
…ಹಿಂದಿರುಗಿ ನೋಡದೆ ಅಲ್ಲಿಂದ ಹೊರಟ ಅವಳನ್ನು ನೋಡುವ ಕುತೂಹಲದಿಂದ ಅವನು ಒಮ್ಮೆಲೆ ಮೇಲೆದ್ದು ಅವಳ ಹಿಂದೆಯೇ ತನ್ನ ಹೆಜ್ಜೆಗಳ ಸದ್ದು ಲೈಬ್ರರಿ ತುಂಬೆಲ್ಲಾ ಪ್ರತಿಧ್ವನಿಸುವಷ್ಟು ವೇಗವಾಗಿ ನಡೆಯುತ್ತಾ ಆಚೆ ಬಂದು ನೋಡಿದರೆ, ಅವಳ ಸುಳಿವೇ ಇರಲಿಲ್ಲ ಅಲ್ಲಿ. ಅದೇ ಕತ್ತಲೆಯಲ್ಲಿ ಬೆಳಗುತ್ತಿದ್ದ ಲೈಟ್ ಬಲ್ಬ್ ಗಳ ಬೆಳಕು ಕಾಣಿಸುತ್ತಿತ್ತೇ ವಿನಃ ಅವಳು ಕಾಣಲಿಲ್ಲ. ಹೊರಗಡೆ ಬಂದು ಕಾಲೇಜಿನ ನಾಲ್ಕೂ ದಿಕ್ಕಿನಲ್ಲಿ ಅದೆಷ್ಟು ಅಲೆದರೂ ಅವನಿಗೆ ಆ ಪುಸ್ತಕದ ಒಡತಿ ಸಿಗಲಿಲ್ಲ.
ಸಪ್ಪೆ ಮನಸ್ಸಿನಿಂದ ಹಾಸ್ಟೆಲ್ ಕಡೆ ಬಂದು ಊಟಕ್ಕೆ ಮೆಸ್ ಕಡೆ ಹೋಗದೇ, ರೂಮ್ ಸೇರಿಕೊಂಡು ಬೆಡ್ ಮೇಲೆ ಒರಗಿದ. ಗೊತ್ತಿಲ್ಲದೇ ಬಂದ ನಿದ್ರೆಯ ಕನಸಿನಲ್ಲಿ ಮತ್ತೆ ಆಕೆ ಪುಸ್ತಕ ಬಿಡಿಸಿಕೊಳ್ಳುವ ವೇಳೆಯಲ್ಲಿ ಆಗ ನೋಡಿದ್ದ ಚೆಂದದ ಕೈಬೆರಳುಗಳು ಕನಸಿನಲ್ಲಿ ಮತ್ತೆ ಎಲ್ಲವನ್ನೂ ನೆನಪಿಸಿದ್ದವು. ಜೊತೆಗೆ ಹೊಳೆವ ಬೆರಳಿನ ಅಂದವನ್ನು ಹೆಚ್ಚಿಸುತ್ತಿದ್ದ “ಅಪರೂಪದ ವಿನ್ಯಾಸದ ಉಂಗುರವನ್ನು” ಗಮನಿಸಿದನು. ಅದೇ ಕ್ಷಣಕ್ಕೆ ಕನಸಿನಿಂದ ಎಚ್ಚೆತ್ತು ದಡಬಡನೆ ಎದ್ದು ನೋಡಿದರೆ, ಇದು ಕನಸು ವಾಸ್ತವವಲ್ಲಾ ಮತ್ತು ಲೈಬ್ರರಿ ಅಲ್ಲ ರೂಮ್ ಎಂದು ಅರಿವಾದ ನಂತರ ನಿದ್ರೆಗೆ ವಿದಾಯ ಹೇಳಿ ಸೂರ್ಯ ಬರುವ ವೇಳೆಗಾಗಿ ಕಿಟಕಿಯ ಬಳಿ ನಿಂತು ಚಂದಿರನ ಚುಡಾಯಿಸುತ್ತಾ ಬೇಗ ಹೋಗಿ ಸೂರ್ಯನ ಕಳಿಸಿಕೊಡು ಎಂದು ಅಂಗಲಾಚುತ್ತಲೇ ಕತ್ತಲೆ ಕರಗಿ ಬೆಳಕು ಮೂಡಿತು. ಸೂರ್ಯನೂ ಬಂದನು ಹಾಗೆಯೇ ಅವಳ ಕಡೆಗೆ ಇವನ ಕುತೂಹಲವೂ ಹೆಚ್ಚಿತು.
ಕಾಲೇಜಿನಲ್ಲಿ ಎದುರು ಸಿಗುವ ಹುಡುಗಿಯರ ಉಂಗುರದ ಕಡೆಗೆ ಗಮನ ಹರಿಸುತ್ತಲೇ ಅದೆಷ್ಟು ಎಡವಿದನೋ ಲೆಕ್ಕವೇ ಇಲ್ಲ. ಇಡುವ ಹೆಜ್ಜೆಯ ಕಡೆಗೂ ಗಮನ ಇರಲಿಲ್ಲ ಹಾಗೆಯೇ ಹೋಗುವ ದಾರಿಯ ಬಗೆಗೂ ತಿಳಿದುಕೊಳ್ಳದೇ ಆ ಉಂಗುರದ ಚೆಲುವೆಯ ಹುಡುಕುವ ಹಾದಿಯಲ್ಲಿ ಯಶಸ್ವಿಯಾಗಲೇ ಇಲ್ಲಾ. ದಿನಗಳು ಕಳೆದವು ವಾರಗಳು ಉರುಳಿದವು ತಿಂಗಳುಗಳೇ ದಾಟಿದವು, ಅದರೆ ಅವಳ ಸುಳಿವು ಇವನಿಗೆ ಸಿಗಲಿಲ್ಲ. ಆಕೆ ಕನಸಿನಲ್ಲೂ ಕಾಣಲಿಲ್ಲ ಲೈಬ್ರರಿಯಲ್ಲೂ ಬರಲಿಲ್ಲ. ಕೊನೆಯಲ್ಲಿ ಅವನಲ್ಲಿ ಉಳಿದಿದ್ದು ಆ ಪುಸ್ತಕ, ಅದರಲ್ಲಿನ ಮುದ್ದಾದ ಕನ್ನಡ ಅಕ್ಷರಗಳು ಮತ್ತು ಕನಸಿನಲ್ಲಿ ಕಂಡ ಉಂಗುರದ ನೆನಪುಗಳು ಮಾತ್ರ.
ಹಲವು ತಿಂಗಳುಗಳ ನಂತರ ಅವನ ಕಾಲೇಜಿಗೆ ಸಮೀಪದ ದೇವಸ್ಥಾನದ ಬಹು ದೊಡ್ಡ ಜಾತ್ರೆಯಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವಾಗ, ಎದುರಿನಿಂದ ವೇಗವಾಗಿ ಓಡಿ ಬಂದ ಒಬ್ಬನು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ತಲೆಯಲ್ಲೂ ರಕ್ತ ಸೋರಲು ಶುರುವಾಯಿತು ಹಾಗೂ ಇಬ್ಬರೂ ಸ್ವಲ್ಪ ಆಚೆ ಈಚೆ ಹೋಗಿ ಬಿದ್ದರು. ಏನಾಗುತ್ತಿದೆ ಎಂದು ಇವನಿಗೆ ಅರಿವಾಗುವಷ್ಟರಲ್ಲಿ ಇಬ್ಬರ ನಡುವೆ ಹಾದಿಯ ಮೇಲೆ ಗುದ್ದಿದವನ ಕೈ ಯಿಂದ ಜಾರಿ ಬಿದ್ದ ಒಂದು ಉಂಗುರ ಹೊಳೆಯಲಾರಂಭಿಸಿತು. ಸ್ವಲ್ಪ ಹತ್ತಿರ ಸಮೀಪಿಸಿ ಕಣ್ಣು ಹಾಯಿಸಿದಾಗ, ಕನಸಿನಲ್ಲಿ ಕಂಡ ಅದೇ ಉಂಗುರ !! ಎಂದು ಅರಿವಾದಾಗ ಸಂತೋಷ ಆಶ್ಚರ್ಯ ಕೋಪ ಎಲ್ಲವೂ ಒಂದೊಂದಾಗಿ ಬಂದು ಮಾತು ಬಾರದೆ ಮೂಖನಾದನು.
ಉಂಗುರವನ್ನು ಎತ್ತಿಕೊಂಡು ಗಾಬರಿಯಿಂದ ಗಮನಿಸುತ್ತಿರುವಾಗಲೇ, ಎದುರಿಗೆ ಬಿದ್ದವನು ಎದ್ದು ಬಂದು ಮುಖಕ್ಕೆ ಮಾಸ್ಕ್ ಧರಿಸಿ ಕೈ ನಲ್ಲಿ ಚಾಕು ಹಿಡಿದು ಉಂಗುರ ಕೊಡು ಎಂದು ಗದರಿಸಿದನು. ಅಷ್ಟರಲ್ಲಿ ಸುತ್ತಲಿದ್ದ ಸ್ನೇಹಿತರು ಮತ್ತು ಜನರನ್ನು ನೋಡಿದ ಕಳ್ಳನು ಅಲ್ಲಿಂದ ಕಾಲ್ಕಿತ್ತನು. ಕೈಯಲ್ಲಿದ್ದ ಉಂಗುರವನ್ನು ನೋಡುತ್ತಾ, ಇದು ಅವಳದೇ ಉಂಗುರ. ಅವಳು ಇಲ್ಲೇ ಎಲ್ಲೋ ಇದ್ದಾಳೆಂದು ಸುತ್ತಲೂ ಮೇಲಕ್ಕೆ ಹಾರುತ್ತಾ ಹುಡುಕುತ್ತಾ ಇರುವಾಗ, ದೂರದಿಂದ ಒಬ್ಬಳು ಕೈನಲ್ಲಿ ಅದೇ ಪುಸ್ತಕ ಹಿಡಿದು ರಾಣಿಯಂತೆ ಸಿಂಗಾರಗೊಂಡು ತನ್ನ ಕಡೆ ಬರುವುದನ್ನು ಗಮನಿಸಿ ತನ್ನ ಇಷ್ಟು ತಿಂಗಳ ಅಲೆದಾಟಕ್ಕೆ ಇಂದು ಉತ್ತರ ಸಿಗುತ್ತಿದೆ, ಇಂದು ಅವಳನ್ನು ನೋಡಬಹುದು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ…. ಅದಾಗಲೇ ತಲೆಯಿಂದ ಹೆಚ್ಚು ರಕ್ತ ಸುರಿಯುತ್ತಿದ್ದರಿಂದ, ಅವಳು ಹತ್ತಿರವಾಗುತ್ತಿದ್ದಂತೆಯೇ ಅವಳನ್ನು ಗುರುತಿಸಲಾಗದಷ್ಟು ಕಣ್ಣೆಲ್ಲಾ ಮಂಜಾಗಿ, ಅಲ್ಲಿಯೇ ಕುಸಿದನು..
(ಮುಂದುವರೆಯುತ್ತದೆ…)
— ದೀಕ್ಷಿತ್ ದಾಸ್
Tumba chenngi ide 👌👌 next episode na bega haaki wait maadtha irtivi
LikeLiked by 1 person
ತುಂಬಾನೆ ಧನ್ಯವಾದಗಳು.. 💐💐
LikeLike