ಹೀಗೊಂದು ಅನುರಾಗ !! (ಭಾಗ – 3)

ಹೀಗೊಂದು ಅನುರಾಗ !! (Part – 3)

ಸ್ವಲ್ಪ ಹೊತ್ತಿನ ನಂತರ ಅವನು ಕಣ್ಣು ಬಿಟ್ಟು ನೋಡಿದರೆ, ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು‌. ಮರುಕ್ಷಣವೇ ಎಲ್ಲವೂ ನೆನಪಾಗಿ ಹೊರಬಂದು ಅಲ್ಲಿದ್ದ ಸ್ನೇಹಿತರಿಗೆ ಧನ್ಯವಾದ ಹೇಳಿ ತಲೆಯಲ್ಲಿದ್ದ ಬ್ಯಾಂಡೇಜ್ ಜೊತೆಗೇ ಆಚೆ ಬಂದು ಬೈಕ್ ಏರಿ ಜಾತ್ರೆಯ ಕಡೆಗೆ ಹೊರಟನು‌‌. ಅದಾಗಲೇ ಜಾತ್ರೆ ಮುಗಿಯುವ ವೇಳೆಗೆ ಬಂದಿತ್ತು. ಆದೆಷ್ಟೇ ಹುಡುಕಿ ನೋಡಿದರೂ ಅವಳು ಕಾಣಲಿಲ್ಲ‌. ಬಸ್ ನಿಲ್ದಾಣದಲ್ಲಿಯೂ ಸಿಗಲಿಲ್ಲ‌, ಹೊರಟ ಬಸ್ ಅಲ್ಲಿಯೂ ಇರಲಿಲ್ಲ.

ಅಷ್ಟರಲ್ಲಿ‌ ಅವನ ಸ್ನೇಹಿತರು ಕಾಲ್ ಮಾಡಿ ಈ ಕೂಡಲೇ ಆಸ್ಪತ್ರೆಯ ಹಾದಿಯಲ್ಲಿ ಬರಲು ಸೂಚಿಸಿದರು‌. ನಿನಗೆ ಬೇಕಾಗಿರುವುದು ನಮ್ಮ ಬಳಿ ಇದೆ ಎಂದಾಗ ಮರೆತ ಉಂಗುರದ ನೆನಪಾಯಿತು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಅರ್ಧ ದಾರಿಯಲ್ಲಿ ನಡೆದು ಬರುತ್ತಿದ್ದ ಸ್ನೇಹಿತರನ್ನು ಕಂಡು ಸಂತೋಷದಿಂದ ಮತ್ತೆ ಮುಜುಗರದಿಂದ ದಯವಿಟ್ಟು ಉಂಗುರವನ್ನು ಕೊಟ್ಟುಬಿಡಿ ಎಂದನು‌. ಸ್ನೇಹಿತರು ಕೊಡದೇ ಏನು ವಿಷಯ ಹೇಳು ಎಂದು ರೇಗಿಸುತ್ತಿರುವಾಗ, ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದನು. ಆಶ್ಚರ್ಯಗೊಂಡ ಸ್ನೇಹಿತರು ಸಂತೋಷದಿಂದ ಉಂಗುರವನ್ನು ಕೊಟ್ಟು, ನೀನು ಆಸ್ಪತ್ರೆಯ ಹಾದಿಯಲ್ಲಿ ಉಂಗುರವನ್ನು ಬಲವಾಗಿ ಹಿಡಿದಿದ್ದನ್ನು ಗಮನಿಸಿದ ನಾವು ನಿನ್ನ ಕೈಯಿಂದ ಬಿಡಿಸಿಕೊಂಡು ಜೋಪಾನವಾಗಿ ಎತ್ತಿಟ್ಟುಕೊಂಡಿರುವುದಾಗಿ ಹೇಳಿದರು. ಸ್ನೇಹಿತರಿಗೆ ಧನ್ಯವಾದ ಹೇಳುತ್ತಾ ಅವಳು ಆಸ್ಪತ್ರೆಗೆ ಬರಲಿಲ್ಲವಾ ಎಂದು ಕೇಳಿದನು. ಈ ವಿಷಯವನ್ನು ನೀನು ನಮಗೆ ಮೊದಲೇ ಹೇಳಿದ್ದರೆ ಅವಳ ಬಗ್ಗೆ ಗಮನ ಹರಿಸುತ್ತಿದ್ದೆವು, ಅಲ್ಲದೇ ನೀನು ಕುಸಿದು ಬಿದ್ದಾಗ ತುಂಬಾ ಜನ ಸೇರಿದ್ದರು. ಹೇಗೋ ಒದ್ದಾಡಿ ನಿನ್ನನ್ನು ಆಸ್ಪತ್ರೆಗೆ ತರುವ ಕಾರ್ಯದಲ್ಲಿ ಅಲ್ಲಿದ್ದವರನ್ನು ಗಮನಿಸಲಿಲ್ಲಾ ಎಂದರು.

ಸ್ನೇಹಿತರು ಊಟಕ್ಕೆಂದು ಹೋಟೆಲ್ ಕಡೆಗೆ ಹೊರಟಾಗ, ಇವನು ಊಟಕ್ಕೆ ಹೋಗಲು ಒಪ್ಪದೇ ಅವಳನ್ನು ಹುಡುಕುತ್ತೇನೆಂದು, ಬೈಕ್ ನಲ್ಲೇ ಆ ರಾತ್ರಿಯಲ್ಲಿ ಅಲ್ಲಿಂದ ಒಬ್ಬನೇ ಹಾಸ್ಟೆಲ್ ಕಡೆಗೆ ಹೊರಟನು. ಜಾತ್ರೆಯ ಕಾರಣ ರಸ್ತೆಯ ತುಂಬೆಲ್ಲಾ ವಾಹನಗಳು ಹೆಚ್ಚಿದ್ದರಿಂದ ಅವನ ದಾರಿ ಸಾಗಲಿಲ್ಲ. ಬೇಗ ಹೋಗಿದ್ದರೆ, ಹಾಸ್ಟೆಲ್ ಗೇಟ್ ನಲ್ಲಿ ನಿಂತು ಅವಳು ಧರಿಸಿದ್ದ ಬಟ್ಟೆಯಿಂದ‌ ಮತ್ತು ಕೈನಲ್ಲಿದ್ದ ಪುಸ್ತಕದಿಂದ ಅವಳನ್ನು ಗುರುತಿಸಬಹುದಿತ್ತು ಅಂದುಕೊಂಡು ಎಷ್ಟೇ ಪ್ರಯತ್ನಿಸಿದರೂ ವಾಹನಗಳ ದಟ್ಟಣೆಯಿಂದ ನಿಧಾನವಾಗಿ ಹೋಗಬೇಕಾಯಿತು‌. ಸ್ವಲ್ಪ ದೂರ ಹೋದ ನಂತರ ಈ ರಸ್ತೆಯಲ್ಲಿ ತಡವಾಗಿ ಹೋದರೆ ಅವಳು ಮತ್ತೆ ಸಿಗುವುದಿಲ್ಲ ಎಂದು ಬೇಗ ಹೋಗುವ ಸಲುವಾಗಿ ಅಲ್ಲೇ ಮುಖ್ಯರಸ್ತೆಯ ಪಕ್ಕದಲ್ಲಿದ್ದ ಚಿಕ್ಕ ಹಾದಿಯ ಕಡೆ ಬೈಕ್ ನಲ್ಲಿ ನಡೆದನು‌. ಕಾಡು ಹಾದಿಯ ಆ ಕಾಲುಹಾದಿಯಲ್ಲಿ ಯಾರೊಬ್ಬರ ಸುಳಿವೂ ಇರಲಿಲ್ಲ‌‌‌. ಯಾವಾಗಲೋ ಸ್ನೇಹಿತರೊಂದಿಗೆ ಮಾತನಾಡುವಾಗ ಇಲ್ಲಿದ್ದ ಇನ್ನೊಂದು ಹಾದಿಯಿಂದಲೂ ಹಾಸ್ಟೆಲ್ ತಲುಪ ಬಹುದೆಂದು ಹೇಳಿದ ಮಾತು ನೆನಪಾಗಿ ಈ ಹಾದಿಯಲ್ಲಿ ಹೊರಟಿದ್ದನು. ಕಗ್ಗತ್ತಲ ಇರುಳಲ್ಲಿ ಅವನ ಬೈಕ್ ನಿಂದ ಬರುವ ಶಬ್ದ ಬಿಟ್ಟರೆ ಬೇರೇನೂ ಅಲ್ಲಿ ಕೇಳಿಸುತ್ತಿರಲಿಲ್ಲ‌.

ಎಲ್ಲಾ ಕಡೆ ಸುತ್ತಾಡಿ ರಾತ್ರಿ ಕಳೆದು ಮುಂಜಾನೆಯ ಆಸುಪಾಸಿನಲ್ಲಿ ಹಾಸ್ಟೆಲ್ ಕಡೆಗೆ ಬಂದ ಸ್ನೇಹಿತರಿಗೆ ಇವನ ನೆನಪಾಗಿ ರೂಮ್ ಕಡೆ ಹೋಗಿ ಬಾಗಿಲು ಬಡಿದಾಗ ಬೀಗ ಇರುವುದು ಕಂಡುಬಂದಿತು‌. ಎಷ್ಟೇ ಕಾಲ್ ಮಾಡಿದರೂ ಕಾಲ್ ಕನೆಕ್ಟ್ ಆಗಲಿಲ್ಲ. ಅಚ್ಚರಿಗೊಂಡು ಅಕ್ಕಪಕ್ಕದ ರೂಮ್ ನಲ್ಲಿ ಇಣುಕಿದಾಗ ಎಲ್ಲೂ ಇವನ ಸುಳಿವು ಇರಲಿಲ್ಲ‌‌‌. ನಾಲ್ಕು ಜನರಲ್ಲಿ ಒಬ್ಬ ಓಡಿ ಹೋಗಿ ಹೊರಗೆ ಬೈಕ್ ಇಲ್ಲದಿರುವುದನ್ನು ಕಂಡು ಗಾಬರಿಯಾದರೆ, ಉಳಿದ ಮೂರು ಜನ ಹಾಸ್ಟೆಲ್ ನ ಎಲ್ಲಾ ದಿಕ್ಕಿನಲ್ಲಿ ಹುಡುಕಿ ಸುಸ್ತಾದರೇ ವಿನಃ ಅವನು ಸಿಗಲಿಲ್ಲ‌. ಇನ್ನೇನು ಬೆಳಕು ಹರಡಬೇಕು ಅಷ್ಟರಲ್ಲಿ ಒಬ್ಬೊಬ್ಬರೇ ಜಾತ್ರೆಯಿಂದ ನಡೆದು ಕೂಗಾಡುತ್ತಾ ಖುಷಿ ಖುಷಿಯಾಗಿ ಹಾಸ್ಟೆಲ್ ಕಡೆ ಬರುತ್ತಿದ್ದರು. ಅವರಲ್ಲೆಲ್ಲೂ ಇವನು ಕಾಣಲಿಲ್ಲ‌. ಗಾಬರಿಗೊಂಡು ಹೊರಗಡೆ ಕಾಲೇಜಿನ ಸುತ್ತಲೂ ಎಲ್ಲಾ ಮೂಲೆಯಲ್ಲಿ ಹುಡುಕಿದರೂ ಅವನು ಅಲ್ಲೆಲ್ಲೂ ಇಲ್ಲ.

ಕತ್ತಲು ಕರಗಿ ಬೆಳಗಾಯಿತು. ಆಗ ತಾನೆ ವಾಟ್ಸಾಪ್ ನಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಜಾತ್ರೆಯಿಂದ ಹಾಸ್ಟೆಲ್ ಬರುವ ದಾರಿಯಲ್ಲಿ ಬೈಕ್ ಒಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಸ್ಥಿತಿ ಗಂಬೀರ ಎಂಬುದಾಗಿತ್ತು.‌ ಇದನ್ನು ಓದಿದ ಸ್ನೇಹಿತರು ದಿಕ್ಕು ತೋಚದೇ ತಡಮಾಡದೇ ಎರಡು ಬೈಕ್ ನಲ್ಲಿ ಜಾತ್ರೆಯ ಕಡೆಗೆ ಹೊರಟರು. ಅವಳು ಮತ್ತು ಅವಳ ಉಂಗುರದ ಪತ್ತೇದಾರಿಯಲ್ಲಿ ಸ್ನೇಹಿತನನ್ನು ಕಳೆದುಕೊಳ್ಳಬೇಕಾಯಿತೇ ಎಂದು ಯೋಚಿಸುತ್ತಾ ಸ್ನೇಹಿತರ ಕಣ್ಣುಗಳು ಒದ್ದೆಯಾದವು‌.

ವೇಗವಾಗಿ ಬೈಕ್ ಸೇತುವೆಯ ಬಳಿ ಹೋಗುತ್ತಿದಂತೆಯೇ ಹಿಂಬದಿಯಲ್ಲಿದ್ದ ಇಬ್ಬರು ಬೇಗನೇ ಕೆಳಗಿಳಿದು ಓಡಿ ಬಂದು ನೋಡುತ್ತಾ………. ನಿಟ್ಟುಸಿರು ಬಿಟ್ಟರು, ಬೈಕ್ ಬೇರೆಯದ್ದಾಗಿತ್ತು‌‌. ಅಲ್ಲೇ ಇದ್ದ ಮತ್ತಿಬ್ಬರು ಸ್ನೇಹಿತರು ಆಸ್ಪತ್ರೆಯ ಕಡೆಗೆ ಹೋದರು‌‌. ಇನ್ನಿಬ್ಬರು ಇವನನ್ನು ಹುಡುಕಲು ಜಾತ್ರೆಯ ಕಡೆ ಹೊರಟರು. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವನ್ನು ದೂರದಿಂದಲೇ ನೋಡಿ, ಸ್ನೇಹಿತನು ಅಲ್ಲಾ ಎಂಬುದು ಗೊತ್ತಾದಾಗ ನಿಧಾನವಾಗಿ ಅವನ ಹತ್ತಿರ ಹೋಗುತ್ತಿದಂತೆಯೇ ಮತ್ತಷ್ಟು ಅಚ್ಚರಿ ಗೊಂಡರು. ಅಲ್ಲಿ ಸಾವು ಬದುಕಿನಲ್ಲಿ ಹೋರಾಡುತ್ತಿದ್ದವನು ಹಿಂದಿನ ರಾತ್ರಿ ಜಾತ್ರೆಯಲ್ಲಿ ಸ್ನೇಹಿತನಿಗೆ ಡಿಕ್ಕಿ ಹೊಡೆದು ಚಾಕು ತೋರಿಸಿ ಉಂಗುರ ಕಸಿದುಕೊಳ್ಳಲು ಬಂದಿದ್ದ ಅದೇ ಕಳ್ಳ. ಆದರೆ ಮತ್ತೆ ಇಲ್ಲಿ ಇಬ್ಬರೂ ಸ್ನೇಹಿತರು ಒಮ್ಮೆಲೇ ಕುಸಿಯುವಂತೆ ಆಘಾತಗೊಂಡಿದ್ದು…….. ಆತನ “ರಕ್ತದ ಕೈನಲ್ಲಿದ್ದ ಅವಳ ಆ ಹೊಳೆವ ಉಂಗುರ”.‌ ಅದೇ ಉಂಗುರ ಹಿಂದಿನ ರಾತ್ರಿ ಸ್ನೇಹಿತನಿಗೆ ಒಪ್ಪಿಸಿದ್ದೆವು, ಆದರೆ ಇದೀಗ ಹೇಗೆ ಈತನ ಕೈಯಲ್ಲಿ ಈ ಸ್ಥಿತಿಯಲ್ಲಿ ಹೇಗೆ ಇದು, ಎಂದು ತೋಚದೇ ಇನ್ನಿಬ್ಬರು ಸ್ನೇಹಿತರಿಗೆ ಕಾಲ್ ಮಾಡಿದಾಗ ಅವರೂ ಓಡಿ ಬರುವಷ್ಟರಲ್ಲಿ ಮಧ್ಯಾನ್ಹ ಆಗಿತ್ತು. ಎಲ್ಲರೂ ಒಮ್ಮೆಲೆ ಭಯದಿಂದ ಒಬ್ಬರನ್ನೊಬ್ಬರು ಕೇಳಿಕೊಂಡರು. ಉಂಗುರದ ಜೊತೆ ಹೋದ ಸ್ನೇಹಿತ ಎಲ್ಲೂ ಸಿಗಲಿಲ್ಲ, ಈಗ ಉಂಗುರ ಕಳ್ಳನ ರಕ್ತದ ಕೈಯಲ್ಲಿ…. ಅಂದರೆ ಇವನೇ ಏನಾದರೂ ಮಾಡಿರಬಹುದಾ ಎಂದು ತಿಳಿದುಕೊಳ್ಳಲು ಅವನ ಹತ್ತಿರ ಹೋದಾಗ, ಕಳ್ಳನೇ ತನ್ನ ಕೈನಲ್ಲಿದ್ದ ಉಂಗುರವನ್ನು ಈ ಸ್ನೇಹಿತರಿಗೆ ತೋರಿಸುತ್ತಾ ಏನೋ ಹೇಳಲು ಪ್ರಯತ್ನ ಪಡುತ್ತಿದ್ದನು‌‌. ಅಲ್ಲದೇ ಕಳ್ಳನು ಈ ನಾಲ್ವರನ್ನು ಹಿಂದಿನ ರಾತ್ರಿಯೇ ನೋಡಿದ್ದರಿಂದ ಇವರೆಲ್ಲವೂ ಸ್ನೇಹಿತರು ಎಂದು ತಿಳಿದಿಕೊಂಡಿದ್ದರಿಂದಲೇ ಅವರಿಗೆ ಏನೋ‌ ಹೇಳಲು ಯತ್ನಿಸಿದ್ದ.

ಕಳ್ಳನು ತನ್ನ ರಕ್ತ ಮುತ್ತಿದ ಕೈನಿಂದಲೇ ಉಂಗುರವನ್ನು ಹಿಡಿದು, ಅಲ್ಲೇ‌ ಇದ್ದ ನಾಲ್ವರ ಕಡೆಗೂ ಉಂಗುರವನ್ನು ತೋರಿಸುತ್ತಾ… ಭಯದಿಂದ ನಡುಗುತ್ತಾ “ಈ.. ಈ.. ಉಂ.. ಉಂಗುರ..ದಿಂದಲೇ…….” ಎನ್ನುವಷ್ಟರಲ್ಲಿ ಪ್ರಾಣಬಿಟ್ಟನು. ಸ್ನೇಹಿತನ ಕುರಿತು ತಿಳಿದುಕೊಳ್ಳಲು ಇದ್ದ ಇವನೂ ಪ್ರಾಣ ಬಿಟ್ಟನಲ್ಲಾ, ಸ್ನೇಹಿತನಿಗೆ ಏನಾಗಿರಬಹುದು ?? ಉಂಗುರ ಕಳ್ಳನ ಕೈಯಲ್ಲಿ ಹೇಗೆ ?? ಎಂದುಕೊಳ್ಳುತ್ತಾ ಅಲ್ಲಿಯೇ ಕುಸಿದು ಸ್ನೇಹಿತರೆಲ್ಲಾ ತಲೆ ಮೇಲೆ ಕೈ ಹೊತ್ತು ಯೋಚಿಸುತ್ತಾ ಕುಳಿತರು. ಅದಾಗಲೇ ಬಿಸಿಲು ಸರಿದು ಸಂಜೆಯಾಗಿತ್ತು.. !!

(ಮುಂದುವರೆಯುತ್ತದೆ..)

— ದೀಕ್ಷಿತ್ ದಾಸ್

Published by Deekshith Das..

ಒಂದು ಬರಹ ಲೇಖನಿಯಿಂದ ಗೀಚಲ್ಪಡುವ ಮೊದಲು, ಬರಹಗಾರನ ಎದೆಯಾಳದ ಕಲ್ಪನೆಯ ಕಡಲಿನಲ್ಲಿ‌.. ಅದಾಗಲೇ ಅಲೆಗಳಂತೆ ಚಿತ್ರಿಸಲ್ಪಟ್ಟರೂ, ಆ ಬರಹವು ಸ್ಪಷ್ಟವಾಗಿ ಗೋಚರಿಸುವುದು ಎದೆಯಾಳದಿಂದ ಜಿಗಿದು ಹರಿತವಾದ ಲೇಖನಿಯ ಕೆಳಗಿರುವ "ಬಿಳಿಯ ಹಾಳೆಯ ಮೇಲೆ.."

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: