
ಬಿಸಿಲಿನ ಆಚೆಗೆ ಸಂಜೆಯ ಸಮೀಪದಲ್ಲಿ ನಾಲ್ಕೂ ಜನ ಸ್ನೇಹಿತರು ಕಳೆದುಹೋದ ಸ್ನೇಹಿತನಿಂದಾಗಿ, ಉಂಗುರದ ಸುತ್ತಲೂ ಸುನಾಮಿಯಂತೆ ವೇಗವಾಗಿ ಕೈಮೀರಿ ಹೋಗುತ್ತಿರುವ ಪ್ರಸ್ತುತ ವಿಷಯಗಳೆಲ್ಲವೂ ವಿಷವೆಂಬಂತೆ ಭಾಸವಾಗುತ್ತಿರುವಾಗ.. ತಲೆ ಮೇಲೆ ಕೈ ಹೊತ್ತು ಕುಳಿತರೆ ಸಮಯ ಸರಿಯಿವುದೇ ವಿನಃ ಸಂಗತಿ ಬದಲಾಗುವುದಿಲ್ಲ ಎಂದು ಎಲ್ಲರೂ ಆಸ್ಪತ್ರೆಯಿಂದ ಜೀವವಿಲ್ಲದ ಕಳ್ಳ ನನ್ನು ಕೊನೆಯ ಭಾರಿ ನೋಡಿ ಹೊರಬಂದು ದಿಕ್ಕುತೋಚದೆ ಬೈಕ್ ಏರಿ ಸೇರದ ಜಾಗವೇ ತಿಳಿಯದಾಗಿ ಸುಮ್ಮನೇ ಹೊರಟರು.
ಹಾಸ್ಟೆಲ್ ಸಮೀಪ ಹೋಗುತ್ತಿದಂತೆಯೇ ಇವರ ಕಣ್ಣಿಗೆ ಬಿದ್ದಿದ್ದು ಸ್ನೇಹಿತನ ಬೈಕ್. ತಡ ಮಾಡದೇ ಹತ್ತಿರ ಹೋಗಿ ನೋಡಿದರೆ ಚಕ್ರದ ಸುತ್ತಲೂ ಮೆತ್ತಿಕೊಂಡು ಗಟ್ಟಿಯಾಗಿದ್ದ ಕೆಸರಿನ ಜೊತೆಗೆ ಬೈಕ್ ಸಂಪೂರ್ಣವಾಗಿ ಗಿಡದ ಎಲೆಗಳು ಬಳ್ಳಿಗಳು ಹಾಗೂ ಮಣ್ಣಿನಿಂದ ತುಂಬಿ ಹೋಗಿತ್ತು. ಆತನ ದಾರಿಯಲ್ಲಿ ಏನೋ ಅವಘಡ ಆಗಿದೆ ಎಂಬುದನ್ನು ಈ ಬೈಕ್ ಕೂಗಿ ಹೇಳುವಂತಿತ್ತು. ಗಾಬರಿಯ ನಡುವೆಯೂ ಸ್ನೇಹಿತನು ಬಂದಿರಬಹುದೆಂದು ನಿಟ್ಟುಸಿರು ಬಿಟ್ಟು ಹಾಸ್ಟೆಲ್ ರೂಮಿನ ಕಡೆಗೆ ಓಡಿದರು.
ಬಾಗಿಲು ತೆರೆದು ನೋಡಿದರೆ, ಸ್ನೇಹಿತನು ಚೇರ್ ಮೇಲೆ ಒರಗಿಕೊಂಡು ನಿದ್ರೆಗೆ ಜಾರಿದ್ದನು. ತುಂಬಾನೆ ಆಯಾಸಗೊಂಡ ಅವನನ್ನು ಮುಟ್ಟಿ ಎಬ್ಬಿಸಿದಾಗ, ಭಯ ಪಟ್ಟಂತೆ ಧಕ್ಕನೆ ಎದ್ದು ನಿಂತು ನಾಲ್ಕೂ ಜನ ಸ್ನೇಹಿತರನ್ನು ನೋಡಿದರೂ ಭಯ ಕಮ್ಮಿಯಾಗದೇ ನಡುಗುತ್ತಲೇ ಇದ್ದನು. ಇವನನ್ನು ನೋಡಿದ ಖುಷಿಯ ಜೊತೆ ಸ್ನೇಹಿತನು ಮರಳಿ ಬಂದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತಾ ನಡುಗುತ್ತಿದ್ದ ಅವನನ್ನು ಬಿಗಿಯಾಗಿ ಅಪ್ಪಿಕೊಂಡು, ನಂತರ ನಿಧಾನವಾಗಿ ಮುಂಜಾವಿನಿಂದಲೂ ನಾವೆಲ್ಲರೂ ನಿನ್ನನ್ನು ಹುಡುಕಲು ಪಟ್ಟ ಪಾಡು ಅನುಭವಿಸದ ಯಾತನೆ ಜೊತೆಗೆ ನಂಬಲಾಗದ ಹಾಗೆ ನಡೆದ ಉಂಗುರದ ವಿಷಯವನ್ನೂ ಹೇಳಿ ಕೊನೆಯಲ್ಲಿ ಕಳ್ಳನು ನಿನ್ನ ಬಳಿಯಿದ್ದ ಉಂಗುರವನ್ನು ನೀಡಿ ಏನೋ ಸನ್ನೆ ಮಾಡುತ್ತಲೇ ಕೊನೆಯುಸಿರೆಳೆದ ಎನ್ನುವ ವಿಚಾರವನ್ನೂ ವಿವರಿಸಿದರು.
ಇದನ್ನೆಲ್ಲಾ ಕೇಳುತ್ತಲೇ ಮತ್ತಷ್ಟು ಗಾಬರಿಗೊಂಡು ರಾತ್ರಿ ನಡೆದದನ್ನೆಲ್ಲಾ ನೆನೆಸಿಕೊಂಡು “ಚಿಂತೆಯಲ್ಲಿ ಮುಳುಗಿದಂತೆ ನಟಿಸಿದನು”. ಸ್ನೇಹಿತರು ಇವನಿಗೆ ರಾತ್ರಿ ಏನಾಯಿತು, ಬೈಕ್ ಯಾಕಷ್ಟು ಮಣ್ಣಾಗಿದೆ ಎಂದು ಉತ್ತರ ಕಂಡುಕೊಳ್ಳುವ ಸಾವಿರ ಪ್ರಶ್ನೆಗಳನ್ನು ಕೇಳುತ್ತಲೇ ಉಂಗುರವನ್ನು ಇವನ ಕೈ ನಲ್ಲಿ ಇಟ್ಟರು. ಹೊಳೆವ ಹೂವಿನಂತಿದ್ದ ಉಂಗುರ, ರಕ್ತದ ಕಲೆಗಳನ್ನು ಹೊತ್ತು ಕೆಂಪಾಗಿ ಕಂಗೊಳಿಸುತ್ತಿತ್ತು. ಉಂಗುರವನ್ನು ಜೋಪಾನವಾಗಿ ಹಿಡಿದುಕೊಂಡು, ನಿಮ್ಮ ಪ್ರಶ್ನೆಗೆ ಉತ್ತರವನ್ನು ತಿಳಿಸುತ್ತೇನೆಂದು ಸ್ನೇಹಿತರನ್ನು ಕರೆದುಕೊಂಡು ರಾತ್ರಿ ಹೋಗಿದ್ದ ಕಾಡಿನ ಕಾಲುಹಾದಿಯ ಕಡೆ ಹೊರಟನು. ಅಲ್ಲಿ ಸಮೀಪಿಸುತ್ತಲೇ ಆ ಕಿರಿದಾದ ಹಾದಿಯಲ್ಲಿ ಮಣ್ಣು ಕೆಸರು ಮುಳ್ಳು ಗಿಡ ಬಳ್ಳಿ ಹೀಗೆ ಕಷ್ಟಕರ ವಾಗಿ ನಿಧಾನವಾಗಿ ಬೈಕನ್ನು ಎಲ್ಲರೂ ಚಲಿಸುತ್ತಲೇ… ಇಲ್ಲಿ ರಾತ್ರಿ ಇವನೊಬ್ಬನೇ ಹೇಗೆ ಬಂದಿರಬಹುದೆಂದು ಯೋಚಿಸುತ್ತಾ ಸಾಗಿದರು. ಮುಂದೆ ಬಹುದೊಡ್ಡ ಮರದ ಹತ್ತಿರ ಹೋದಾಗ ಅದರ ಹಿರಿದಾದ ರೆಂಬೆ ಕೊಂಬೆಗಳ ಕಡೆಗೆ ಗಮನ ಹರಿಸಿ ಆಶ್ಚರ್ಯಗೊಂಡು ಮುಂದೆ ನೋಡುವಷ್ಟರಲ್ಲಿ…. ಅಲ್ಲಿ ತಾವು ಹಿಂಬಾಲಿಸುತ್ತಿದ್ದ ಬೈಕಿನ ಜೊತೆಗೆ ಸ್ನೇಹಿತನು ಕಾಣದಾದನು. ಮುಂದೆ ದಾರಿಯೇ ಇರಲಿಲ್ಲ !!
ಆಕಾಶದ ಒಂದಿಷ್ಟೂ ಬಿಸಿಲು ನೆಲಕ್ಕೆ ತಾಕದ ಹಾಗೆ ಆ ಮರದ ರೆಂಬೆ ಕೊಂಬೆಗಳು ಅದೆಷ್ಟು ಹಬ್ಬಿದ್ದವೆಂದರೆ.. ಅಲ್ಲೇನೋ ಸರಿಯಿಲ್ಲ ಎಂಬುದನ್ನು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನೋಡ ನೋಡುತ್ತಲೇ ನಾಲ್ಕೂ ಜನರು ದಿಕ್ಕೆಟ್ಟು ಹೋದರು. ಕರೆದುಕೊಂಡು ಬಂದವನು ನಿಜಾವಾಗಿಯೂ ಸ್ನೇಹಿತನೋ ಅಥವಾ ಬೇರೆ ಏನೋ ಗೊತ್ತಿರದ ಶಕ್ತಿ ಇರಬೇಕು.. ಎನ್ನುವಷ್ಟು ಭಯಂಕರವಾಗಿತ್ತು ಆ ಮರದ ಸುತ್ತಲಿನ ಜಾಗ. ಮುಂದೆ ಹೋದರೆ ಬದುಕಲು ದಾರಿಯೇ ಇಲ್ಲ ಎಂದು ನಾಲ್ಕು ಜನರು ಗಡಿಬಿಡಿಯಿಂದ ಎರಡೂ ಬೈಕ್ ಅನ್ನು ತಿರುಗಿಸಿ ಬಂದ ಹಾದಿಯಲ್ಲೇ ಹೊರಡಲು ಪ್ರಯತ್ನಿಸಿದರು. ಸ್ವಲ್ಪ ದೂರ ಹಿಂದಿರುಗುವಷ್ಟರಲ್ಲಿ ಕತ್ತಲೆ ಹಬ್ಬಿ ಏನೂ ಕಾಣದಾಯಿತು. ಎಲ್ಲರದ್ದೂ ಹಳೆಯ ಬೈಕ್ ಆಗಿದ್ದರಿಂದ ಅಷ್ಟೇನೂ ಕಾಣದ ಹೆಡ್ ಲೈಟ್ ನಲ್ಲಿಯೇ ಹೋಗುವಾಗ…. ಎದುರುಗಡೆ ಇಂದ ಅತೀ ವೇಗವಾಗಿ ಹೆಚ್ಚು ಶಬ್ದ ಹೊರಹಾಕುತಿದ್ದ ಬೈಕ್ ಒಂದು ಬಂದು ಇವರಿಗೆ ಎದುರಾಗಿ ನಿಂತಿತು. ಇಷ್ಟೆಲ್ಲಾ ಆಗುವಾಗ ಕತ್ತಲೆ ಕರಗಿ ಬೆಳಕು ಸ್ವಲ್ಪವೇ ಹಬ್ಬಿದಾಗ ನಾಲ್ಕೂ ಜನರು ಗಾಬರಿ ಗೊಂಡರು. ಎದುರಿಗೆ ಇದ್ದಿದ್ದು… “ಕಳೆದುಹೋದ ಅವರ ಗೆಳೆಯ, ಹಾಗೂ ಅವನ ಜೊತೆಗೆ ಕತ್ತಲೆಯೂ ಕರಗಿಸುವಂತೆ ಹೊಳೆವ ಅಲ್ಲೊಬ್ಬಳು ಚೆಲುವೆ, ಬೈಕ್ನಲ್ಲಿ ಅವನ ಹಿಂದೆಯೇ ಇದ್ದಳು…!!”
(ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್