲ್ ಮಾಡಿದರೂ ಅವಳು ಉತ್ತರಿಸಲಿಲ್ಲ.‌ ಅದು ಹೊಸ ಡೈರಿ ಎಂದು ಭಾವಿಸಿದ ಅವನು, ಅದನ್ನು ತೆರೆದು ನೋಡಲಿಲ್ಲ. ನಾನಿಲ್ಲಿ ಇಷ್ಟೊಂದು ಗೊಂದಲದಲ್ಲಿದ್ದರೂ ನನಗೆ ಸಹಾಯ ಮಾಡದೇ, ನೀನಲ್ಲಿ ತಿಂಗಳಿನ ಬೆಳಕು ಚೆಲ್ಲುತ್ತಾ ಸಮಾಧಾನದಲ್ಲಿ ಇರುವುದು ಎಷ್ಟು ನ್ಯಾಯ..?? ಎಂದು ಬೆಳದಿಂಗಳ ಚಂದಿರನನ್ನು ಕಿಟಕಿಯಿಂದಲೇ ಪ್ರಶ್ನಿಸುತ್ತಾ , ಅವಳು ಕೊಟ್ಟ ಡೈರಿಯನ್ನು ಹಾಸಿಗೆ ಮೇಲೆಯೇ ಇಟ್ಟು ನಿದ್ರೆಗೆ ಜಾರಿದನು…. ನಡುರಾತ್ರಿಯಲ್ಲಿ ಜೋರಾಗಿ ಬೀಸಿದ ಗಾಳಿಗೆ ಸಂಜಯ್ ಎಚ್ಚರಗೊಂಡು ಎದ್ದು, ಪಕ್ಕದಲ್ಲಿ ನೋಡಿದರೆ ??? ಜೋರಾದ ಗಾಳಿಗೆ ಆ ಡೈರಿಯ ಮೊದಲ ಪುಟ ತೆರೆದಿತ್ತು. ಅದನ್ನು ನೋಡಿದವನಿಗೆ ಆಶ್ಚರ್ಯ ಕಾದಿತ್ತು. ಅದರಲ್ಲಿ ಹೊಳೆಯುತ್ತಿದ್ದ ಅಕ್ಷರಗಳನ್ನು ನೋಡುತ್ತಲೇ ಸಂಜಯ್ ಗೆ ತಾನು ಮೊದಲ ದಿನ ನೋಡಿದ್ದ ಸ್ನೇಹಾಳ ಮುದ್ದಾದ ಕೈ ಬರಹಗಳು ನೆನಪಾದವು.

ಡೈರಿಯನ್ನು ಓದುತ್ತಲೇ ಸಂಜಯ್ ಬೆವರಿದನು. ಸ್ನೇಹ ಹೀಗೆ ಬರೆದಿದ್ದಳು‌….. “ಸಂಜಯ್, ನಿನಗೆ ನನ್ನ ಬಗ್ಗೆ ಹೆಚ್ಚಿನ ಕಾಳಜಿ ಒಲವು ಭಾವನೆ ಇರುವುದು ಗೊತ್ತಿದ್ದರೂ ನಾನು ನಿನ್ನ ಕಡೆ ಇಷ್ಟು ತಿಂಗಳು ಗಮನಕೊಡಲಿಲ್ಲ. ಈಗಲೂ ಅದರ ಬಗ್ಗೆ ಮಾತನಾಡುವಷ್ಟು ನೆಮ್ಮದಿ ನನ್ನಲ್ಲಿಲ್ಲ. ನಾನು ಆ ಉಂಗುರ ಮತ್ತು ಪುಸ್ತಕ ಇಲ್ಲದೇ ಮನೆಗೆ ಹೋದರೆ ಅಲ್ಲಿ ಏನಾಗಬಹುದೆಂಬ ಊಹೆ ಕೂಡ ನನ್ನಿಂದ ಮಾಡಲು ಸಾಧ್ಯವಿಲ್ಲ‌. ನಾನು ಈ ಒಂದು ತಿಂಗಳ ರಜೆಯ ನಂತರ ಮತ್ತೆ ಕಾಲೇಜ್ ಗೆ ಬಂದರೆ, ನಿನ್ನ ಭಾವನೆಗಳ ಬಂಡಿಯಲ್ಲಿ ಬಂದು ಕೂರುವೆ……!!” ಇದನ್ನು ಓದುತ್ತಿದ್ದ ಸಂಜಯ್ ಮುಂದಿನ ಪುಟ ತಿರುವಿದರೆ ಅಲ್ಲೇನೂ‌ ಇರಲಿಲ್ಲ. ಬೆಳಕಾಗುತ್ತಲೇ ಸಂಜಯ್ ಅವಳ ಹಾಸ್ಟೆಲ್ ಬಳಿ‌ ಓಡಿ ಹೋಗಿ  ಅವಳ ಬಗ್ಗೆ ವಿಚಾರಿಸಿದಾಗ……  ಮುಂದಿನ ವಾರ ಊರಿಗೆ ಹೋಗುತ್ತೇನೆ ಎನ್ನುತ್ತಿದ್ದ ಸ್ನೇಹ, ನಿನ್ನೆ ರಾತ್ರಿಯೇ ಊರಿಗೆ ಹೊರಟಳು ಎಂದು ಅವಳ ಸ್ನೇಹಿತೆ ಸಂಜಯ್ ಗೆ ತಿಳಿಸಿದಳು.

(ಮುಂದುವರೆಯುತ್ತದೆ…)

—- ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: